ಶನಿವಾರ, ಜುಲೈ 31, 2021
28 °C

12ನೇ ತರಗತಿ: ಆಯ್ದ ವಿಷಯಗಳಲ್ಲಿ ಮಾತ್ರ ಪರೀಕ್ಷೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: 12ನೇ ತರಗತಿಯ ವಿದ್ಯಾರ್ಥಿಗಳಿಗೆ ಕೆಲವು ವಿಷಯಗಳಲ್ಲಿ ಮಾತ್ರ ಪರೀಕ್ಷೆಗಳನ್ನು ನಡೆಸಬೇಕು ಮತ್ತು ಹಂತ ಹಂತವಾಗಿ ನಡೆಸಬೇಕು ಎಂಬ ಸಲಹೆಯನ್ನು ಬಹುತೇಕ ಎಲ್ಲಾ ರಾಜ್ಯಗಳು ಸ್ವೀಕರಿಸಿವೆ.

ವಿವಿಧ ರಾಜ್ಯಗಳ ಶಿಕ್ಷಣ ಇಲಾಖೆಗಳ ಪ್ರತಿನಿಧಿಗಳ ಜತೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ವಿಚಾರದಲ್ಲಿ ಒಮ್ಮತ ವ್ಯಕ್ತವಾಗಿದೆ.

‘ಪರೀಕ್ಷೆ ನಡೆಸುವ ವಿಚಾರದಲ್ಲಿ ಕೇಂದ್ರವು ಅಂತಿಮ ತೀರ್ಮಾನ ಕೈಗೊಳ್ಳುವುದಕ್ಕೂ ಮುನ್ನ, ಮೇ 25 ರೊಳಗಾಗಿ ತಮ್ಮ ಅಭಿಪ್ರಾಯಗಳನ್ನು ಲಿಖಿತರೂಪದಲ್ಲಿ ಸಲ್ಲಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ’ ಎಂದು ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ತಿಳಿಸಿದ್ದಾರೆ.

ಕೆಲವೇ ಕೆಲವು ವಿಷಯಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲೇ ಪರೀಕ್ಷೆ ನಡೆಸುವುದು ಮತ್ತು ಬಹು ಆಯ್ಕೆ ಮಾದರಿಯಲ್ಲಿ ಎಲ್ಲಾ ವಿಷಯಗಳಿಗೂ ಗರಿಷ್ಠ ತಲಾ 90 ನಿಮಿಷಗಳ ಪರೀಕ್ಷೆ ನಡೆಸುವುದು ಎಂಬ ಎರಡು ಪ್ರಸ್ತಾವಗಳನ್ನು ರಾಜ್ಯಗಳ ಮುಂದಿಡಲಾಗಿತ್ತು. ಭೌತಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸುವ ಬಗ್ಗೆಯೂ ಮಂಡಳಿಯು ಪ್ರಸ್ತಾಪಿಸಿತ್ತು. ಕರ್ನಾಟಕ ಹಾಗೂ ತಮಿಳುನಾಡಿನ ಪ್ರತಿನಿಧಿಗಳು 12ನೇ ತರಗತಿಗೆ ಪರೀಕ್ಷೆಗಳನ್ನು ನಡೆಸುವುದರ ಪರವಾಗಿ ಮಾತನಾಡಿದರೆ, ದೆಹಲಿ ಹಾಗೂ ಮಹಾರಾಷ್ಟ್ರ ಪ್ರತಿನಿಧಿಗಳು ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಲಸಿಕೆಗಳನ್ನು ನೀಡಬೇಕು ಎಂದು ಒತ್ತಾಯಿಸಿದವು.

ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ನಡೆಸುವ ಬಗ್ಗೆ ಜೂನ್‌ 1ರಂದು ನಿರ್ಧಾರ ತೆಗೆದುಕೊಳ್ಳಲಾಗುವುದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು