ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ವಿರೋಧಿ ಪಕ್ಷಗಳಲ್ಲಿ ಹುರುಪು ಮೂಡಿಸಿದ 4 ರಾಜ್ಯಗಳ ಉಪಚುನಾವಣೆ ಫಲಿತಾಂಶ

Last Updated 16 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ನವದೆಹಲಿ: ವಿಧಾನಸಭೆಯ ನಾಲ್ಕು ಮತ್ತು ಲೋಕಸಭೆಯ ಒಂದು ಕ್ಷೇತ್ರದ ಉಪಚುನಾವಣೆ ಫಲಿತಾಂಶವು ವಿರೋಧ ಪಕ್ಷಗಳಲ್ಲಿ ಹುರುಪು ಮೂಡಿಸಿದೆ. ಎಲ್ಲ ಐದು ಕ್ಷೇತ್ರಗಳಲ್ಲಿಯೂ ಎನ್‌ಡಿಎಯೇತರ ಪಕ್ಷಗಳು ಗೆದ್ದಿವೆ. ಕಾಂಗ್ರೆಸ್‌ ಮತ್ತು ಆರ್‌ಜೆಡಿ, ಪ್ರತಿಸ್ಪರ್ಧಿಗಳಿಂದ ತಲಾ ಒಂದೊಂದು ವಿಧಾನಸಭಾ ಕ್ಷೇತ್ರಗಳನ್ನು ಕಸಿದುಕೊಂಡಿವೆ.

ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷವು ಅಸನ್‌ಸೋಲ್‌ ಲೋಕಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಗೆದ್ದಿದೆ. ಹಿಂದಿನ ಎರಡು ಚುನಾವಣೆಗಳಲ್ಲಿ ಇಲ್ಲಿ ಬಿಜೆಪಿ ಗೆದ್ದಿತ್ತು. ಬಾಬುಲ್‌ ಸುಪ್ರಿಯೊ ಬಿಜೆಪಿಯಿಂದ ಗೆದ್ದಿದ್ದರು. ಅವರು ಬಿಜೆಪಿ ತೊರೆದು ಟಿಎಂಸಿ ಸೇರ್ಪಡೆಯಾದ ಕಾರಣಕ್ಕೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಇಲ್ಲಿ ಉಪಚುನಾವಣೆ ನಡೆದಿತ್ತು. ಈ ಬಾರಿ, ಟಿಎಂಸಿಯಿಂದ ಬಾಲಿವುಡ್‌ ನಟ ಶತ್ರುಘ್ನ ಸಿನ್ಹಾ ಗೆದ್ದಿದ್ದಾರೆ. ಪಶ್ಚಿಮ ಬಂಗಾಳದ ಬಾಲಿಗಂಜ್‌ ವಿಧಾನಸಭಾ ಕ್ಷೇತ್ರದಿಂದ ಬಾಬುಲ್‌ ಸುಪ್ರಿಯೊ ಆಯ್ಕೆಯಾಗಿದ್ದಾರೆ.

ಮಹಾರಾಷ್ಟ್ರದ ಕೊಲ್ಹಾಪುರ ಉತ್ತರ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಂಡಿದೆ. ಛತ್ತೀಸಗಡದ ಖೈರಗಡ ವಿಧಾನಸಭಾ ಕ್ಷೇತ್ರವನ್ನು ಜನತಾ ಕಾಂಗ್ರೆಸ್‌ ಛತ್ತೀಸಗಡ (ಜೆ) ಪಕ್ಷದಿಂದ ಕಾಂಗ್ರೆಸ್‌ ಕಸಿದುಕೊಂಡಿದೆ. ಬಿಹಾರದ ಬೊಚಹಾಂ ಕ್ಷೇತ್ರವನ್ನು ವಿಕಾಸಶೀಲ ಇನ್ಸಾನ್‌ ಪಕ್ಷದಿಂದ ಆರ್‌ಜೆಡಿ ಕಸಿದುಕೊಂಡಿದೆ.

ಶತ್ರುಘ್ನ ಸಿನ್ಹಾ ಅವರು ಬಿಜೆಪಿಯ ಅಗ್ನಿಮಿತ್ರಾ ಪಾಲ್‌ ಅವರನ್ನು 3.03 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ಬಾಲಿಗಂಜ್‌ನಲ್ಲಿ ಬಾಬುಲ್‌ ಸುಪ್ರಿಯೊ ಅವರು ಸಿಪಿಎಂನ ಸಾಯಿರಾ ಶಾ ಹಲೀಂ ಅವರನ್ನು 20,228 ಮತಗಳಿಂದ ಸೋಲಿಸಿದ್ದಾರೆ. ಸಾಯಿರಾ ಅವರು ಬಾಲಿವುಡ್‌ ನಟ ನಾಸಿರುದ್ದೀನ್‌ ಶಾ ಅವರ ಮಗಳು.

ಪಶ್ಚಿಮ ಬಂಗಾಳದ ಸಚಿವರಾಗಿದ್ದ ಸುಬ್ರತಾ ಮುಖರ್ಜಿ ಅವರ ನಿಧನದಿಂದಾಗಿ ಬಾಲಿಗಂಜ್‌ ಕ್ಷೇತ್ರ ತೆರವಾಗಿತ್ತು. ಬಾಬುಲ್‌ ಅವರನ್ನು ಪಶ್ಚಿಮ ಬಂಗಾಳ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ. ಈಗಿನ ಫಲಿತಾಂಶವು ಸಿಪಿಎಂಗೂ ಚೈತನ್ಯ ತುಂಬಿದೆ. ಶೇ 36ರಷ್ಟು ಮತ ಪಡೆದ ಸಿಪಿಎಂ, ಬಾಲಿಗಂಜ್‌ನಲ್ಲಿ ಟಿಎಂಸಿಯ ನೇರ ಎದುರಾಳಿಯಾಗಿ ಹೊರಹೊಮ್ಮಿದೆ.

ಬಿಹಾರದ ಬೊಚಹಾಂ ಕ್ಷೇತ್ರದ ಗೆಲುವು ಆರ್‌ಜೆಡಿಯಲ್ಲಿ ಸಂಭ್ರಮ ಮೂಡಿಸಿದೆ. ಆರ್‌ಜೆಡಿ ಅಭ್ಯರ್ಥಿ ಅಮರ್‌ ಕುಮಾರ್‌ ಪಾಸ್ವಾನ್‌ ಅವರು ಬಿಜೆಪಿಯ ಬೇಬಿ ಕುಮಾರಿ ಅವರನ್ನು 36,653 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.

ಮಹಾರಾಷ್ಟ್ರದ ಕೊಲ್ಹಾಪುರ ಉತ್ತರ ಕ್ಷೇತ್ರದಲ್ಲಿ ಕಠಿಣ ಸ್ಪರ್ಧೆ ಒಡ್ಡುವ ಸುಳಿವನ್ನು ಬಿಜೆಪಿ ನೀಡಿತ್ತು. ಕೋಮು ನೆಲೆಯಲ್ಲಿ ಧ್ರುವೀಕರಣದ ಯತ್ನಗಳು ನಡೆದಿದ್ದವು. ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ಅವಕಾಶ ಕೊಡಬಾರದು ಎಂದು ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹೇಳಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು. ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ ಆಘಾಡಿಯ ಆತ್ಮವಿಶ್ವಾಸವನ್ನು ಕೊಲ್ಹಾಪುರದ ಗೆಲುವು ಹೆಚ್ಚಿಸಿದೆ. ಕಾಂಗ್ರೆಸ್‌ನ ಜಯಶ್ರೀ ಜಾಧವ್‌ ಅವರು ಬಿಜೆಪಿಯ ಸತ್ಯಜಿತ್ ಕದಂ ಅವರನ್ನು 19,307 ಮತಗಳಿಂದ ಸೋಲಿಸಿದ್ದಾರೆ.

ಛತ್ತೀಸಗಡ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಇಲ್ಲಿನ ಖೈರಗಡ ಕ್ಷೇತ್ರದಲ್ಲಿನ ಗೆಲುವು ಕಾಂಗ್ರೆಸ್‌ನ ಆತ್ಮಸ್ಥೈರ್ಯ ಹೆಚ್ಚಿಸಬಹುದು. ಹಾಗೆಯೇ, ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಅವರ ಕೈ ಬಲಪಡಿಸಬಹುದು.

ಬಿಜೆಪಿಯಲ್ಲಿ ಅತೃಪ್ತಿ

ಬಿಜೆಪಿ ಸಂಸದೆ ಸೌಮಿತ್ರಾ ಖಾನ್‌ ಅವರು ಪಕ್ಷದ ಪಶ್ಚಿಮ ಬಂಗಾಳ ರಾಜ್ಯ ಘಟಕದ ನಾಯಕತ್ವವನ್ನು ಟೀಕಿಸಿದ್ದಾರೆ. ‘ಈ ಫಲಿತಾಂಶವು ನಿರೀಕ್ಷಿತವೇ ಆಗಿತ್ತು. ರಾಜಕೀಯ ಪಕ್ವತೆ ಇಲ್ಲದ ಅನನುಭವಿ ನಾಯಕರು ನಿರ್ಧಾರ ಕೈಗೊಂಡರೆ ಇಂತಹ ಫಲಿತಾಂಶ ದೊರೆಯುತ್ತದೆ. ಪಕ್ಷದಿಂದ ಅಮಾನತಾಗಿರುವ ಮುಖಂಡರನ್ನು ವಾಪಸ್‌ ಕರೆಸಿಕೊಳ್ಳಬೇಕು. ಚುನಾವಣೆ ಗೆಲ್ಲುವುದು ಹೇಗೆ ಎಂಬುದನ್ನು ಟಿಎಂಸಿಯಿಂದ ಬಿಜೆಪಿ ಕಲಿಯಬೇಕು’ ಎಂದು ಖಾನ್‌ ಹೇಳಿದ್ದಾರೆ.

ಟಿಎಂಸಿಯಲ್ಲಿದ್ದ ಖಾನ್‌ ಅವರು 2019ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT