ಗುರುವಾರ , ಜೂನ್ 30, 2022
22 °C
ಮಕ್ಕಳಿಗೂ ಲಸಿಕೆ ಅಗತ್ಯ ಎಂದು ಪ್ರತಿಪಾದನೆ

ಬೂಸ್ಟರ್‌ ಡೋಸ್‌ನಿಂದ ರೋಗನಿರೋಧಕ ಶಕ್ತಿ ವೃದ್ಧಿ: ಸೂಕ್ಷ್ಮರೋಗಾಣು ತಜ್ಞರ ಅಭಿಮತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಕೋವಿಡ್‌–19 ವಿರುದ್ಧದ ಲಸಿಕೆಯ ಬೂಸ್ಟರ್‌ ಡೋಸ್ ದೇಹದಲ್ಲಿ ರೋಗನಿರೋಧಕಶಕ್ತಿ ಹೆಚ್ಚಿಸಲಿದ್ದು, ಓಮೈಕ್ರಾನ್‌ ಸೋಂಕು ಪರಿಣಾಮದ ವಿರುದ್ಧವೂ ರಕ್ಷಣೆ ನೀಡಲಿದೆ’ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕೋವಿಡ್‌ ರೂಪಾಂತರ ಸೋಂಕಿನ ಪರಿಣಾಮ ತಡೆಗೆ ಬೂಸ್ಟರ್‌ ಸರಳವಾದ ಮಾರ್ಗ ಎಂದು ಪ್ರತಿಪಾದಿಸಿದ್ದಾರೆ.

ಬ್ರಿಟನ್‌ನ ಆರೋಗ್ಯ ಭದ್ರತಾ ಸಂಸ್ಥೆಯು (ಯುಕೆಎಚ್ಎಸ್‌ಎ), ‘ಕೋವಿಶೀಲ್ಡ್‌ ಲಸಿಕೆಯ ಬೂಸ್ಟರ್ ಡೋಸ್‌ ಓಮೈಕ್ರಾನ್‌ ಸೋಂಕಿನ ವಿರುದ್ಧ ಪರಿಣಾಮಕಾರಿ. ಇದು, ಓಮೈಕ್ರಾನ್‌ನಿಂದ ಶೇ 70 ರಿಂದ 75ರಷ್ಟು ರಕ್ಷಣೆ ನೀಡಲಿದೆ. ಕೋವಿಡ್‌ನ ಯಾವುದೇ ಲಸಿಕೆಯ ಬೂಸ್ಟರ್ ಡೋಸ್‌ನಿಂದ ನಿರೋಧಕ ಶಕ್ತಿ ವೃದ್ಧಿಸಲಿದೆ’ ಎಂದು ಹೇಳಿತ್ತು.

ಇದಕ್ಕೆ ಸೂಕ್ಷ್ಮರೋಗಾಣು ತಜ್ಞ ಡಾ.ಶಾಹೀದ್‌ ಜಮೀಲ್‌ ಅವರು, ‘ಬೂಸ್ಟರ್‌ ಡೋಸ್‌ ಅಗತ್ಯ. ಗಂಭೀರ ರೋಗದ ವಿರುದ್ಧ ಎರಡು ಡೋಸ್‌ ಲಸಿಕೆಯು ಎಷ್ಟರ ಮಟ್ಟಿಗೆ ರಕ್ಷಣೆ ನೀಡುವುದೋ ತಿಳಿದಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಕೋವಿಡ್‌ಗೆ ಸಂಬಂಧಿಸಿ ದೇಶದ ಸಲಹಾ ಸಮಿತಿಯ ಮಾಜಿ ಮುಖ್ಯಸ್ಥರೂ ಆದ ಅವರು, ಭಾರತದಲ್ಲಿ
ಹೆಚ್ಚಿನವರು ಕೋವಿಶೀಲ್ಡ್‌ ಲಸಿಕೆ ಪಡೆದಿದ್ದಾರೆ. ಈಗ ಒಂದು ಡೋಸ್ ಪಡೆದಿರುವವರು ಎರಡನೇ ಡೋಸ್ ಲಸಿಕೆಯನ್ನು 8–12 ವಾರಗಳ ಬದಲು, 12–16 ವಾರದ ಅಂತರದಲ್ಲಿ ಪಡೆಯಬೇಕು ಎಂದು ಸಲಹೆ ಮಾಡಿದ್ದಾರೆ.

ಓಮೈಕ್ರಾನ್‌ ಸೋಂಕನ್ನು ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್ ಲಸಿಕೆಯು ಎಷ್ಟರಮಟ್ಟಿಗೆ ನಿಸ್ತೇಜಗೊಳಿಸಲಿದೆ ಎಂಬ ಬಗ್ಗೆ ಅಧ್ಯಯನ ನಡೆಯಬೇಕು. ಬೂಸ್ಟರ್‌ ಲಸಿಕೆ ನೀಡುವ ಕುರಿತು ನೀತಿ ರೂಪಿಸಬೇಕು. ಯಾವ ಲಸಿಕೆ ಪಡೆಯಬೇಕು, ಯಾರು ಪಡೆಯಬೇಕು, ಯಾವಾಗ ಪಡೆಯಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಬೇಕು. ಹದಿಹರೆಯದವರೂ ಒಳಗೊಂಡಂತೆ ಮಕ್ಕಳಿಗೆ ಲಸಿಕೆ ನೀಡಲು ಆದಷ್ಟು ಶೀಘ್ರ ಚಾಲನೆ ನೀಡಬೇಕು ಎಂದು ಹೇಳಿದರು.

ಬೂಸ್ಟರ್‌ಡೋಸ್‌ ಆಗಿ ಕೋವ್ಯಾಕ್ಸಿನ್‌, ಕೋವಿಶೀಲ್ಡ್, ಡಿಎನ್‌ಎ ಸಂಸ್ಥೆಯ ಝೈಕೋವ್‌ ಡಿ, ಎಸ್‌ಐಐ ಸಂಸ್ಥೆಯ ಕೊವೊವ್ಯಾಕ್ಸ್, ಬಯೊಲಾಜಿಕಲ್‌ ಇ ಸಂಸ್ಥೆಯ ಕೋರ್ಬೆವ್ ಎಎಕ್ಸ್‌–ಇ ಲಸಿಕೆಗಳನ್ನು ಪರಿಗಣಿಸಬಹುದು ಎಂದಿದ್ದಾರೆ.

ಕೋವಿಡ್ ಲಸಿಕೆ ಕುರಿತ ರಾಷ್ಟ್ರೀಯ ತಜ್ಞರ ಸಮಿತಿ ಹಾಗೂ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯು, ಬೂಸ್ಟರ್‌ ಡೋಸ್‌ ನೀಡುವುದರ ಸಂಬಂಧ ವೈಜ್ಞಾನಿಕ ಅಧ್ಯಯನ ದಾಖಲೆಗಳನ್ನು ಪರಿಶೀಲಿಸುತ್ತಿದೆ ಎಂದು ಆರೋಗ್ಯ ಸಚಿವಾಲಯವು ಕಳೆದ ವಾರ ಲೋಕಸಭೆಗೆ ಮಾಹಿತಿ ನೀಡಿತ್ತು.

ಸೂಕ್ಷ್ಮರೋಗಾಣು ತಜ್ಞ ಡಾ.ಟಿ.ಜಾಕೊಬ್‌ ಜಾನ್‌ ಅವರು, ಯಾವುದೇ ಲಸಿಕೆಯ ಬೂಸ್ಟರ್‌ ಡೋಸ್‌ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ. 

ಓಮೈಕ್ರಾನ್‌ ಸೋಂಕು ಮಕ್ಕಳಿಗೆ ಹೆಚ್ಚಾಗಿ ಬಾಧಿಸುವ ಸಂಭವ ಇರುವುದರಿಂದಮಕ್ಕಳಿಗೂ ಲಸಿಕೆಯನ್ನು ನೀಡುವಅಗತ್ಯವಿದೆ ಎಂದು ಐಸಿಎಂಆರ್‌ ಸೂಕ್ಷ್ಮರೋಗಾಣು ಅತ್ಯಾಧುನಿಕ ಸಂಶೋಧನಾ ಕೇಂದ್ರದ ಮಾಜಿ ನಿರ್ದೇಶಕರೂ ಆಗಿರುವ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು