ಬುಧವಾರ, ಅಕ್ಟೋಬರ್ 28, 2020
28 °C
ಜೆಡಿಯುಗೆ 122, ಬಿಜೆಪಿಗೆ 121 ಕ್ಷೇತ್ರ ಹಂಚಿಕೆ

ಬಿಹಾರ ಚುನಾವಣೆ: ಎನ್‌ಡಿಎ ಕೂಟದಲ್ಲಿ ಎಲ್‌ಜೆಪಿಗಿಲ್ಲ ಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವು ಸೀಟು ಹಂಚಿಕೆ ಸೂತ್ರವನ್ನು ಮಂಗಳವಾರ ಪ್ರಕಟಿಸಿದೆ. ಇದರ ಪ್ರಕಾರ, ಜೆಡಿಯು ಪಾಲಿಗೆ 122 ಕ್ಷೇತ್ರ ಹಾಗೂ ಬಿಜೆಪಿ ಪಾಲಿಗೆ 121 ಕ್ಷೇತ್ರಗಳು ಹಂಚಿಕೆಯಾಗಿವೆ. ಬಿಹಾರ ವಿಧಾನಸಭೆಯು ಒಟ್ಟು 243 ಕ್ಷೇತ್ರಗಳನ್ನು ಹೊಂದಿದೆ. 

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಯು ಹಾಗೂ ಬಿಜೆಪಿಯ ಮುಖಂಡರು, ಒಟ್ಟು ಕ್ಷೇತ್ರಗಳಲ್ಲಿ ಬಹುತೇಕ ಸಮಾನ ಸೀಟುಗಳು ಹಂಚಿಕೆಯಾಗಿವೆ ಎಂದು ಘೋಷಿಸಿದರು. 

ಜೆಡಿಯು ಪಾಲಿಗೆ ಬಂದಿರುವ 122 ಕ್ಷೇತ್ರಗಳಲ್ಲಿ, 7 ಕ್ಷೇತ್ರಗಳನ್ನು ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ನೇತೃತ್ವದ ಹಿಂದೂಸ್ತಾನ್ ಅವಾಮ್ ಮೋರ್ಚಾ ಪಕ್ಷಕ್ಕೆ ನೀಡಲಿದೆ. 121 ಸೀಟುಗಳನ್ನು ಪಡೆದಿರುವ ಬಿಜೆಪಿಯು ಮುಖೇಶ್ ಸಾಹ್ನಿ ಅವರ ಹೊಸ ಪ್ರಾದೇಶಿಕ ಪಕ್ಷ ‘ವಿಕಾಸಶೀಲ ಇನ್ಸಾನ್’ ಪಕ್ಷಕ್ಕೆ ಕೆಲವು ಕ್ಷೇತ್ರಗಳನ್ನು ಬಿಟ್ಟುಕೊಡಲಿದೆ. ಚಿರಾಗ್‌ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿಯು ರಾಜ್ಯದಲ್ಲಿ ಮೈತ್ರಿಯಿಂದ ಹೊರಗುಳಿದಿದೆ.

‘ಕೇಂದ್ರದಲ್ಲಿ ಎಲ್‌ಜೆಪಿ ನಮ್ಮ ಮಿತ್ರಪಕ್ಷ. ಅದರ ಸಂಸ್ಥಾಪಕ ಹಾಗೂ ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ. ಬಿಹಾರದಲ್ಲಿ ನಿತೀಶ್ ಕುಮಾರ್ ಅವರೇ ಎನ್‌ಡಿಎ ನಾಯಕ ಎಂಬುದರಲ್ಲಿ ಯಾವುದೇ ಗೊಂದಲ ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಂಜಯ್ ಜೈಸ್ವಾಲ್ ಸ್ಪಷ್ಟಪಡಿಸಿದ್ದಾರೆ. 

‘ಜೆಡಿಯು ಜೊತೆಗಿನ ಮೈತ್ರಿ ಮುರಿಯಲಾರದ್ದು’ ಎಂದು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ. ಚುನಾವಣೋತ್ತರ ಮೈತ್ರಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಿತೀಶ್ ಕುಮಾರ್ ಅವರೇ ನಮ್ಮ ಮುಖ್ಯಮಂತ್ರಿ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ಸಿಗುತ್ತವೆ ಎಂಬುದು ಇಲ್ಲಿ ಮುಖ್ಯವಲ್ಲ’ ಎಂದರು. 

ಚಿರಾಗ್ ಪಾಸ್ವಾನ್ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ಮಾತನಾಡಿದ ನಿತೀಶ್ ಕುಮಾರ್, ‘ನನ್ನ ಕೆಲಸದ ಮೇಲೆ ನನಗೆ ನಂಬಿಕೆಯಿದೆ. ಕೆಲವರು ಅನಪೇಕ್ಷಿತವಾದದ್ದನ್ನು ಹೇಳಿ ಸಂತೋಷ ಪಡೆಯುತ್ತಿದ್ದಾರೆ. ಅವರು ಅದನ್ನೇ ಮಾಡಿಕೊಂಡಿರಲಿ. ಅದರಿಂದ ನನಗೆ ಯಾವುದೇ ತೊಂದರೆ ಇಲ್ಲ’ ಎಂದರು.

ಬಿಹಾರದಲ್ಲಿ ಎಲ್‌ಜೆಪಿಯನ್ನು ಮಿತ್ರಪಕ್ಷದ ರೀತಿ ನಡೆಸಿಕೊಳ್ಳಲಿಲ್ಲಎಂಬುದಾಗಿ ಚಿರಾಗ್ ಪಾಸ್ವಾನ್ ಮಾಡಿದ್ದ ಆರೋಪವನ್ನು ನಿರಾಕರಿಸಿದ ನಿತೀಶ್, ‘ರಾಮ್‌ವಿಲಾಸ್ ಪಾಸ್ವಾನ್ ಅವರು ಜೆಡಿಯು ಬೆಂಬಲವಿಲ್ಲದೇ ರಾಜ್ಯಸಭೆಗೆ ಆಯ್ಕೆಯಾದರೇ? ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು