ನಾಮಪತ್ರ ಹಿಂಪಡೆಯಲು ಬಿಜೆಪಿಯಿಂದ ₹15 ಲಕ್ಷ ಆಮಿಷ: ಕೇರಳ ಬಿಎಸ್ಪಿ ಅಭ್ಯರ್ಥಿ ಆರೋಪ

ಕಾಸರಗೋಡು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಕೇರಳ ಘಟಕವು ದೊಡ್ಡ ಪ್ರಮಾಣದ ಕಪ್ಪುಹಣವನ್ನು ಬಳಸಿದೆ ಎಂಬ ಆರೋಪ ಕೇಳಿಬಂದಿದೆ. ಮಂಜೇಶ್ವರದ ಅಭ್ಯರ್ಥಿಯಾಗಿದ್ದ ರಾಜ್ಯ ಬಿಜೆಪಿ ಮುಖ್ಯಸ್ಥ ಕೆ. ಸುರೇಂದ್ರನ್ ವಿರುದ್ಧದ ನಾಮಪತ್ರ ಹಿಂಪಡೆಯುವಂತೆ ಬಿಎಸ್‌ಪಿ ಅಭ್ಯರ್ಥಿಗೆ ₹15 ಲಕ್ಷ ಆಮಿಷವೊಡ್ಡಿದ್ದ ಸಂಗತಿ ಬಯಲಾಗಿದೆ.
ಇದನ್ನೂ ಓದಿ: ಕೇರಳ: ನಾನು ಆ ಪಕ್ಷದ ಕಾರ್ಯಕರ್ತನಲ್ಲವೆಂದು ಬಿಜೆಪಿಯ ಟಿಕೆಟ್ ನಿರಾಕರಿಸಿದ ಯುವಕ
ಈ ಆರೋಪಗಳನ್ನು ಆಧಾರರಹಿತವೆಂದು ಬಿಜೆಪಿ ತಳ್ಳಿಹಾಕಿದೆ. ಇದು ಪಕ್ಷದ ವಿರುದ್ಧದ ಪಿತೂರಿ ಎಂದು ಹೇಳಿದೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಕೆ. ಸುಂದರ ಮಾರ್ಚ್ 22 ರಂದು ತಮ್ಮ ನಾಮಪತ್ರ ಹಿಂಪಡೆದಿದ್ದರು. ಬಿಎಸ್‌ಪಿ ಅಭ್ಯರ್ಥಿ ಕೆ. ಸುಂದರ ಅವರ ಹೆಸರು ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಹೆಸರಿನೊಂದಿಗೆ ತಾಳೆಯಾಗುತ್ತಿತ್ತು. ಕೆ. ಸುಂದರ ಅವರ ಉಮೇವೇದುವಾರಿಕೆ ಹಿಂತೆಗೆತದ ಹೊರತಾಗಿಯೂ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಚುನಾಣೆಯಲ್ಲಿ ಸೋಲುಂಡಿದ್ದರು.
ಇದನ್ನೂ ಓದಿ:ಕೇರಳದ 115 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ, ಪಾಲಕ್ಕಾಡ್ನಿಂದ ಇ ಶ್ರೀಧರನ್
ಇವರಿಬ್ಬರ ಹೆಸರುಗಳ ನಡುವಿನ ಸಾಮ್ಯತೆಯಿಂದಾಗಿ 2016 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಐಯುಎಂಎಲ್‌ನ ಪಿ.ಬಿ ಅಬ್ದುಲ್ ರಜಾಕ್ ವಿರುದ್ಧ ಕೇವಲ 89 ಮತಗಳ ಅಂತರದಲ್ಲಿ ಸೋತಿತ್ತು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಂದರ 467 ಮತ ಪಡೆದಿದ್ದರು.
‘ನನ್ನ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವಂತೆ ಬಿಜೆಪಿ ನಾಯಕರು ನನ್ನನ್ನು ಕೇಳಿದರು. ನಾನು 15 ಲಕ್ಷ ರೂ. ಕೇಳಿದ್ದೆ. ಆದರೆ ಅವರು ನನಗೆ ಕೇವಲ ₹2.5 ಲಕ್ಷ ಹಣ, ₹15,000 ಮೌಲ್ಯದ ಮೊಬೈಲ್ ಫೋನ್ ನೀಡಿದರು. ಬಿಜೆಪಿ ಗೆದ್ದಿದ್ದೇ ಆದರೆ, ಕರ್ನಾಟಕದಲ್ಲಿ ಒಂದು ವೈನ್ ಶಾಪ್‌ಗೆ ಅವಕಾಶ ಕೊಡಿಸಬೇಕಾಗಿ ಕೇಳಿದ್ದೆ. ಆದರೆ ಚುನಾವಣೆ ಮುಗಿದ ನಂತರ ಯಾರೂ ನನ್ನತ್ತ ಬರಲಿಲ್ಲ,‘ ಎಂದು ಸುಂದರ ಹೇಳಿದ್ದಾರೆ.
ಇದನ್ನೂ ಓದಿ:ಬಿಜೆಪಿ–ಸಿಪಿಎಂ ಪರಸ್ಪರ ನೆರವು: ಆರ್ಎಸ್ಎಸ್ ಮುಖಂಡ ಬಾಲಶಂಕರ್
ಚುನಾವಣೆಯಲ್ಲಿ ಉಮೇದುವಾರಿಕೆ ಹಿಂತೆಗೆದುಕೊಂಡಿದ್ದ ಬಿಎಸ್‌ಪಿ ಪಕ್ಷದ ಸುಂದರ, ನಂತರ ಬಿಜೆಪಿಗೆ ಸೇರಿದ್ದರು. ಕೇರಳದಲ್ಲಿ ಬಿಜೆಪಿ ಗೆಲ್ಲಬಹುದಾದ ಭರವಸೆ ಹೊಂದಿದ್ದ ಕ್ಷೇತ್ರಗಳಲ್ಲಿ ಮಂಜೇಶ್ವರ ಕೂಡ ಒಂದು.
ಆದರೆ ಬಿಜೆಪಿ ಈ ಆರೋಪಗಳನ್ನು ತಳ್ಳಿಹಾಕಿದೆ. ‘ನಾಮಪತ್ರ ಹಿಂತೆಗೆದುಕೊಳ್ಳಲು ಸುಂದರ ಅವರಿಗೆ ನಾವೂ ಏನನ್ನೂ ಕೊಟ್ಟಿಲ್ಲ. ಅವರು ತಮ್ಮ ಉಮೇದುವಾರಿಕೆಯನ್ನು ಏಕೆ ಹಿಂತೆಗೆದುಕೊಂಡರು ಎಂಬುದನ್ನು ಆಗಲೇ ಬಹಿರಂಗವಾಗಿ ವಿವರಿಸಿದ್ದರು. ಈಗ ಅವರು ತಮ್ಮ ನಿಲುವನ್ನು ಬದಲಾಯಿಸಿಕೊಂಡಿದ್ದಾರೆ. ಆವರ ಮೇಲೆ ಯಾರೋ ಒತ್ತಡ ಹೇರುತ್ತಿರುವಂತೆ ಕಾಣುತ್ತಿದೆ. ಒತ್ತಡದಿಂದಾಗಿ ಅವರು ಈ ಆರೋಪಗಳನ್ನು ಮಾಡಿದ್ದಾರೆ. ಸಿಪಿಐ (ಎಂ) ಮತ್ತು ಐಯುಎಂಎಲ್ ಮೇಲೆ ನಮಗೆ ಅನುಮಾನವಿದೆ‘ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಹೇಳಿದ್ದಾರೆ.
ಇದನ್ನೂ ಓದಿ:Kerala Exit Poll 2021: ಕೇರಳದಲ್ಲಿ ಮರಳಿ ಬರಲಿದೆ ಪಿಣರಾಯಿ ಸರ್ಕಾರ
ದೂರು ದಾಖಲಿಸುವಂತೆ ಮನವಿ
ಈ ಮಧ್ಯೆ, 2021 ರ ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆದ ಸಿಪಿಐ (ಎಂ) ಅಭ್ಯರ್ಥಿ ವಿ ವಿ ರಮೇಶನ್ ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥರನ್ನು ಸಂಪರ್ಕಿಸಿದ್ದು, ಆರೋಪದ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಕೋರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪ್ರಮಾಣದ ಕಪ್ಪು ಹಣವನ್ನು ಬಳಸಿದೆ ಎಂದು ಸಿಪಿಐ (ಎಂ) ಆರೋಪಿಸಿದೆ.
ಇದನ್ನೂ ಓದಿ:ವಿಶ್ಲೇಷಣೆ: ನಾಯಕತ್ವದ ಭಿನ್ನ ಮಾದರಿ
ಫಲಿತಾಂಶ ಏನಾಗಿತ್ತು?
–ಐಯುಎಂಎಲ್‌ನ ಎ ಕೆ ಎಂ ಅಶ್ರಫ್– 65,758 ಮತ
–ಬಿಜೆಪಿಯ ಸುರೇಂದ್ರನ್– 65,013 ಮತ
–ಸಿಪಿಐಎಂ ರಮೇಶನ್– 40,639 ಮತ
–(ಐಯುಎಂಎಲ್‌ನ ಎ ಕೆ ಎಂ ಅಶ್ರಫ್‌ಗೆ 745 ಮತಗಳ ಜಯ)
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.