ಶನಿವಾರ, ಸೆಪ್ಟೆಂಬರ್ 18, 2021
30 °C

ಕೋವಿಡ್ ನಿರ್ವಹಣೆ: ಟೀಕೆ ಎದುರಿಸಲು ಬಿಜೆಪಿಯ ಸಂಸದರಿಗೆ ‘ಮಾಹಿತಿ ಅಸ್ತ್ರ‘

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೋವಿಡ್‌ ನಿರ್ವಹಣೆ ಕುರಿತ ಟೀಕೆಗಳನ್ನು ಸಮರ್ಪಕವಾಗಿ ಎದುರಿಸಲು ಶಕ್ತವಾಗುವಂತೆ, ತನ್ನ ಸಂಸದರಿಗೆ ಈ ಕುರಿತ ಸಮಗ್ರ ಮಾಹಿತಿ ಒದಗಿಸಿದೆ.

ಲಸಿಕೆ ಅಭಿಯಾನವೂ ಒಳಗೊಂಡಂತೆ ಕೋವಿಡ್ ಪಿಡುಗು ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳ ವಿವರಗಳಿರುವ ಕೈಪಿಡಿಯನ್ನು ಆರೋಗ್ಯ ಸಚಿವಾಲಯ ಸಿದ್ಧಪಡಿಸಿದೆ. ಅದರ ಪ್ರಕಾರ, ಕೋವಿಡ್‌ ಪಿಡುಗು ಹತ್ತಿಕ್ಕಲು ‘ಸರ್ಕಾರ ಮತ್ತು ಸಮಾಜ ಒಟ್ಟುಗೂಡಿ’ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಗೋವಾ ರಾಜ್ಯಗಳು ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವಂತೆಯೇ, ಕೋವಿಡ್ ನಿರ್ವಹಣೆಯ ವೈಫಲವನ್ನೇ ಅಸ್ತ್ರವಾಗಿಸಿ ವಿರೋಧಪಕ್ಷಗಳು ಸರ್ಕಾರದ ಮೇಲೆ ದಾಳಿಗೆ ಸಜ್ಜಾಗಿವೆ. ಸೋಂಕು ತಡೆಗೆ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕೆಯನ್ನೂ ನೀಡಲಾಗಿಲ್ಲ ಎಂಬುದು ಪ್ರಮುಖ ಆರೋಪವಾಗಿದೆ.

ಆರೋಗ್ಯ ಸಚಿವಾಲಯ ಈಗ ಸಿದ್ಧಪಡಿಸಿ ಬಿಜೆಪಿ ಸಂಸದರಿಗೆ ಒದಗಿಸಿರುವ ಕೈಪಿಡಿಯ ಪ್ರಕಾರ, ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಗರಿಷ್ಠ ಪ್ರಮಾಣದಲ್ಲಿ ಲಸಿಕೆ ನೀಡಿದ್ದು,ವೆಬ್‌ಸೈಟ್‌ನಲ್ಲಿ ವಿವರಗಳಿವೆ. ಚೀನಾ ಹೇಳಿಕೊಂಡಿರುವಂತೆ 160 ಕೋಟಿ ಡೋಸ್‌ ಲಸಿಕೆಯನ್ನಷ್ಟೇ ನೀಡಿದೆ ಎಂದೂ ಉಲ್ಲೇಖಿಸಿದೆ.

ಜುಲೈ ಅಂತ್ಯದವರೆಗೂ ಭಾರತ 45 ಕೋಟಿಗೂ ಹೆಚ್ಚು ಡೋಸ್‌ ಲಸಿಕೆ ನೀಡಿದೆ. ಅಮೆರಿಕದಲ್ಲಿ ಈ ಸಂಖ್ಯೆ 34.3 ಕೋಟಿ ಆಗಿದ್ದರೆ, ಬ್ರೆಜಿಲ್‌ನಲ್ಲಿ 13.7 ಕೋಟಿ, ಬ್ರಿಟನ್‌ನಲ್ಲಿ 8.4 ಕೋಟಿ ಆಗಿದೆ. 34 ಕೋಟಿ ಡೋಸ್‌ ಲಸಿಕೆ ನೀಡುವ ಗುರಿಯನ್ನು 166 ದಿನಗಳಲ್ಲಿ ಸಾಧಿಸಲಾಗಿದೆ. ಅಮೆರಿಕ ಇದನ್ನು 221 ದಿನಗಳಲ್ಲಿ ಸಾಧಿಸಿದೆ ಎಂದು ತಿಳಿಸಿದೆ.

ಕೈಪಿಡಿಯ ಪ್ರಕಾರ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಗಳ ಜೊತೆಗೆ 21 ಸಭೆಯನ್ನು ಮಾಡಿದ್ದಾರೆ. 10 ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. 40 ಸಭೆಗಳ ಅಧ್ಯಕ್ಷತೆ ವಹಿಸಿದ್ದಾರೆ. ಕೋವಿಡ್‌ ಪ್ರಕರಣಗಳ ಸಂಖ್ಯೆ ಪ್ರತಿ 10 ಲಕ್ಷಕ್ಕೆ ಭಾರತದಲ್ಲಿ 22,726 ಆಗಿದ್ದು, ಸಾವಿನ ಸಂಖ್ಯೆ 305 ಆಗಿದೆ. ಇದು, ಜಗತ್ತಿನಲ್ಲೇ ಕಡಿಮೆ ‍‍‍ಪ್ರಮಾಣದ್ದು ಆಗಿದೆ ಎಂದು ಆರೋಗ್ಯ ಸಚಿವಾಲಯ ಪರಿಸ್ಥಿತಿಯನ್ನು ಸಮರ್ಥಿಸಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು