ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಲಟ್‌ ಸೇರಿ ಬಂಡಾಯ ಶಾಸಕರಿಗೆ ₹10 ಕೋಟಿ: ಗೆಹಲೋತ್‌ ಆರೋಪ ನಿರಾಧಾರವೆಂದ ಬಿಜೆಪಿ

Last Updated 25 ನವೆಂಬರ್ 2022, 2:26 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಸೇರಿದಂತೆ ಬಂಡಾಯ ಶಾಸಕರಿಗೆ ಬಿಜೆಪಿ ₹10 ಕೋಟಿ ನೀಡಿರುವುದಕ್ಕೆ ತಮ್ಮ ಬಳಿ ಪುರಾವೆ ಇದೆ ಎಂಬ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರ ಹೇಳಿಕೆ ನಿರಾಧಾರ ಎಂದು ರಾಜಸ್ಥಾನ ಬಿಜೆಪಿ ಪ್ರತಿಕ್ರಿಯಿಸಿದೆ.

2020ರಲ್ಲಿ ಸಚಿನ್‌ ಪೈಲಟ್‌ ನೇತೃತ್ವದ ಕಾಂಗ್ರೆಸ್‌ ಶಾಸಕರ ಗುಂಪು ಪಕ್ಷದ ವಿರುದ್ಧ ಬಂಡಾಯವೆದ್ದು ಗುರುಗ್ರಾಮದ ರೆಸಾರ್ಟ್‌ನಲ್ಲಿ ಸುಮಾರು ಒಂದು ತಿಂಗಳಿಗೂ ಹೆಚ್ಚು ದಿನ ಉಳಿದುಕೊಂಡಿದ್ದರ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿಯ ಹಿರಿಯ ನಾಯಕರು ಇದ್ದರು ಎಂದು ಗೆಹಲೋತ್‌ ಅವರು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದಾರೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಬಂಡಾಯ ಶಾಸಕರ ಮನೆಗೆ ನಿರಂತರವಾಗಿ ಭೇಟಿ ನೀಡಿದ್ದಾರೆ. ಪೈಲಟ್‌ ಸೇರಿದಂತೆ ಪ್ರತಿಯೊಬ್ಬ ಬಂಡಾಯ ಶಾಸಕನಿಗೂ ₹10 ಕೋಟಿ ನೀಡಿರುವುದಕ್ಕೆ ತಮ್ಮ ಬಳಿ ಪುರಾವೆ ಇದೆ ಎಂದು ಗೆಹಲೋತ್‌ ಹೇಳಿದ್ದರು.

ಅಶೋಕ್‌ ಗೆಹಲೋತ್‌ ಆರೋಪವನ್ನು ಅಲ್ಲಗಳೆದಿರುವ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್‌ ಪೂನಿಯಾ, ಇದು ಆಧಾರರಹಿತ ಆರೋಪ ಎಂದಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳಿಗೆ ಹಾಗೂ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ. ಗೆಹಲೋತ್‌ ಅವರು ಕಳೆದ ನಾಲ್ಕು ವರ್ಷಗಳಿಂದ ಈ ಆರೋಪವನ್ನು ಮಾಡುತ್ತಲೇ ಬಂದಿದ್ದಾರೆ. ಇದಕ್ಕೆ ಯಾವುದೇ ಆಧಾರವಿಲ್ಲ. ಈ ಪ್ರಸಂಗಗಳಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಪೂನಿಯಾ ತಿಳಿಸಿದ್ದಾರೆ.

ಪೈಲಟ್‌ ಅವರನ್ನು 'ಗದ್ದರ್‌' (ವಂಚಕ) ಎಂದು ಕರೆದಿರುವ ಗೆಹಲೋತ್‌, 2020ರಲ್ಲಿ ಕಾಂಗ್ರೆಸ್‌ ವಿರುದ್ಧ ಬಂಡಾಯವೆದ್ದು, ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದ ವ್ಯಕ್ತಿ ತನ್ನ ಸ್ಥಾನಕ್ಕೆ ಏರಲು ಸಾಧ್ಯವಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT