ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತೀಶ್ ಗೆದ್ದರೆ ಬಿಹಾರ ಸೋತಂತೆ: ಚಿರಾಗ್ ಪಾಸ್ವಾನ್

Last Updated 22 ಅಕ್ಟೋಬರ್ 2020, 4:18 IST
ಅಕ್ಷರ ಗಾತ್ರ

ಪಟ್ನಾ:‘ನಿತೀಶ್ ಗೆದ್ದರೆ ಬಿಹಾರ ಸೋತಂತೆ’ ಇದು ಎಲ್‌ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರ ಮಾತು. ವಿಧಾನಸಭಾ ಚುನಾವಣೆ ನಿಮಿತ್ತ ‘ಬಿಹಾರ ಮೊದಲು, ಬಿಹಾರಿ ಮೊದಲು’ ಎಂಬ ಮುನ್ನೋಟ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಅವರು, ನಿತೀಶ್ ಅವರ ಏಳು ಅಂಶಗಳ ಕಾರ್ಯಕ್ರಮವನ್ನು (ಏಳು ನಿರ್ಣಯಗಳು) ತರಾಟೆಗೆ ತೆಗೆದುಕೊಂಡರು.

‘ನೀರು ಪೂರೈಕೆ ಹಾಗೂ ರಸ್ತೆ ನಿರ್ಮಾಣ ಅಭಿವೃದ್ಧಿಯ ಸೂಚಕಗಳಲ್ಲ. ಅವು ಮೂಲಭೂತ ಸೌಕರ್ಯಗಳು. ಅವುಗಳನ್ನು ಜನರಿಗೆ ನೀಡಲೇಬೇಕು. 15 ವರ್ಷದಿಂದ ಅಧಿಕಾರದಲ್ಲಿರುವ ನಿತೀಶ್‌ ಮೂಲಸೌಕರ್ಯಗಳನ್ನು ಎಷ್ಟೋ ವರ್ಷಗಳ ಹಿಂದೆ ನೀಡಿರಬೇಕಿತ್ತು’ ಎಂದರು.

ಈ ಮಧ್ಯೆ ಮೂರನೇ ಪಟ್ಟಿ ಬಿಡುಗಡೆ ಮಾಡಿರುವ ಚಿರಾಗ್, ಬಿಜೆಪಿ ಹಾಗೂ ಜೆಡಿಯು ಜತೆ ಗುರುತಿಸಿಕೊಂಡಿದ್ದವರಿಗೆ ಮಣೆ ಹಾಕಿದ್ದಾರೆ. 137 ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಬಂಡಾಯ ಎದ್ದವರೇ ಆಗಿದ್ದು, ಎಲ್ಲರನ್ನೂ ಜೆಡಿಯು ವಿರುದ್ಧ ಕಣಕ್ಕಿಳಿಸಲಾಗಿದೆ.

ಮುನ್ನೋಟ ದಾಖಲೆಯಲ್ಲಿ ಏನಿದೆ?:

* ನಿತೀಶ್ ಆಡಳಿತದಲ್ಲಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ ಭ್ರಷ್ಟಾಚಾರ ಪ್ರಕರಣಗಳ ತನಿಖೆ

* ಯುವ ಆಯೋಗ ರಚನೆ

* ಉದ್ಯೋಗ ಹುಡುಕಲು ನೆರವು ನೀಡುವ ಪೋರ್ಟಲ್ ಸ್ಥಾಪನೆ

* ಡೆನ್ಮಾರ್ಕ್ ಮಾದರಿಯಲ್ಲಿ ಡೈರಿ ಸ್ಥಾಪನೆಗೆ ಉತ್ತೇಜನ

* ಬಿಹಾರ ಪ್ರವಾಹ ಹಾಗೂ ಬರ ಸಮಸ್ಯೆ ನಿವಾರಣೆಗೆ ನದಿ ಜೋಡಣೆ ಪರಿಹಾರ

*ಆರ್ಥಿಕವಾಗಿ ಹಿಂದುಳಿದ ಸಮುದಾಯದ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಸೀಟು ಮೀಸಲು

* ಹೊಸ ಉದ್ಯಮಗಳ ಸ್ಥಾಪನೆ ಉತ್ತೇಜಿಸಲು ಏಕಗವಾಕ್ಷಿ ವ್ಯವಸ್ಥೆ ರಚನೆ

* ಧಾರ್ಮಿಕ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ

10 ಲಕ್ಷ ಉದ್ಯೋಗ: ಕಾಂಗ್ರೆಸ್

ಬಿಹಾರ ವಿಧಾನಸಭೆಯ ಪ್ರಣಾಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್, 10 ಲಕ್ಷ ಉದ್ಯೋಗ, ರೈತರ ಕೃಷಿ ಸಾಲ ಮನ್ನಾ ಮತ್ತು ಪ್ರತೀ ತಿಂಗಳು ₹1,500ನಿರುದ್ಯೋಗ ಭತ್ಯೆ ನೀಡುವ ವಾಗ್ದಾನ ನೀಡಿದೆ.

ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಭರವಸೆ ನೀಡಿರುವ ಕಾಂಗ್ರೆಸ್, ರೈತರಿಗೆ ವಿದ್ಯುತ್ ಶುಲ್ಕದಲ್ಲಿ ಶೇ 50ರ ರಿಯಾಯಿತಿಯ ಭರವಸೆ ಕೊಟ್ಟಿದೆ.

ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಸಮ್ಮುಖದಲ್ಲಿ ‘ಬದಲಾವಣೆಯ ಪತ್ರ’ವನ್ನು ರಾಜ್‌ಬಬ್ಬರ್ ಬಿಡುಗಡೆ ಮಾಡಿದರು. ಮಹಾಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ 243ರ ಪೈಕಿ 70 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.

ಕೋಟಾ ನೋಟು ಮುದ್ರಿಸುತ್ತೀರಾ: ನಿತೀಶ್ ಪ್ರಶ್ನೆ

10 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವುದಾಗಿ ಆರ್‌ಜೆಡಿಯ ತೇಜಸ್ವಿ ಯಾದವ್ ಕೊಟ್ಟಿರುವ ಭರವಸೆಗೆ ಅಚ್ಚರಿ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, ವೇತನ ನೀಡಲು ಕೋಟಾ ನೋಟುಗಳನ್ನು ಮುದ್ರಿಸುತ್ತಾರಾ ಎಂದು ಕೆಣಕಿದ್ದಾರೆ.

‘ಬಿಹಾರದ ಮುಖ್ಯಮಂತ್ರಿ ಆದ ಮೊದಲ ದಿನವೇ 10 ಲಕ್ಷ ಉದ್ಯೋಗ ನೀಡುವುದಾದರೆ ಅವರಿಗೆ ವೇತನ ಎಲ್ಲಿಂದ ಕೊಡುತ್ತೀರಿ. ಜೈಲಿನಿಂದ ದುಡ್ಡ ತರುತ್ತೀರಾ‘ ಎಂದು ತೇಜಸ್ವಿ ಅವರನ್ನು ಪ್ರಶ್ನಿಸಿದ್ದಾರೆ. ತೇಜಸ್ವಿ ಅವರ ತಂದೆ ಲಾಲು ಪ್ರಸಾದ್ ಅವರು ಜೈಲಿನಲ್ಲಿರುವುದನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT