ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜಸ್ವಿ, ರಾಹುಲ್‌ ಡಬಲ್ ಯುವರಾಜರು: ಮೋದಿ

ಬಿಹಾರದಲ್ಲಿ ಡಬಲ್ ಎಂಜಿನ್‌ ಸರ್ಕಾರ: ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ಬಣ್ಣನೆ
Last Updated 1 ನವೆಂಬರ್ 2020, 19:31 IST
ಅಕ್ಷರ ಗಾತ್ರ

ಪಟ್ನಾ: ಬಿಹಾರ ವಿಧಾನಸಭೆ ಚುನಾವಣಾ ಪ್ರಚಾರ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಹಾಘಟಬಂಧನ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌ ಮತ್ತು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ಪ್ರಧಾನಿಯ ಟೀಕೆಗೆ ಗುರಿಯಾಗಿದ್ದಾರೆ. ಬಿಹಾರದ ಚುನಾವಣೆಯು ಡಬಲ್‌ ಎಂಜಿನ್‌ ಮತ್ತು ಡಬಲ್‌ ಯುವರಾಜರ ನಡುವಣ ಹೋರಾಟವಾಗಿದೆ ಎಂದು ಮೋದಿ ಭಾನುವಾರ ಬಣ್ಣಿಸಿದ್ದಾರೆ.

‘ಒಂದೆಡೆ ನಿಮ್ಮ ಮುಂದೆ ಡಬಲ್‌ ಎಂಜಿನ್‌ನ ಸರ್ಕಾರ ಇದೆ (ಕೇಂದ್ರ ಮತ್ತು ಬಿಹಾರದಲ್ಲಿ ಎನ್‌ಡಿಎ ಸರ್ಕಾರ). ಇನ್ನೊಂದೆಡೆ ಇಬ್ಬರು ಯುವರಾಜರಿದ್ದಾರೆ– ಒಬ್ಬರು ಜಂಗಲ್‌ ರಾಜ್‌ ಅನ್ನು ಪ್ರತಿನಿಧಿಸಿದರೆ ಇನ್ನೊಬ್ಬರು ದಲ್ಲಾಳಿಗಳ ಪರ ವಹಿಸುವವರು. ಈಗ ಬಿಹಾರದ ಹೋರಾಟವು ಡಬಲ್‌ ಎಂಜಿನ್‌ ಸರ್ಕಾರ ಮತ್ತು ಡಬಲ್‌ ಯುವರಾಜರ ನಡುವಣ ಸಂಘರ್ಷವಾಗಿದೆ. ಮತ ಹಾಕುವ ಮುನ್ನ ಸರಿಯಾಗಿ ಯೋಚಿಸಿ’ ಎಂದು ಉತ್ತರ ಬಿಹಾರದ ಚಪ್ರಾ, ಸಮಷ್ಠಿಪುರ, ಮೋತಿಹಾರಿ ಮತ್ತು ಬಗಹಗಳಲ್ಲಿ ನಡೆದ ರ್‍ಯಾಲಿಯಲ್ಲಿ ಮೋದಿ ಹೇಳಿದರು.

ಎರಡನೇ ಹಂತದಲ್ಲಿ ಮಂಗಳವಾರ ಮತದಾನ ನಡೆಯಲಿರುವ ಪ್ರದೇಶಗಳಲ್ಲಿ ಮೋದಿ ಪ್ರಚಾರ ನಡೆಸಿದರು. ಭಾನುವಾರ ಸಂಜೆ ಇಲ್ಲಿ ಬಹಿರಂಗ ಪ್ರಚಾರ ಅಂತ್ಯವಾಗಿದೆ.

‘ಜಂಗಲ್‌ ರಾಜ್‌ನ ಯುವರಾಜ ದೊಡ್ಡ ದೊಡ್ಡ ಭರವಸೆಗಳನ್ನು ನೀಡಿ ಯುವ ಜನರನ್ನು ವಂಚಿಸುತ್ತಿದ್ದಾರೆ. ಆದರೆ, ನಿರ್ಧಾರಕ್ಕೆ ಬರುವ ಮೊದಲು 15 ವರ್ಷಗಳ ಹಿಂದೆ ಬಿಹಾರ ಹೇಗಿತ್ತು ಎಂದು ನಿಮ್ಮ ಹೆತ್ತವರನ್ನು ಕೇಳಿ ತಿಳಿದುಕೊಳ್ಳಿ. ಹದಿನೈದು ವರ್ಷಗಳ ಹಿಂದೆ, ಅಪಹರಣದ ಭೀತಿಯಿಂದಾಗಿ ಹೆಣ್ಣು ಮಕ್ಕಳು ಶಾಲೆಗೆ ಹೋಗುವಂತಿರಲಿಲ್ಲ. ಸೂರ್ಯಾಸ್ತದ ನಂತರ ಜನರು ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ರಸ್ತೆ ಮತ್ತು ವಿದ್ಯುತ್‌ ಸಂಪರ್ಕದ ಬಗ್ಗೆ ಹೇಳದೆ ಇದ್ದರೇ ಒಳ್ಳೆಯದು’ ಎಂದು ಮೋದಿ ಆರೋಪಿಸಿದರು. ತಮ್ಮ ಸರ್ಕಾರದ ಸಾಧನೆಗಳನ್ನು ಹೇಳಿಕೊಳ್ಳುವುದಕ್ಕೆ ಒತ್ತು ನೀಡದ ಅವರು, 15 ವರ್ಷದ ಹಿಂದೆ ಇದ್ದ ಆರ್‌ಜೆಡಿ ಸರ್ಕಾರದ ವೈಫಲ್ಯಗಳನ್ನು ವಿವರಿಸಿದರು.

‘ಡಬಲ್‌ ಯುವರಾಜರಿಗೆ ಉತ್ತರ ಪ್ರದೇಶದಲ್ಲಿ ಏನಾಯಿತು’ ಎಂದು ಮೋದಿಯವರು ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಮತ್ತು ರಾಹುಲ್‌ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಪ್ರಶ್ನಿಸಿದರು (2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡಿದ್ದವು). ‘ಬಿಹಾರದ ಡಬಲ್‌ ಯುವರಾಜರಿಗೂ ಇದೇ ಗತಿ ಆಗಲಿದೆ’ ಎಂದು ಮೋದಿ ಹೇಳಿದರು.

ಸಮಷ್ಠಿಪುರ, ಬಗಹದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರೂ ಇದ್ದರು.

ಮಂದಿರ, ಪುಲ್ವಾಮಾ ಉಲ್ಲೇಖ: ಭಾವನಾತ್ಮಕವಾದ ಅಯೋಧ್ಯೆಯ ರಾಮ ಮಂದಿರ ವಿಚಾರದ ಬಗ್ಗೆಯೂ ಮೋದಿ ಮಾತನಾಡಿದರು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ನಡೆದ ಬಾಂಬ್‌ ದಾಳಿಯನ್ನೂ ಉಲ್ಲೇಖಿಸಿದರು. ರಾಷ್ಟ್ರೀಯ ಭದ್ರತೆ ಮತ್ತು ಪುಲ್ವಾಮಾ ದಾಳಿಗೆ ಸಂಬಂಧಿಸಿ ರಾಹುಲ್ ಗಾಂಧಿ ಅವರು ಸರ್ಕಾರದ ವಿರುದ್ಧ ಮಾಡಿದ ಟೀಕೆಗಳ ವಿರುದ್ಧ ಹರಿಹಾಯ್ದರು. ‘ಅವರ ಮಾತಿನಲ್ಲಿ ಸತ್ಯಾಂಶವೂ ಇಲ್ಲ, ತರ್ಕವೂ ಇಲ್ಲ. ಹಾಗಿದ್ದರೂ ಅವರು ನನ್ನ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಲೇ ಇರುತ್ತಾರೆ. ಅದರ ಕಾರಣಗಳು ಅವರಿಗೇ ಗೊತ್ತು’ ಎಂದರು.

ನಿರುದ್ಯೋಗ ಏಕೆ ಹೆಚ್ಚು: ತೇಜಸ್ವಿ

ಮೋದಿ ಟೀಕೆಗೆ ತೇಜಸ್ವಿ ಯಾದವ್‌ ಮತ್ತು ಕಾಂಗ್ರೆಸ್‌ನ ರಣದೀಪ್‌ ಸುರ್ಜೇವಾಲಾ ತಿರುಗೇಟು ನೀಡಿದ್ದಾರೆ. ‘ಬಿಹಾರದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಇದ್ದರೂ ನಿರುದ್ಯೋಗ ಪ್ರಮಾಣವು ಶೇ 46.6ರಷ್ಟು ಏಕೆ ಇದೆ ಎಂಬುದಕ್ಕೆ ಗೌರವಾನ್ವಿತ ಪ್ರಧಾನಿಯವರು ಉತ್ತರ ನೀಡಿಲ್ಲ. ರಾಜ್ಯದ ಜನರು ವಲಸೆ ಹೋಗಲು ಕಾರಣವೇನು. ಎನ್‌ಸಿಆರ್‌ಬಿ ದತ್ತಾಂಶದ ಪ್ರಕಾರ, ಅಪರಾಧ ಪ್ರಕರಣಗಳ ದರವು ಬಿಹಾರದಲ್ಲಿ ಹೆಚ್ಚು ಇದೆ. ನೀತಿ ಆಯೋಗದ ಪ್ರಕಾರ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬಿಹಾರ ಹಿಂದೆ ಇದೆ’ ಎಂದು ತೇಜಸ್ವಿ ಹೇಳಿದ್ದಾರೆ.

‘ಮೋದಿಯವರೇ, ನಿತೀಶ್‌ ಕುಮಾರ್‌ ಅವರದ್ದು 18ನೇ ಶತಮಾನದ ಮನಸ್ಥಿತಿ ಎಂದು 2015ರ ಚುನಾವಣಾ
ಪ್ರಚಾರದಲ್ಲಿ ಹೇಳಿದ್ದಿರಿ. ಈಗ, ಅವರ ಸರ್ಕಾರವು ಡಬಲ್‌ ಎಂಜಿನ್‌ ಹೊಂದಿದೆ ಎಂದಿದ್ದೀರಿ. ಸತ್ಯ ಏನು ಎಂದರೆ ಇದು ಡಬಲ್‌ ವಂಚನೆಯ ಸರ್ಕಾರ. ಒಂದು ಹುಸಿ ಭರವಸೆಗಳು ಮತ್ತು ಇನ್ನೊಂದು ವಂಚನೆ. ನಿಮ್ಮಿಬ್ಬರನ್ನೂ ಬಿಹಾರದ ಮತದಾರರು ಸರಿಯಾಗಿ ನೋಡಿಕೊಳ್ಳಲಿದ್ದಾರೆ’ ಎಂದು ಸುರ್ಜೇವಾಲಾ ಟ್ವೀಟ್‌ ಮಾಡಿದ್ದಾರೆ.

‘ಸೋಲಿಸಲು ಸಾಧ್ಯ’

2019ರ ಲೋಕಸಭಾ ಚುನಾವಣೆಯ ನಂತರ ನಡೆದ ವಿಧಾನಸಭಾ ಚುನಾವಣೆಗಳ ಫಲಿತಾಂಶವನ್ನು ವಿಶ್ಲೇಷಿಸಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಿದೆ ಎಂದು ನಿರೂಪಿ ಸುವ ಪ್ರಯತ್ನವನ್ನು ಕಾಂಗ್ರೆಸ್‌ ಹಿರಿಯ ಮುಖಂಡ ಪಿ.ಚಿದಂಬರಂ ಮಾಡಿದ್ದಾರೆ.

‘ಬಿಜೆಪಿಯನ್ನು ಸೋಲಿಸಲಾಗದು ಎಂದು ಹೇಳಿದವರಾರು? ಬಿಜೆಪಿಯನ್ನು ಸೋಲಿಸಲು ಸಾಧ್ಯವಿದೆ ಎಂದು ವಿರೋಧ ಪಕ್ಷಗಳು ಬಲವಾಗಿ ನಂಬಬೇಕು. ಇದು ಬಿಹಾರದಲ್ಲಿ ಸಾಬೀತಾಗಲಿದೆ ಎಂಬ ಭರವಸೆ ಇದೆ’ ಎಂದು ಅವರು ಹೇಳಿದ್ದಾರೆ.

ಜಾರ್ಖಂಡ್‌, ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣಾ ಫಲಿತಾಂಶವನ್ನು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT