ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ₹785 ಕೋಟಿ ದೇಣಿಗೆ

ಐದು ಪ್ರಮುಖ ಪಕ್ಷಗಳ ದೇಣಿಗೆಗಿಂತ ಮೂರು ಪಟ್ಟು ಹೆಚ್ಚು ದೇಣಿಗೆ ಪಡೆದ ಬಿಜೆಪಿ
Last Updated 4 ಆಗಸ್ಟ್ 2021, 17:35 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌, ಟಿಎಂಸಿ ಮತ್ತು ಎನ್‌ಸಿಪಿ ಸೇರಿ ಐದು ಪ್ರಮುಖ ಪಕ್ಷಗಳಿಗೆ ಸಂದಾಯವಾಗಿರುವ ದೇಣಿಗೆಗಿಂತ ಮೂರು ಪಟ್ಟು ಹೆಚ್ಚು ದೇಣಿಗೆ ಬಿಜೆಪಿಗೆ ಸಿಕ್ಕಿದೆ. ಬಿಜೆಪಿಗೆ ಒಟ್ಟು ₹785.77 ಕೋಟಿ ಸಂದಾಯವಾಗಿದೆ ಎಂದು ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್ (ಎಡಿಆರ್‌) ವರದಿಯು ಹೇಳಿದೆ.

ಚುನಾವಣಾ ಆಯೋಗಕ್ಕೆರಾಷ್ಟ್ರೀಯ ಪಕ್ಷಗಳು ಸಲ್ಲಿಸಿರುವ 2019–21ರ ಸಾಲಿನ ದೇಣಿಗೆ ವರದಿಯನ್ನು ಆಧರಿಸಿ, ₹20,000 ಮೇಲ್ಪಟ್ಟು ಸಲ್ಲಿಕೆಯಾಗಿರುವ ದೇಣಿಗೆಗಳನ್ನು ಗಮನದಲ್ಲಿರಿಸಿಕೊಂಡು ಈ ವರದಿಯನ್ನು ಎಡಿಆರ್‌ ತಯಾರಿಸಿದೆ. ಬಿಜೆಪಿಗೆ ₹ 785.77 ಕೋಟಿ ದೇಣಿಗೆ ಸಿಕ್ಕಿದ್ದರೆ, ಕಾಂಗ್ರೆಸ್‌, ಎನ್‌ಸಿಪಿ, ಸಿಪಿಐ, ಸಿಪಿಎಂ ಮತ್ತು ಟಿಎಂಸಿಗೆ ಒಟ್ಟಾಗಿ ₹228 ಕೋಟಿ ಸಲ್ಲಿಕೆ ಆಗಿದೆ.

ಬಿಜೆಪಿಯು 570 ದಾನಿಗಳು ನೀಡಿರುವ ಒಟ್ಟು ₹149.8 ಕೋಟಿ ಮೊತ್ತದ ದೇಣಿಗೆಯನ್ನು ಘೋಷಿಸಿದೆ. ತೃಣಮೂಲ ಕಾಂಗ್ರೆಸ್‌ 52 ದಾನಿಗಳಿಂದ ₹7.1 ಕೋಟಿ, ಕಾಂಗ್ರೆಸ್‌ 25 ದಾನಿಗಳಿಂದ ₹2.6 ಕೋಟಿ ಮತ್ತು ಎನ್‌ಸಿಪಿ ಇಬ್ಬರು ದಾನಿಗಳಿಂದ ₹3 ಕೋಟಿ ದೇಣಿಗೆ ಪಡೆದಿರುವುದಾಗಿ ಘೋಷಿಸಿವೆ. ₹20 ಸಾವಿರಕ್ಕಿಂತ ಕಡಿಮೆ ದೇಣಿಗೆಯ ವಿವರಗಳನ್ನು ಬಹಿರಂಗಪಡಿಸಬೇಕಿಲ್ಲ.

ಮೇಯರ್‌ ಮತ್ತು ಉಪ ಮೇಯರ್‌ ಇಬ್ಬರೂ ಬಿಜೆಪಿಯವರೇ ಆಗಿರುವ ಮಹಾರಾಷ್ಟ್ರದ ಅಮರಾವತಿ ಮಹಾನಗರ ಪಾಲಿಕೆಯಿಂದಲೂ ₹4.80 ಲಕ್ಷ ದೇಣಿಗೆಯನ್ನುಬಿಜೆಪಿ ಪಡೆದಿದೆ. ಈ ದೇಣಿಗೆಗೆ ಸಂಬಂಧಪಟ್ಟಂತೆ ವಿಳಾಸ, ಬ್ಯಾಂಕ್‌ ಹೆಸರು, ಪ್ಯಾನ್‌ ಮಾಹಿತಿ ಸೇರಿ ಇತರ ಮಾಹಿತಿಗಳನ್ನು ಪಕ್ಷ ಒದಗಿಸಿಲ್ಲ. ಇಂಟರ್‌ನೆಟ್‌ನಲ್ಲಿ ಹುಡುಕಿದಾಗ ಈ ದೇಣಿಗೆಯು ಅಮರಾವತಿ ನಗರಪಾಲಿಕೆಯಿಂದ ಬಂದಿದೆ ಎಂದು ತಿಳಿದುಬಂದಿತು. ಒಂದು ರಾಜಕೀಯ ಪಕ್ಷ ಆಡಳಿತ ನಡೆಸುತ್ತಿರುವ ಸ್ಥಳೀಯ ಸಂಸ್ಥೆಯೊಂದು ಪಕ್ಷಕ್ಕೆ ದೇಣಿಗೆ ನೀಡಿರುವುದು ಕಾನೂನು ಪ್ರಕಾರವಾಗಿ ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿವೆ ಎಂದು ಎಡಿಆರ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT