ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ವಿಧಾನಸಭೆ ಚುನಾವಣೆ| ಮತದಾರರ ಮನಗೆಲ್ಲಲು ಹರಸಾಹಸ

ಬಿಹಾರ ಚುನಾವಣೆ: ಇಂದು ಕೊನೆ ಹಂತದ ಮತದಾನ: ಮಂಗಳವಾರ ಮತ ಎಣಿಕೆ
Last Updated 6 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಪಟ್ನಾ: ಬಿಹಾರ ವಿಧಾನಸಭೆಯ ಮೂರನೇ ಮತ್ತು ಕೊನೆಯ ಹಂತದ ಮತದಾನ ಶನಿವಾರ ನಡೆಯಲಿದೆ. ಮಂಗಳವಾರ ಮತ ಎಣಿಕೆ ನಡೆಯಲಿದೆ.

ಕೊನೆಯ ಹಂತದ ಮತದಾನವು ಫಲಿತಾಂಶವನ್ನು ಎನ್‌ಡಿಎ ಅಥವಾ ಮಹಾಘಟಬಂಧನ– ಯಾವ ಕಡೆಗಾದರೂ ತಿರುಗಿಸುವ ಶಕ್ತಿ ಹೊಂದಿದೆ. ಈ ಹಂತದಲ್ಲಿ ಮತದಾನ ಆಗುವ ಹೆಚ್ಚಿನ ಕ್ಷೇತ್ರಗಳು ಕೋಸಿ ಪ್ರದೇಶ ಮತ್ತು ಸೀಮಾಂಚಲ ಪ್ರದೇಶದಲ್ಲಿ ಇವೆ. ಕೋಸಿ ಪ್ರದೇಶವು ಎನ್‌ಡಿಎ ಭದ್ರಕೋಟೆಯಾದರೆ, ಸೀಮಾಂಚಲದಲ್ಲಿ ಮಹಾಮೈತ್ರಿಕೂಟದ ಪರ ಹೆಚ್ಚಿನ ಒಲವು ಇದೆ. ಇಲ್ಲಿನ ಹಲವು ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆಯ ಪ್ರಮಾಣ ಹೆಚ್ಚು. ಕೆಲವು ಪ್ರದೇಶಗಳಲ್ಲಿ ಅದು ಶೇ 65ರವರೆಗೆ ಇದೆ.

ಇತ್ತೀಚಿನ ಎರಡು ಬೆಳವಣಿಗೆಗಳು ಫಲಿತಾಂಶದ ಮೇಲೆ ದೊಡ್ಡ ಪ್ರಭಾವ ಬೀರುವ ಸಾಧ್ಯತೆ ಇದೆ.

ಒಂದು: ಇದು ತಮ್ಮ ಕೊನೆಯ ಚುನಾವಣೆ ಎಂದು ಜೆಡಿಯು ನಾಯಕ ನಿತೀಶ್‌ ಕುಮಾರ್‌ ಹೇಳಿದ್ದಾರೆ. ಮತದಾರರ ಮುಂದೆ ಅವರು ಇರಿಸಿರುವ ಭಾವನಾತ್ಮಕ ಕೋರಿಕೆ ಇದು. ಅಲ್ಪಸ್ವಲ್ಪ ಅಸಮಾಧಾನ ಇರುವವರನ್ನು ಮತ್ತೆ ತಮ್ಮ ಹತ್ತಿರ ಸೆಳೆಯುವ ಯತ್ನ. ಎರಡು: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯಂತಹ (ಸಿಎಎ) ವಿವಾದಾತ್ಮಕ ವಿಚಾರಗಳನ್ನು ಎತ್ತಿದ್ದಕ್ಕೆ ಹಾಗೂ ಎನ್‌ಡಿಎ ಅಧಿಕಾರಕ್ಕೆ ಬಂದರೆ ನುಸುಳುಕೋರರನ್ನು ಹೊರಗೆ ಅಟ್ಟಲಾಗುವುದು ಎಂದು ಮುಸ್ಲಿಮರನ್ನು ಬೆದರಿಸಿದ್ದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ನಿತೀಶ್‌ ತರಾಟೆಗೆ ತೆಗೆದುಕೊಂಡಿದ್ದಾರೆ.

ನಿತೀಶ್‌ ಬ್ರಹ್ಮಾಸ್ತ್ರ: ಈ ಬಾರಿಯ ಚುನಾವಣೆಯಲ್ಲಿ ಹಿಂದೆಂದೂ ಇಲ್ಲದಷ್ಟು ಜಿದ್ದಾಜಿದ್ದಿ ಕಾಣಿಸುತ್ತಿದೆ. ಈ ಹಣಾಹಣಿಯಲ್ಲಿಯೂ ಬಿಜೆಪಿ ಮುಖಂಡರ ಧ್ರುವೀಕರಣ ಯತ್ನಕ್ಕೆ ತಮ್ಮ ಒಪ್ಪಿಗೆ ಇಲ್ಲ ಎಂದು ಅಲ್ಪಸಂಖ್ಯಾತರಿಗೆ ಮನವರಿಕೆ ಮಾಡಲು ನಿತೀಶ್‌ ಯತ್ನಿಸಿದ್ದಾರೆ. ಅದರ ಜತೆಗೆ, ಇದು ತಮ್ಮ ಕೊನೆಯ ಚುನಾವಣೆ ಎಂಬ ‘ಬ್ರಹ್ಮಾಸ್ತ್ರ’ವನ್ನೂ ಅವರು ಬಳಸಿದ್ದಾರೆ. ಸದಾ ತಮ್ಮ ಜತೆಗೆ ಬಂಡೆಯಂತೆ ನಿಂತಿದ್ದ ಆದರೆ, ಇತ್ತೀಚೆಗೆ ತಮ್ಮ ಒಲವು ಬದಲಾಯಿಸುವ ಅಂಚಿನಲ್ಲಿರುವವರನ್ನು ಉಳಿಸಿಕೊಳ್ಳುವುದು ನಿತೀಶ್‌ ಅವರ ಈ ಹೇಳಿಕೆಯ ಉದ್ದೇಶ ಎಂದು ಹೇಳಲಾಗುತ್ತಿದೆ.

ಕೊನೆಯ ಹಂತದಲ್ಲಿ ಮತದಾನ ನಡೆಯುವಲ್ಲಿ ಆರ್‌ಜೆಡಿ ಅಭ್ಯರ್ಥಿಗಳ ಸಂಖ್ಯೆಯೇ ಹೆಚ್ಚು (46). ಕಾಂಗ್ರೆಸ್‌ನ 25, ಎಡಪಕ್ಷಗಳ ಏಳು, ಜೆಡಿಯುನ 37 ಮತ್ತು ಬಿಜೆಪಿಯ 35 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಗಾಗಿ, ಆರ್‌ಜೆಡಿಗೆ ಈ ಹಂತದ ಮತದಾನವು ಹೆಚ್ಚು ಮಹತ್ವದ್ದಾಗಿದೆ.

ನಿತೀಶ್‌ ಅವರು ರಾಜಕೀಯ ನಿವೃತ್ತಿ ಎಂಬ ಪದಗಳನ್ನು ಬಳಕೆ ಮಾಡಿಲ್ಲ. ಹಾಗಿದ್ದರೂ ಪ್ರತಿಸ್ಪರ್ಧಿಗಳು ನಿತೀಶ್‌ ಮೇಲೆ ಟೀಕಾಪ್ರಹಾರ ನಡೆಸಿದ್ದಾರೆ. ‘ಬಿಹಾರ ಮುಖ್ಯಮಂತ್ರಿ ದಣಿದಿದ್ದಾರೆ, ನಿವೃತ್ತಿಯಾಗಿದ್ದಾರೆ ಎಂದು ನಾವು ಮೊದಲೇ ಹೇಳಿದ್ದೆವು’ ಎಂದು ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌ ಹೇಳಿದ್ದಾರೆ. ತೇಜಸ್ವಿ ಅವರು 235 ರ್‍ಯಾಲಿಗಳಲ್ಲಿ ಭಾಗವಹಿಸಿದ್ದಾರೆ. ಇದೊಂದು ದಾಖಲೆ. ನಿತೀಶ್‌ ಅವರು 113 ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನಿತೀಶ್‌ ಅವರ ಬೆನ್ನ ಹಿಂದೆ ಗಟ್ಟಿ ಬೆಂಬಲವಾಗಿ ಇದ್ದೇನೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದಲ್ಲಿ 12 ರ್‍ಯಾಲಿ ನಡೆಸಿದ್ದಾರೆ.

ನಿಂದನೆಯ ಭಾಷೆ

ಈ ಚುನಾವಣಾ ಪ್ರಚಾರದಲ್ಲಿ ನಿತೀಶ್‌ ಅವರು ಬಳಸಿದ ಭಾಷೆಯಲ್ಲಿಯೂ ಗಮನಾರ್ಹ ಬದಲಾವಣೆ ಆಗಿದೆ. ಇತ್ತೀಚಿನವರೆಗೆ ತಮ್ಮ ಪ್ರತಿಸ್ಪರ್ಧಿಗಳ ಬಗ್ಗೆ ಬಹಳ ಸಭ್ಯ ಭಾಷೆಯನ್ನೇ ಅವರು ಬಳಸುತ್ತಿದ್ದರು. ತಮ್ಮ ವಿರೋಧಿಗಳನ್ನು ಟೀಕಿಸುವಾಗಲೂ ಅವರು ಸಂಯಮ ಕಳೆದುಕೊಂಡು ಮಾತನಾಡಿದ್ದಿಲ್ಲ. ಆದರೆ, ಈ ಬಾರಿ ನಿತೀಶ್‌ ಅವರ ಚುನಾವಣಾ ಪ್ರಚಾರದ ವೈಖರಿ ಭಿನ್ನವಾಗಿತ್ತು. ಆಗಾಗ, ಅವರು ಸಿಟ್ಟಿನಲ್ಲಿ ಮಾತನಾಡಿದ್ದರು. ವೈಯಕ್ತಿಕ ಟೀಕೆ ಮಾಡಿದ್ದರು. ‘ಕೆಲವು ನಾಯಕರು ಗಂಡು ಮಗುವಿಗಾಗಿ ಏಳು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ’ ಎಂದು ಲಾಲು ಪ್ರಸಾದ್‌–ರಾಬ್ಡಿ ದೇವಿ ಅವರನ್ನು ಉಲ್ಲೇಖಿಸಿ ಹೇಳಿದ್ದರು.

‘ನಿತೀಶ್‌ ಅವರು ತಮ್ಮ ರಾಜಕೀಯ ಜೀವನದ ಅತ್ಯಂತ ಕಠಿಣ ಸ್ಪರ್ಧೆ ಎದುರಿಸುತ್ತಿದ್ದಾರೆ. ಹಾಗಾಗಿಯೇ ಅವರ ಭಾಷೆಯಲ್ಲಿ ಬದಲಾವಣೆ ಆಗಿದೆ. ತೇಜಸ್ವಿ ಮಾತ್ರವಲ್ಲ, ಎಲ್‌ಜೆಪಿಯ ಚಿರಾಗ್‌ ಪಾಸ್ವಾನ್‌ ಅವರೂ ನಿತೀಶ್‌ ವಿರುದ್ಧ ಟೊಂಕ ಕಟ್ಟಿ ನಿಂತಿದ್ದಾರೆ. ಎನ್‌ಡಿಎಯಲ್ಲಿಯೇ ಇರುವ ವೈರಿ ಚಿರಾಗ್‌ ಅವರ ಪ್ರತ್ಯೇಕ ಸ್ಪರ್ಧೆಯು ನಿತೀಶ್‌ ಗೆಲುವಿನ ಅವಕಾಶಗಳನ್ನು ಕಡಿಮೆ ಮಾಡಿದೆ. ಈ ಬಾರಿ ಬಿಹಾರದಲ್ಲಿ ಸ್ಪರ್ಧೆ ಅತ್ಯಂತ ನಿಕಟವಾಗಿದೆ. ಹಾಗಾಗಿ, ಕೊನೆಯ ಹಂತದ ಮತದಾನವೇ ನಿರ್ಣಾಯಕ ಅನಿಸಿಕೊಳ್ಳಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

243 ಒಟ್ಟು ಕ್ಷೇತ್ರಗಳು

165 ಮೊದಲ ಎರಡು ಹಂತಗಳಲ್ಲಿ ಮತದಾನವಾದ ಕ್ಷೇತ್ರಗಳು

78 ಕೊನೆಯ ಹಂತದಲ್ಲಿ ಮತದಾನ ಆಗಲಿರುವ ಕ್ಷೇತ್ರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT