ರಾಮನ ಕುರಿತ ಹೇಳಿಕೆ ವಿವಾದ: ನಿಶಾದ್ ಪಾರ್ಟಿ ಮುಖ್ಯಸ್ಥ ಸಂಜಯ್ ಕ್ಷಮೆ ಯಾಚನೆ

ಫತೇಹಪುರ/ಪ್ರಯಾಗರಾಜ್: ರಾಮನ ಕುರಿತು ತಾವು ನೀಡಿದ್ದ ಹೇಳಿಕೆ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ನಿಶಾದ್ ಪಾರ್ಟಿ ಮುಖ್ಯಸ್ಥ ಸಂಜಯ್ ನಿಶಾದ್ ಅವರು ಮಂಗಳವಾರ ಕ್ಷಮೆ ಯಾಚಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ನಿಶಾದ್ ಪಾರ್ಟಿಯು ಬಿಜೆಪಿಯ ಮಿತ್ರ ಪಕ್ಷವಾಗಿದೆ. ಹೀಗಾಗಿ ಸಂಜಯ್ ಅವರ ಹೇಳಿಕೆ ಆಡಳಿತಾರೂಢ ಪಕ್ಷವಾದ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಈ ಬಗ್ಗೆ ಬಿಜೆಪಿ ಪ್ರತಿಕ್ರಿಯೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದ್ದವು.
ಪ್ರಯಾಗರಾಜ್‌ನಲ್ಲಿ ಭಾನುವಾರ ಮಾತನಾಡಿದ್ದ ಅವರು, ‘ರಾಜ ದಶರಥ ರಾಮನ ತಂದೆ ಅಲ್ಲ. ಶೃಂಗಿ ಋಷಿ ನಿಶಾದ್ ಅವರು ರಾಮನ ತಂದೆ’ ಎಂದು ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಫತೇಹಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ಅವರು, ‘ರಾಮ ದೇವರ ಬಗ್ಗೆ ನಾನು ಏನಾದರೂ ತಪ್ಪು ಮಾತನಾಡಿದ್ದರೆ, ರಾಮನಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ. ನಿಶಾದ್ ಸಮುದಾಯ ಶ್ರೀರಾಮ ದೇವರನ್ನು ಅತ್ಯಂತ ಪೂಜ್ಯಭಾವದಿಂದ ಆರಾಧಿಸುತ್ತದೆ‘ ಎಂದರು.
‘ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ನಮ್ಮ ಸಮುದಾಯ ಪ್ರಮುಖ ಪಾತ್ರ ವಹಿಸಿದೆ. ಸಮುದಾಯಕ್ಕೆ ರಾಮ ದೇವರ ಆಶೀರ್ವಾದ ಬಹಳಷ್ಟಿದೆ’ ಎಂದೂ ಅವರು ಹೇಳಿದರು.
‘ಬಿಜೆಪಿಯೊಂದಿಗೆ ನಮ್ಮ ಪಕ್ಷ ಮೈತ್ರಿ ಮಾಡಿಕೊಂಡಿರುವುದು ವಿರೋಧ ಪಕ್ಷಗಳ ನಿದ್ದೆಗೆಡಿಸಿದೆ. ಹೀಗಾಗಿ ನನ್ನ ಹೇಳಿಕೆಯನ್ನು ಅವು ತಿರುಚಿವೆ’ ಎಂದರು.
ಸೋಮವಾರ ನಡೆದ ಅಲಹಾಬಾದ್ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಶಿಕ್ಷಣ ಸಚಿವ ಹಾಗೂ ಉತ್ತರಪ್ರದೇಶದಲ್ಲಿ ಬಿಜೆಪಿಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.