ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಹ್ಮಣ ವಿರೋಧಿ ಹೇಳಿಕೆ ಆರೋಪ: 'ಭಾರತ್‌ ಜೋಡೋ'ಗೆ ತಡೆ ಬೆದರಿಕೆ ಒಡ್ಡಿದ ಬಿಜೆಪಿ

Last Updated 21 ಸೆಪ್ಟೆಂಬರ್ 2022, 5:30 IST
ಅಕ್ಷರ ಗಾತ್ರ

ಭೋಪಾಲ್‌: ಮಧ್ಯ ಪ್ರದೇಶದ ಕಾಂಗ್ರೆಸ್‌ ನಾಯಕ ಕೆ.ಕೆ.ಮಿಶ್ರಾ ಅವರು ಬ್ರಾಹ್ಮಣ ಸಮುದಾಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, 'ಭಾರತ್‌ ಜೋಡೋ ಯಾತ್ರೆ'ಯನ್ನು ತಡೆಯುವ ಬೆದರಿಕೆ ಒಡ್ಡಿದೆ.

ರಾಜ್ಯ ಕಾಂಗ್ರೆಸ್‌ನ ಐಟಿ ಮುಖ್ಯಸ್ಥರೂ ಆಗಿರುವ ಮಿಶ್ರಾ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಇಲ್ಲದಿದ್ದರೆ ಭಾರತ್‌ ಜೋಡೋ ಯಾತ್ರೆ ರಾಜ್ಯವನ್ನು ಪ್ರವೇಶಿಸುತ್ತಿದ್ದಂತೆ ತಡೆಯುವುದಾಗಿ ಎಚ್ಚರಿಕೆ ನೀಡಿದೆ.

ಬಿಜೆಪಿ ಆರೋಪವನ್ನು ತಳ್ಳಿಹಾಕಿರುವ ಕೆ.ಕೆ.ಮಿಶ್ರಾ ಅವರು ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆಪಾದಿಸಿದ್ದಾರೆ.

ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ, ಮಾಜಿ ಸಿಎಂ ಕಮಲನಾಥ್‌ ಅವರ ನಿವಾಸದ ಹೊರಗೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಮಿಶ್ರಾ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಒತ್ತಾಯಿಸಿದ್ದಾರೆ.

ಮಿಶ್ರಾ ಅವರು ಸ್ಥಳೀಯ ಮಾಧ್ಯಮವೊಂದರ ಸಂದರ್ಶನದಲ್ಲಿ ಬ್ರಾಹ್ಮಣರ ಕುರಿತಾಗಿ ನೀಡಿರುವ ಹೇಳಿಕೆಯ ವಿಡಿಯೊ ತುಣುಕು ವೈರಲ್‌ ಆಗಿತ್ತು.

ಇತ್ತೀಚೆಗೆ ಜಬುವಾ ಜಿಲ್ಲೆಯ ಎಸ್‌ಪಿ ಅಮಾನತು ಮತ್ತು ಜಿಲ್ಲಾಧಿಕಾರಿಯ ವರ್ಗಾವಣೆಗೆ ಸಂಬಂಧಿಸಿ ವಿವಾದ ತಲೆದೋರಿದೆ. ರಕ್ಷಣೆಯನ್ನು ಕೇಳಿ ಕರೆ ಮಾಡಿದ್ದ ವಿದ್ಯಾರ್ಥಿಗಳಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪಕ್ಕೆ ಸಂಬಂಧಿಸಿ ಎಸ್‌ಪಿಯನ್ನು ಅಮಾನತು ಮಾಡಲಾಗಿದೆ. ಕಳಪೆ ಗುಣಮಟ್ಟದ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ ಎಂಬ ದೂರುಗಳಿಗೆ ಸಂಬಂಧಿಸಿ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಇಬ್ಬರೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಈ ವಿಚಾರವನ್ನು ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದ ಮಿಶ್ರಾ, 'ಬ್ರಾಹ್ಮಣನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಆದರೆ ಎಲ್ಲದಕ್ಕಿಂತ ಮಿಗಿಲು ಮಾನವೀಯತೆ. ನಾನು ತಪ್ಪುಗಳನ್ನು ಮಾಡಿರುವ ಆ _* (ಅವಾಚ್ಯ ಪದ) ಬ್ರಾಹ್ಮಣರನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದಿರುವುದು ವೈರಲ್‌ ಆಗಿರುವ ವಿಡಿಯೊದಲ್ಲಿದೆ.

ಕೆಲವು ಬಿಜೆಪಿ ನಾಯಕರು ಕಮಲನಾಥ್‌ ಅವರನ್ನು ಭೇಟಿಯಾಗಿ, ಮಿಶ್ರಾ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಘಟನೆಯ ಕುರಿತು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಕಮಲನಾಥ್‌ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT