ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಜೀವ ದಹನ ಪ್ರಕರಣದ ತನಿಖೆ ಸಿಬಿಐಗೆ: ಕಲ್ಕತ್ತ ಹೈಕೋರ್ಟ್‌ ಆದೇಶ

ಸಂಪೂರ್ಣ ಸಹಕಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ
Last Updated 25 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ಬಿರ್‌ಭೂಮ್‌ನಲ್ಲಿನ ಸಜೀವ ದಹನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಕಲ್ಕತ್ತ ಹೈಕೋರ್ಟ್‌ ಶುಕ್ರವಾರ ಆದೇಶ ನೀಡಿದೆ. ಪ್ರಕರಣದ ತನಿಖೆಗೆ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸಿಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುತ್ತಿರುವುದಾಗಿ ಹೈಕೋರ್ಟ್‌ ಹೇಳಿದೆ.

ಶುಕ್ರವಾರ ಸಂಜೆಯೇ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಶನಿವಾರದಿಂದ ತನಿಖೆ ಆರಂಭಿಸುವುದಾಗಿ ಹೇಳಿದೆ.

ಮಾರ್ಚ್‌ 22ರ ಮಂಗಳವಾರ ಬಿರ್‌ಭೂಮ್ ಜಿಲ್ಲೆಯ ರಾಮ್‌ಪುರಹಾಟ್‌ನ ಟಿಎಂಸಿ ಪಂಚಾಯಿತಿ ಸದಸ್ಯನ ಹತ್ಯೆ ನಡೆದಿತ್ತು. ಅದರ ಬೆನ್ನಲ್ಲೇ ಪಕ್ಕದ ಬೋಗ್‌ತುಇ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಕೃತ್ಯದಲ್ಲಿ 8 ಜನರು ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿತ್ತು. ತನಿಖೆಯನ್ನು ಸಿಬಿಐ ಅಥವಾ ಎನ್‌ಐಎಗೆ ವರ್ಗಾಯಿಸಬೇಕು ಎಂದು ಕೋರಿ ಹಲವರು ಕಲ್ಕತ್ತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಗಳನ್ನು ವಜಾ ಮಾಡಿದ್ದ ಹೈಕೋರ್ಟ್‌, ಸ್ವಯಂಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಎಲ್ಲಾ ಮಾಹಿತಿಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಮತ್ತು ಎಸ್‌ಐಟಿಗೆ ಸೂಚನೆ ನೀಡಿತ್ತು. ಹೀಗೆ ಸಲ್ಲಿಸಲಾಗಿದ್ದ ವರದಿಯನ್ನು ಶುಕ್ರವಾರ ಪರಿಶೀಲಿಸಿದ ಹೈಕೋರ್ಟ್‌, ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ‘ಮಾರ್ಚ್‌ 22ರಂದೇ ಎಸ್‌ಐಟಿ ರಚಿಸಲಾಗಿದೆ. ಆದರೆ ಈವರೆಗೆ ತನಿಖೆಯಲ್ಲಿ ಈವರೆಗೆ ಯಾವುದೇ ಪ್ರಗತಿಯಾಗಿಲ್ಲ.ಇದು ಭಯಾನಕ ಕೃತ್ಯವಾಗಿದ್ದು, ಇಂತಹ ಪ್ರಕರಣದಲ್ಲೂ ಎಸ್‌ಐಟಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿಲ್ಲ. ತನಿಖೆಗೆ ಎಸ್‌ಐಟಿ ಪರಿಣಾಮಕಾರಿಯಾದ ಯಾವುದೇ ಕೊಡುಗೆಯನ್ನು ನೀಡಿಲ್ಲ’ ಎಂದು ಹೈಕೋರ್ಟ್‌ ಪೀಠವು ಹೇಳಿದೆ.

‘ಸಿಬಿಐ ಈ ಪ್ರಕರಣದ ತನಿಖೆ ನಡೆಸಲಿದೆ. ಎಸ್‌ಐಟಿ ಈವರೆಗೆ ಸಂಗ್ರಹಿಸಿರುವ ಎಲ್ಲಾ ಸಾಕ್ಷ್ಯಗಳು, ಬಂಧಿಸಿರುವ ಆರೋಪಿಗಳು, ತನಿಖೆಯ ವರದಿಗಳನ್ನು ಶೀಘ್ರವೇ ಸಿಬಿಐಗೆ ವರ್ಗಾಯಿಸಬೇಕು. ತನಿಖೆಗೆ ರಾಜ್ಯ ಸರ್ಕಾರವೂ ಸಂಪೂರ್ಣ ಸಹಕಾರ ನೀಡಬೇಕು’ ಎಂದು ಸೂಚನೆ ನೀಡಿದೆ.‘ಸಿಬಿಐ ತಕ್ಷಣವೇ ತನಿಖೆ ಆರಂಭಿಸಬೇಕು. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್‌ 7ರಂದು ನಡೆಯಲಿದೆ. ಅಂದು ತನಿಖೆಯ ಪ್ರಗತಿ ವರದಿಯನ್ನು ಸಲ್ಲಿಸಬೇಕು’ ಎಂದೂ ಸೂಚನೆ ನೀಡಿದೆ.

ವಿರೋಧ ಪಕ್ಷಗಳ ಸ್ವಾಗತ: ಪ್ರಕರಣದ ತನಿಖೆಯನ್ನು ಹೈಕೋರ್ಟ್‌ ಸಿಬಿಐಗೆ ವಹಿಸಿದ್ದನ್ನು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಸ್ವಾಗತಿಸಿವೆ. ಟಿಎಂಸಿ ಸಹ ಹೈಕೋರ್ಟ್‌ನ ಆದೇಶವನ್ನು ಸ್ವಾಗತಿಸಿದೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದೆ.

‘ತನಿಖೆಯನ್ನು ಸಿಬಿಐ ನಡೆಸುವುದರಲ್ಲಿ ನಮಗೆ ಯಾವುದೇ ಆಕ್ಷೇಪವಿಲ್ಲ. ಆದರೆ, ಈ ಕೃತ್ಯದ ಹಿಂದೆ ಬಹುದೊಡ್ಡ ಸಂಚು ನಡೆದಿದೆ ಎಂಬ ಸತ್ಯವನ್ನು ಮರೆಮಾಚಲು, ಸಿಬಿಐ ತನಿಖೆ ಬಳಕೆಯಾಗಬಾರದು’ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು ಹೇಳಿದ್ದಾರೆ.

ತಜ್ಞರ ತಂಡದಿಂದ ಮಾದರಿ ಸಂಗ್ರಹ
ಬೋಗ್‌ತುಯಿಯಲ್ಲಿ ಎಂಟು ಜನರು ಸಜೀವ ದಹನಕ್ಕೆ ತುತ್ತಾದ ಮನೆಗಳಿಗೆ ದೆಹಲಿಯ ಕೇಂದ್ರೀಯ ವಿಧಿ–ವಿಜ್ಞಾನ ಪ್ರಯೋಗಾಲಯದ (ಸಿಎಫ್‌ಎಸ್‌ಎಲ್‌) ತಜ್ಞರ ತಂಡವು ಶುಕ್ರವಾರ ಭೇಟಿ ನೀಡಿತ್ತು. ಬೆಂಕಿಗೆ ಆಹುತಿಯಾದ ಮನೆಗಳಿಂದ ಮಾದರಿಗಳನ್ನು ಈ ತಂಡವು ಸಂಗ್ರಹಿಸಿದೆ.

ಘಟನಾ ಸ್ಥಳದಿಂದ ಮಾದರಿಗಳನ್ನು ತಕ್ಷಣವೇ ಸಂಗ್ರಹಿಸಿ ಎಂದು ಕಲ್ಕತ್ತ ಹೈಕೋರ್ಟ್‌, ದೆಹಲಿಯ ಸಿಎಫ್‌ಎಸ್‌ಎಲ್‌ಗೆ ಬುಧವಾರ ಆದೇಶಿಸಿತ್ತು.

ರಾಜ್ಯಸಭೆ, ವಿಧಾನಸಭೆಯಲ್ಲೂ ಗದ್ದಲ
ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಎಂಬುದನ್ನುಸಜೀವ ದಹನ ಪ್ರಕರಣವು ಸಾಬೀತು ಮಾಡಿದೆ. ರಾಜ್ಯ ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಟಿಎಂಸಿ ಸಂಸದೆ ರೂಪಾ ಗಂಗೂಲಿ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ಆಗ್ರಹಿಸಿದ್ದಾರೆ.

ರಾಜ್ಯಸಭಾ ಕಲಾಪದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ರೂ‍ಪಾ ಅವರು, ‘ ನಮಗೆ ಜೀವಿಸುವ ಹಕ್ಕಿದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಜನಿಸಿದ್ದೇ ದೊಡ್ಡ ಅಪರಾಧವೆಂಬಂತಾಗಿದೆ. ಅಲ್ಲಿ ಜನರನ್ನು ಸಜೀವವಾಗಿ ಸುಡಲಾಗುತ್ತಿದೆ. ಅಲ್ಲಿನ ಪೊಲೀಸರ ಮೇಲೆ ನಮಗೆ ಯಾವುದೇ ನಂಬಿಕೆ ಇಲ್ಲ. ಸಜೀವವಾಗಿ ಸುಡುವ ಮುನ್ನ, ಜನರನ್ನು ತೀವ್ರವಾಗಿ ಥಳಿಸಲಾಗಿದೆ’ ಎಂದು ಹೇಳಿದರು. ಆಗ ಟಿಎಂಸಿ ಸಂಸದರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ ರಾಜ್ಯಸಭಾ ಕಲಾಪವನ್ನು ಕೆಲಕಾಲ ಮುಂದೂಡಲಾಯಿತು.

ಮಮತಾ ಹೇಳಿಕೆಗೆ ಒತ್ತಾಯ: ಪಶ್ಚಿಮ ಬಂಗಾಳ ವಿಧಾನಸಭೆಯಲ್ಲೂ ಈ ಪ್ರಕರಣವು ಜೋರು ಸದ್ದು ಮಾಡಿದೆ. ‘ಘಟನೆ ಸಂಬಂಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸದನದಲ್ಲಿ ಹೇಳಿಕೆ ನೀಡಬೇಕು’ ಎಂದು ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಶುಕ್ರವಾರ ಆಗ್ರಹಿಸಿದರು. ಟಿಎಂಸಿ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ, ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

*
ಕರ್ತವ್ಯದ ವಿಚಾರವೇ ಬೇರೆ. ಆದರೆ, ನಾನು ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರದ್ದು ಸೋದರ–ಸೋದರಿ ಸಂಬಂಧ. ನಾವು ಆಪ್ತವಾಗೇ ಇದ್ದೇವೆ.
-ಜಗದೀಪ್ ಧನಕರ್, ಪಶ್ಚಿಮ ಬಂಗಾಳ ರಾಜ್ಯಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT