ಬುಧವಾರ, ಸೆಪ್ಟೆಂಬರ್ 22, 2021
28 °C

ದೆಹಲಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಆಮ್ಲಜನಕದ ಬೇಡಿಕೆ: ಬಿಜೆಪಿ–ಎಎಪಿ ವಾಗ್ಯುದ್ಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ಉತ್ತುಂಗದ ಸಮಯದಲ್ಲಿ ದೆಹಲಿ ಸರ್ಕಾರವು ಅಗತ್ಯಕ್ಕಿಂತ ಹೆಚ್ಚು ವೈದ್ಯಕೀಯ ಆಮ್ಲಜನಕದ ಬೇಡಿಕೆ ಇಡುವ ಮೂಲಕ ಉತ್ಪ್ರೇಕ್ಷೆ ಮಾಡಿತ್ತು ಎಂದು ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯು ನೀಡಿರುವ ವರದಿಯು ಬಿಜೆಪಿ ಮತ್ತು ಎಎಪಿ ಪಕ್ಷಗಳ ನಡುವೆ ವಾಗ್ಯುದ್ಧಕ್ಕೆ ನಾಂದಿ ಹಾಡಿದೆ.

ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ಆಮ್ಲಜನಕ ಲೆಕ್ಕಪರಿಶೋಧನಾ ಸಮಿತಿಯ ವರದಿಯನ್ನು ಎತ್ತಿ ತೋರಿಸಿರುವ, ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ‘ಅಸಮರ್ಥತೆಯಿಂದ ಬೇರೆಯವರ ಮೇಲೆ ಆಪಾದನೆ ಮಾಡುವ ರಾಜಕೀಯ’ ಬಹಿರಂಗಗೊಂಡಿದೆ ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ, ‘ಅಂತಹ ಯಾವುದೇ ವರದಿ ಅಸ್ತಿತ್ವದಲ್ಲಿಲ್ಲ. ನಾವು ಸಮಿತಿಯ ಹಲವು ಸದಸ್ಯರೊಂದಿಗೆ ಮಾತನಾಡಿದ್ದೇವೆ. ಅಂತಹ ಯಾವುದೇ ವರದಿಗೆ ಅವರು ಸಹಿ ಹಾಕಿಲ್ಲ ಅಥವಾ ಅನುಮೋದಿಸಿಲ್ಲ ಎಂದು ಅವರು ನಮಗೆ ತಿಳಿಸಿದ್ದಾರೆ ’ ಎಂದು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಿಸೋಡಿಯಾ ಅವರ ಸಮರ್ಥನೆಯನ್ನು ತಿರಸ್ಕರಿಸಿರುವ ಸಂಬಿತ್ ಪಾತ್ರಾ, ಆರೋಗ್ಯ ಸಚಿವಾಲಯವು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅಫಿಡವಿಟ್‌ನ ಕೆಲವು ದಾಖಲೆಗಳನ್ನು ಹಂಚಿಕೊಂಡಿದ್ದಾರೆ.

‘ಗೌರವಾನ್ವಿತ ಸಿಸೋಡಿಯಾ ಅವರೇ, ದಯವಿಟ್ಟು ಗೌರವಾನ್ವಿತ ಸುಪ್ರೀಂ ಕೋರ್ಟ್‌ಗೆ ‘ಆಮ್ಲಜನಕ ಲೆಕ್ಕಪರಿಶೋಧನೆಯ ಉಪ ಸಮಿತಿ ’ ಸಲ್ಲಿಸಿರುವ ವರದಿಯ ಅಫಿಡವಿಟ್‌ನ ಪ್ಯಾರಾ 7 ಅನ್ನು ಓದಿ. ಸತ್ಯವನ್ನು ನಿರಾಕರಿಸುವ ಮೂಲಕ ನೀವು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ,’ ಎಂದು ಪಾತ್ರಾ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮನೀಶ್ ಸಿಸೋಡಿಯಾ, ಈ ವರದಿಯನ್ನು ಬಿಜೆಪಿ ಕಚೇರಿಯಲ್ಲಿ ತಯಾರು ಮಾಡಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ. ‘ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ಆಮ್ಲಜನಕ ಲೆಕ್ಕಪರಿಶೋಧನಾ ಸಮಿತಿಯ ಸದಸ್ಯರು ಸಹಿ ಮಾಡಿದ ವರದಿಯನ್ನು ನನಗೆ ತೋರಿಸಿ’ ಎಂದು ಅವರು ಹೇಳಿದರು.

ಹಾಸಿಗೆಯ ಸಾಮರ್ಥ್ಯದ ಆಧಾರದ ಮೇಲೆ 1,940 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕದ ಅವಶ್ಯಕತೆ ಇದೆ ಎಂದು ಅಗತ್ಯಕ್ಕಿಂತ 4 ಪಟ್ಟು ದೆಹಲಿ ಸರ್ಕಾರವು ಬೇಡಿಕೆ ಇಟ್ಟಿತ್ತು. ಆದರೆ, ವಾಸ್ತವವಾಗಿ ದೆಹಲಿಗೆ 289 ಮೆಟ್ರಿಕ್ ಟನ್ ಆಮ್ಲಜನಕದ ಅಗತ್ಯವಿತ್ತು ಎಂದು ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯು ಮಧ್ಯಂತರ ವರದಿಯಲ್ಲಿ ತಿಳಿಸಿತ್ತು.

‘ದೆಹಲಿ ಸರ್ಕಾರವು ಕೊರೊನಾ ಉತ್ತುಂಗದ ಸಮಯದಲ್ಲಿ ಅಗತ್ಯಕ್ಕಿಂತ ನಾಲ್ಕು ಪಟ್ಟು ಆಮ್ಲಜನಕಕ್ಕೆ ಬೇಡಿಕೆ ಇಟ್ಟಿತ್ತು ಎಂದು ಸುಪ್ರೀಂ ಕೋರ್ಟ್‌ನ ಆಕ್ಸಿಜನ್ ಆಡಿಟ್ ತಂಡವು ವರದಿ ನೀಡಿದೆ’ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಹ ಹೇಳಿದ್ದಾರೆ.

ಕ್ರಿಕೆಟಿಗ ಕಮ್ ರಾಜಕಾರಣಿ ಗೌತಮ್ ಗಂಭೀರ್, ಸಹ ಕೇಜ್ರಿವಾಲ್ ವಿರುದ್ಧ ಟ್ವೀಟ್ ಮೂಲಕ ಕಿಡಿ ಕಾರಿದ್ದು, ‘ನಿಮಗೆ ಏನಾದರೂ ಮರ್ಯಾದೆ ಇದ್ದರೆ, ಕೋವಿಡ್ ಎರಡನೇ ಅಲೆಯ ಸಂದರ್ಔ ಅಗತ್ಯಕ್ಕಿಂತ 4 ಪಟ್ಟು ಆಮ್ಲಜನಕದ ಬೇಡಿಕೆ ತೋರಿಸಿದ್ದಕ್ಕಾಗಿ ದೇಶದ ಕ್ಷಮೆ ಯಾಚಿಸಿ’ ಎಂದು ಹೇಳಿದ್ದಾರೆ

ಇದನ್ನೂ ಓದಿ.. ನಾಲ್ಕು ಪಟ್ಟು ಹೆಚ್ಚು ಆಮ್ಲಜನಕ ಕೇಳಿದ್ದ ದೆಹಲಿ ಸರ್ಕಾರ: 'ಸುಪ್ರೀಂ' ಸಮಿತಿ
 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು