ಶನಿವಾರ, ಮೇ 8, 2021
17 °C

ಹಾನಿಕಾರಕ ರಾಸಾಯನಿಕದ ಬಣ್ಣ ಎರಚಿದ ಟಿಎಂಸಿ ಬೆಂಬಲಿಗರು: ಬಿಜೆಪಿಯ ಲಾಕೆಟ್ ಚಟರ್ಜಿ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ವಿಧಾನಸಭಾ ಚುನಾವಣೆ ಅಂಗವಾಗಿ ಶನಿವಾರ ಹೂಗ್ಲಿಯಲ್ಲಿ ಪ್ರಚಾರ ನಡೆಸುತ್ತಿರುವಾಗ ನನ್ನ ಮುಖಕ್ಕೆ 'ಹಾನಿಕಾರಕ ರಾಸಾಯನಿಕಗಳು' ಇರುವ ಬಣ್ಣವನ್ನು ಎಸೆಯಲಾಗಿದೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ಲಾಕೆಟ್ ಚಟರ್ಜಿ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಒರಟಾದ ವಸ್ತುವನ್ನು ನನ್ನ ಮೇಲೆ ಎಸೆಯಲಾಯಿತು. ಅದನ್ನು ಯಾರು ಎಸೆದರು ಎಂದು ನಾನು ನೋಡಿದಾಗ, ಟಿಎಂಸಿ ಬ್ಯಾಡ್ಜ್ ಧರಿಸಿದ ಮೂರ್ನಾಲ್ಕು ಜನರು ಹತ್ತಿರದಲ್ಲಿ ನಿಂತಿರುವುದು ಕಂಡಿತು. ಅವರೇ ನನ್ನ ಮೇಲೆ ಎಸೆದಿದ್ದಾರೆ' ಎಂದು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಇದು 'ಹೇಡಿತನದ ಕೃತ್ಯ' ಎಂದು ಕರೆದಿದೆ.

'ಕೊಡಾಲಿಯಾ ನಂ 2 ಮತ್ತು ಜಿ.ಪಿ. ಪ್ರಧಾನ್ ಬಿದ್ಯುತ್ ಬಿಸ್ವಾಸ್ ನೇತೃತ್ವದ ಟಿಎಂಸಿ ಗೂಂಡಾಗಳು ಚಿನ್ಸುರಾ ಅಸೆಂಬ್ಲಿಯ ಬಿಜೆಪಿ ಅಭ್ಯರ್ಥಿ ಲಾಕೆಟ್ ಚಟರ್ಜಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ದ್ವೇಷ, ಹಿಂಸೆ ಮತ್ತು ಕಿರುಕುಳದ 'ಖೇಲಾ' ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಸೋಲಿನ ಭಯದಿಂದಾಗಿ ಮಹಿಳೆಯರಿಗೆ ಕಿರುಕುಳ ನೀಡುವ ಈ ಹೇಡಿತನದ 'ಖೇಲಾ'ವನ್ನು ಮಾಡಲಾಗಿದೆ!' ಎಂದು ಬಂಗಾಳದ ಬಿಜೆಪಿ ಘಟಕ ಟ್ವೀಟ್ ಮಾಡಿದೆ.

ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಡ ಟಿಎಂಸಿಯನ್ನು ಸೋಲಿಸಲು ಪಣ ತೊಟ್ಟಿರುವ ಬಿಜೆಪಿ ತನ್ನ ಅಭಿಯಾನವನ್ನು ಆಕ್ರಮಣಕಾರಿಯಾಗಿ ನಡೆಸುತ್ತಿದೆ. ಚುನಾವಣೆಯಲ್ಲಿ ಬಹುಮತವನ್ನು ಪಡೆದುಕೊಳ್ಳುವುದಾಗಿ ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವನ್ನು ಉಚ್ಚಾಟಿಸುವುದಾಗಿ ಪ್ರತಿಜ್ಞೆ ಮಾಡಿದೆ. ಗೆಲುವು ಪಡೆದೇ ತೀರಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ವಿವಿಧ ಕೇಂದ್ರ ಸಚಿವರವರೆಗೆ ಪಕ್ಷವು ಅನೇಕ ಸ್ಟಾರ್ ಪ್ರಚಾರಕರನ್ನು ಕಣಕ್ಕಿಳಿಸಿದೆ.

ವಿವಿಧ ಟಿಎಂಸಿ ನಾಯಕರು ಟಿಎಂಸಿಯನ್ನು ತ್ಯಜಿಸಿ ಬಿಜೆಪಿಗೆ ಸೇರಿರುವುದು ಪಕ್ಷಕ್ಕೆ ವಿಶ್ವಾಸವನ್ನು ನೀಡಿದೆ. ಟಿಎಂಸಿಯ ಪ್ರಮುಖ ನಾಯಕರಲ್ಲಿ ಒಬ್ಬರಾದ ಸ್ಥಳೀಯವಾಗಿ ಬಲಿಷ್ಠವಾಗಿದ್ದ ಸುವೇಂದು ಅಧಿಕಾರಿ ಡಿಸೆಂಬರ್‌ನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ನಂದಿಗ್ರಾಮದಿಂದ ಬಿಜೆಪಿ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಣಕ್ಕಿಳಿದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು