ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UP Election| ಕಣಕ್ಕಿಳಿಯಲಿದ್ದಾರೆ ಯೋಗಿ, ಡಿಸಿಎಂ ಮೌರ್ಯ, ಹಿರಿಯ ನಾಯಕರು 

Last Updated 29 ಜುಲೈ 2021, 13:03 IST
ಅಕ್ಷರ ಗಾತ್ರ

ಲಖನೌ: ಪಕ್ಷದ ಕಾರ್ಯಕರ್ತರ ಆತ್ಮಸ್ಥೈರ್ಯ ಹೆಚ್ಚಿಸಲು ಮತ್ತು ಗುಂಪುಗಾರಿಕೆ ನಿವಾರಿಸುವತ್ತ ಗಮನಹರಿಸಿರುವ ಬಿಜೆಪಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಸೇರಿದಂತೆ ಪ್ರಮುಖ ನಾಯಕರನ್ನು ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಕಣಕ್ಕಿಳಿಸಲು ತೀರ್ಮಾನಿಸಿದೆ.

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ವತಂತ್ರ ದಿಯೋ ಸಿಂಗ್ ಅವರನ್ನೂ ವಿಧಾನಸಭಾ ಚುನಾವಣೆ ಸ್ಪರ್ಧೆಗೆ ನಿಯೋಜಿಸಲಾಗುತ್ತಿದೆ. ಸದ್ಯ ವಿಧಾನ ಪರಿಷತ್ತಿನಲ್ಲಿರುವ ಇತರ ಕೆಲವು ಹಿರಿಯ ನಾಯಕರನ್ನೂ ಕೂಡ ಚುನಾವಣೆಗೆ ನಿಲ್ಲಿಸುವ ಸಾಧ್ಯತೆಗಳಿವೆ ಎಂದು ಬಿಜೆಪಿಯ ಮೂಲಗಳ ತಿಳಿಸಿವೆ.

ಸದ್ಯ ಉತ್ತರ ಪ್ರದೇಶದ ವಿಧಾನ ಪರಿಷತ್‌ ಸದಸ್ಯರಾಗಿರುವ ಆದಿತ್ಯನಾಥ್ ಅವರು ಗೋರಖ್‌ಪುರ ಅಥವಾ ಅಯೋಧ್ಯೆಯಿಂದ ವಿಧಾನಸಭೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ. ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಅವರನ್ನು ಲಖನೌ ನಗರದ ವಿಧಾನಸಭಾ ಕ್ಷೇತ್ರಗಳ ಪೈಕಿ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧೆಗೆ ನಿಲ್ಲಿಸಲಾಗುತ್ತದೆ. ಯೋಗಿ ಆದಿತ್ಯನಾಥ್‌ ಅವರು ಮುಖ್ಯಮಂತ್ರಿಯಾಗವುದಕ್ಕೂ ಮೊದಲು ಗೋರಖ್‌ಪುರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು.

ಅಯೋಧ್ಯೆಯಿಂದ ಆದಿತ್ಯನಾಥ್ ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದಲ್ಲಿ, ಸದ್ಯ ಆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವೇದಪ್ರಕಾಶ್ ಗುಪ್ತಾ ಅವರು ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂದು ಸೂಚಿಸಲಾಗಿದೆ. ‘ಯೋಗಿ ಅವರಿಗೆ ಕ್ಷೇತ್ರ (ಅಯೋಧ್ಯೆ) ಬಿಟ್ಟುಕೊಡಲು ನಾನು ಸದಾ ಸಿದ್ಧನಿದ್ದೇನ,‘ ಎಂದು ಗುಪ್ತಾ ಹೇಳಿದ್ದಾರೆ.

ವಿಧಾನಪರಿಷತ್‌ನ ಸದಸ್ಯರಾಗಿರುವ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಕೌಶಂಬಿ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ. ಕೌಶಂಬಿ ಮೌರ್ಯ ಅವರ ಹುಟ್ಟೂರು.

‘ಹಿರಿಯ ನಾಯಕರನ್ನು ಚುನಾವಣೆ ಕಣಕ್ಕಿಳಿಸುವುದರಿಂದ ಪಕ್ಷದ ಕಾರ್ಯಕರ್ತರ ಆತ್ಮಸ್ಥೈರ್ಯ ವೃದ್ಧಿಯಾಗುತ್ತದೆ. ಇದರಿಂದ ಕಾರ್ಯಕರ್ತರಿಗೆ ಸಕಾರಾತ್ಮಕ ಸಂದೇಶ ರವಾನೆಯಾಗುತ್ತದೆ. ಇದು ಉತ್ತರ ಪ್ರದೇಶ ಬಿಜೆಪಿಯಲ್ಲಿ ಇರುವ ಗುಂಪುಗಾರಿಕೆಯನ್ನೂ ನಿವಾರಿಸುತ್ತದೆ. ಪಕ್ಷದ ಉಮೇದುವಾರರನ್ನು ಗೆಲ್ಲಿಸಿಕೊಳ್ಳಲು ಬಣಗಳು ಒಗ್ಗಟ್ಟಿನಿಂದ ಹೋರಾಡುತ್ತವೆ,‘ ಎಂದು ಉತ್ತರ ಪ್ರದೇಶದ ಬಿಜೆಪಿ ಮುಖಂಡರು ಪ್ರಜಾವಾಣಿ ಸೋದರ ಪತ್ರಿಕೆ ‘ಡೆಕ್ಕನ್‌ ಹೆರಾಲ್ಡ್‌‘ನೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT