ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಚುನಾವಣೆ| ಸೀಟು ಹಂಚಿಕೆ ಕುರಿತು ನಡ್ಡಾ–ನಿತೀಶ್‌ ಚರ್ಚೆ

ಅಕ್ಟೋಬರ್‌–ನವೆಂಬರ್‌ನಲ್ಲಿ ಬಿಹಾರ ವಿಧಾನಸಭಾ ಚುನಾವಣೆ
Last Updated 12 ಸೆಪ್ಟೆಂಬರ್ 2020, 16:46 IST
ಅಕ್ಷರ ಗಾತ್ರ

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಎನ್‌ಡಿಎ ಮತ್ತು ಮಹಾಮೈತ್ರಿಕೂಟದ ಅಂಗಪಕ್ಷಗಳು ಈಗಾಗಲೇ ಸ್ಥಾನ ಹೊಂದಾಣಿಕೆ ಮಾತುಕತೆಯಲ್ಲಿ ತೊಡಗಿವೆ.

ಬಿಹಾರದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಶನಿವಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರನ್ನು ಭೇಟಿಯಾಗಿ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸಿದ್ದಾರೆ.

ಪಟ್ನಾದ ಏನಿ ಮಾರ್ಗದಲ್ಲಿರುವ ಮುಖ್ಯಮಂತ್ರಿ ಅಧಿಕೃತ ಗೃಹ ಕಚೇರಿಗೆ ಬಂದ ನಡ್ಡಾ ಅವರನ್ನು ನಿತೀಶ್ ಕುಮಾರ್ ಮತ್ತು ಅವರ ಆಪ್ತ ರಾಜೀವ್‌ ರಂಜನ್‌ ಸಿಂಗ್‌ ಅಲಿಯಾಸ್‌ ಲಲನ್‌ ಬರಮಾಡಿಕೊಂಡರು.

ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್ ಮೋದಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಭೂಪೇಂದ್ರ ಯಾದವ್‌, ರಾಜ್ಯ ಘಟಕದ ಅಧ್ಯಕ್ಷ ಸಂಜಯ್‌ ಜೈಸ್ವಾಲ್‌ ಅವರು ನಡ್ಡಾ ಜತೆಗಿದ್ದರು.

ಸೀಟು ಹಂಚಿಕೆ ಕುರಿತು ಜೆಡಿಯು ಮತ್ತು ಬಿಜೆಪಿ ಮುಖಂಡರ ನಡುವೆ ನಡೆದ ಅರ್ಧ ತಾಸು ಮಾತುಕತೆಯ ವಿವರಗಳು ಬಹಿರಂಗವಾಗಿಲ್ಲ. ಎನ್‌ಡಿಎ ಅಂಗಪಕ್ಷಗಳ ಜತೆಗೆ ಸ್ಥಾನ ಹೊಂದಾಣಿಕೆಯ ಜತೆಗೆ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮುಖಂಡ ರಾಂ ವಿಲಾಸ್‌ ಪಾಸ್ವಾನ್‌ ಅವರ ನಿಲುವಿನ ಬಗ್ಗೆಯೂ ಪ್ರಮುಖವಾಗಿ ಚರ್ಚೆಯಾಯಿತು. ನಿತೀಶ್‌ ಮತ್ತು ಪಾಸ್ವಾನ್‌ ನಡುವಿನ ಮುನಿಸನ್ನು ಶಮನಗೊಳಿಸುವ ಹೊಣೆಯನ್ನು ನಡ್ಡಾ ಹೊತ್ತುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಧಾನಸಭೆ ಅವಧಿ ನ.29ರಂದು ಕೊನೆಗೊಳ್ಳಲಿದೆ.

ಲಾಲು–ಸೊರೆನ್‌ ಭೇಟಿ

ರಾಂಚಿ: ರಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರನ್ನು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಕುಮಾರ್‌ ಸೊರೆನ್‌ ಶನಿವಾರ ಭೇಟಿಯಾಗಿ ಒಂದು ಗಂಟೆಗೂ ಹೆಚ್ಚು ರಾಜ್ಯ ರಾಜಕೀಯ ಕುರಿತು ಚರ್ಚಿಸಿದರು. ‘ಆರ್‌ಜೆಡಿ ಮತ್ತು ಜೆಎಂಎಂ ಒಟ್ಟಾಗಿ ಬಿಹಾರ ಚುನಾವಣೆ ಎದುರಿಸಲಿವೆ’ ಎಂದು ಸೊರೆನ್‌ ಸುದ್ದಿಗಾರರಿಗೆ ತಿಳಿಸಿದರು. 12 ಸ್ಥಾನಗಳಿಗೆ ಜೆಎಂಎಂ ಬೇಡಿಕೆ ಇಟ್ಟಿದೆ.

ಕುತೂಹಲ ಮೂಡಿಸಿರುವ ಪಾಸ್ವಾನ್‌ ನಡೆ

ಎನ್‌ಡಿಎ ಮೈತ್ರಿಕೂಡದಲ್ಲಿರುವ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ನಾಯಕ ರಾಂ ವಿಲಾಸ್‌ ಪಾಸ್ವಾನ್‌ ಅವರ ನಡೆ ಕುತೂಹಲ ಮೂಡಿಸಿದೆ.

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಥಾನ ಹೊಂದಾಣಿಕೆಯ ತೀರ್ಮಾನವನ್ನು ತಮ್ಮ ಪುತ್ರ ಚಿರಾಗ್‌ ಪಾಸ್ವಾನ್‌ ಅವರಿಗೆ ಬಿಟ್ಟಿರುವುದಾಗಿ ಪಾಸ್ವಾನ್‌ ಹೇಳಿದ್ದಾರೆ.

ಚಿರಾಗ್‌ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಹೇಳುವ ಮೂಲಕ ಪಾಸ್ವಾನ್‌ ತಮ್ಮ ರಾಜಕೀಯ ನಡೆಯನ್ನು ರಹಸ್ಯವಾಗಿಟ್ಟಿದ್ದಾರೆ.

ಜೆಡಿಯು ಮುಖಂಡ ನಿತೀಶ್‌ ಕುಮಾರ್ ಜತೆ ಮುನಿಸಿಕೊಂಡಿರುವ ಪಾಸ್ವಾನ್‌ ಅವರು ಎನ್‌ಡಿಎದಲ್ಲಿಯೇ ಉಳಿಯುವರೋ ಅಥವಾ ಬಿಜೆಪಿ ಜತೆ ಮಾತ್ರ ಸಖ್ಯ ಮುಂದುವರೆಸುವರೋ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.

ರಘುವಂಶ ಸ್ಥಿತಿ ಚಿಂತಾಜನಕ

ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿರುವ ಕೇಂದ್ರದ ಮಾಜಿ ಸಚಿವ ರಘುವಂಶ ಪ್ರಸಾದ್‌ ಸಿಂಗ್‌ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಲಾಗಿದೆ.

ಕೋವಿಡ್‌ನಿಂದ ಗುಣಮುಖರಾಗಿದ್ದ ಅವರಲ್ಲಿ ಪುನಃ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ಕಳೆದ ವಾರ ದೆಹಲಿ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಂಗ್‌ ಕೆಲವು ತಿಂಗಳ ಹಿಂದೆಯಷ್ಟೇ ಆರ್‌ಜೆಡಿ ತೊರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT