ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಪತ್ರಕರ್ತನ ಜತೆಗಿನ ನಂಟು ಅಲ್ಲಗಳೆದ ಮಾಜಿ ಉಪರಾಷ್ಟ್ರಪತಿ ಅನ್ಸಾರಿ

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿಗೆ ಸಮ್ಮೇಳನದ ಚಿತ್ರ ಬಳಸಿಕೊಂಡ ಬಿಜೆಪಿ 
Last Updated 15 ಜುಲೈ 2022, 11:19 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿಯಿಂದ ಹೊಸದಾಗಿ ವಾಗ್ದಾಳಿ ಆರಂಭವಾದ ಬೆನ್ನಲ್ಲೇ ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರು, ‘ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಜಾ ಅವರನ್ನು ಯಾವುದೇ ಸಮಾವೇಶಕ್ಕೆ ಆಹ್ವಾನಿಸಿಲ್ಲ. ಆತ ತನಗೆ ಗೊತ್ತಿಲ್ಲವೆಂದು ನೀಡಿರುವ ಹೇಳಿಕೆಗೆ ಬದ್ಧವಾಗಿದ್ದೇನೆ’ ಎಂದು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

‘ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತಕ್ಕೆ ಐದು ಬಾರಿ ಭೇಟಿ ನೀಡಿದ್ದು, ಅಲ್ಲಿನ ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಿ, ಪಾಕ್‌ನ ಬೇಹುಗಾರಿಕೆ ಸಂಸ್ಥೆ ಐಎಸ್‌ಐಗೆ ರವಾನಿಸಿದ್ದೆ. ಹಮಿದ್‌ ಅನ್ಸಾರಿ ಅವರ ಆಹ್ವಾನದ ಮೇರೆಗೆ ಭಾರತಕ್ಕೆ ಹೋಗಿದ್ದೆ,ಅನ್ಸಾರಿ ಅವರನ್ನೂ ಭೇಟಿಯಾಗಿದ್ದೆ’ ಎನ್ನುವ ಅರ್ಥದಲ್ಲಿಮಿರ್ಜಾ ಇತ್ತೀಚೆಗೆ ಪಾಕ್‌ ಟಿ.ವಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ಆರೋಪಗಳನ್ನು ಅನ್ಸಾರಿ ಅವರು ಅಲ್ಲಗಳೆದಿದ್ದರು.

‘2009ರಲ್ಲಿನ ಭಯೋತ್ಪಾದನೆ ಕುರಿತ ವಿಚಾರಗೋಷ್ಠಿ ಅಥವಾ 2010ರ ಸಮಾವೇಶ ಸೇರಿ ಯಾವುದೇ ಸಮಾವೇಶಗಳಿಗೆ ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಜಾ ಅವರನ್ನು ಆಹ್ವಾನಿಸಿಲ್ಲ. ಆ ವ್ಯಕ್ತಿಯ ಬಗ್ಗೆ ಪರಿಚಯವಿಲ್ಲವೆಂದು ನೀಡಿರುವ ಹೇಳಿಕೆಗೆ ಮಾಜಿ ಉಪರಾಷ್ಟ್ರಪತಿ ಬದ್ಧರಾಗಿದ್ದಾರೆ’ ಎಂದು ಅನ್ಸಾರಿ ಅವರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.

ಭಾರತದಲ್ಲಿ 2009ರಲ್ಲಿ ಭಯೋತ್ಪಾದನೆ ಕುರಿತು ನಡೆದ ಸಮ್ಮೇಳನದಲ್ಲಿ ಮಾಜಿ ಉಪರಾಷ್ಟ್ರಪತಿ ಹಮಿದ್‌ ಅನ್ಸಾರಿ ಅವರ ಜತೆನುಸ್ರತ್‌ ಮಿರ್ಜಾ ಅವರು ವೇದಿಕೆ ಹಂಚಿಕೊಂಡಿರುವ ಹಳೆಯ ಚಿತ್ರ ಮುಂದಿಟ್ಟುಕೊಂಡು ಬಿಜೆಪಿ ಶುಕ್ರವಾರ ಕಾಂಗ್ರೆಸ್‌ ವಿರುದ್ಧ ಹೊಸದಾಗಿ ದಾಳಿ ಆರಂಭಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಛಾಯಾಚಿತ್ರ ಪ್ರದರ್ಶಿಸಿದಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ‘ಸಾಂವಿಧಾನಿಕ ಹುದ್ದೆಯಲ್ಲಿರುವವರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಮಿರ್ಜಾ ಜತೆ ಅನ್ಸಾರಿ ಅವರು ವೇದಿಕೆ ಹಂಚಿಕೊಳ್ಳಬಾರದಿತ್ತು. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವಾಗ, ವಿದೇಶಿ ಅತಿಥಿಗಳನ್ನು ಆಹ್ವಾನಿಸುವಾಗ ಗುಪ್ತಚರ ವಿಭಾಗದ ಅನುಮತಿ ಅಗತ್ಯವಿರುತ್ತದೆಯಲ್ಲವೇ?’ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT