ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಕೊಳ್ಳದಲ್ಲಿ ಹೈಡ್ರೊಕಾರ್ಬನ್‌ ತೆಗೆಯಲು ಬಿಡ್‌: ಸ್ಟಾಲಿನ್‌ ವಿರೋಧ

Last Updated 13 ಜೂನ್ 2021, 16:36 IST
ಅಕ್ಷರ ಗಾತ್ರ

ಚೆನ್ನೈ: ಕಾವೇರಿ ಕೊಳ್ಳದಲ್ಲಿ ಹೈಡ್ರೋಕಾರ್ಬನ್ ಅನ್ನು ‌ತೆಗೆಯಲು ಕರೆಯಲಾಗಿರುವ ಬಿಡ್‌ಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಒತ್ತಾಯಿಸಿದ್ದಾರೆ.

ತಮಿಳುನಾಡಿನ ಪುದುಕೋಟೈ ಜಿಲ್ಲೆಯ ವಡಥಾರು ಎಂಬಲ್ಲಿ ಕೇಂದ್ರ ತೈಲ ಮತ್ತು ಅನಿಲ ಪ್ರದೇಶ ಅಭಿವೃದ್ಧಿಗಾಗಿ ಬಿಡ್‌ಗಳನ್ನು ಆಹ್ವಾನಿಸಿದೆ. ಈ ಪ್ರದೇಶವು ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಇದು ಸಂರಕ್ಷಿತ ಕೃಷಿ ವಲಯ (ಪಿಎಜಡ್). ಅಲ್ಲದೆ,ಅನಾದಿ ಕಾಲದಿಂದಲೂ ತಮಿಳುನಾಡಿನ ಆಹಾರ ಸುರಕ್ಷತೆ ಮತ್ತು ಕೃಷಿ ಆಧಾರಿತ ಆರ್ಥಿಕತೆಯ ಅಡಿಪಾಯವಾಗಿದೆ. ಈ ಪ್ರದೇಶದ ಮೇಲೆ ಲಕ್ಷಾಂತರ ರೈತರು ಮತ್ತು ಕೃಷಿ ಕಾರ್ಮಿಕರ ಜೀವ ಅವಲಂಬಿಸಿದೆ,‘ ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಜೂನ್ 10 ರಂದು, ಕೇಂದ್ರವು ಅಂತರರಾಷ್ಟ್ರೀಯ ಸ್ಪರ್ಧಾತ್ಮಕ ಬಿಡ್ಡಿಂಗ್‌ಗಾಗಿ 'ಡಿಸ್ಕವರ್ಡ್ ಸ್ಮಾಲ್ ಫೀಲ್ಡ್ (ಡಿಎಸ್‌ಎಫ್) ಬಿಡ್ ರೌಂಡ್ -3' ಅನ್ನು ಪ್ರಾರಂಭಿಸಿತು. ಈ ವರ್ಚುವಲ್‌ ಕಾರ್ಯಕ್ರಮದಲ್ಲಿ 450ಕ್ಕೂ ಹೆಚ್ಚು ಬಿಡ್‌ದಾರರು ಭಾಗವಹಿಸಿದ್ದರು. ಬಿಡ್‌ ಸಲ್ಲಿಸಲು 2021ರ ಆಗಸ್ಟ್ 31 ರವರೆಗೆ ಬಿಡ್‌ದಾರರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

‘ಕಾವೇರಿ ಜಲಾನಯನ ಪ್ರದೇಶದಿಂದ ಹೈಡ್ರೋಕಾರ್ಬನ್‌ ಹೊರತೆಗೆಯುವ ಕೇಂದ್ರದ ಯೋಜನೆಗಳು ತಮಿಳುನಾಡಿನಲ್ಲಿ ಎಲ್ಲ ರಂಗದವರಿಂದಲೂ ತೀವ್ರ ವಿರೋಧಕ್ಕೆ ಗುರಿಯಾಗಿದೆ. ಕಾವೇರಿ ಜಲಾನಯನ ಪ್ರದೇಶ ಮತ್ತು ನೆರೆಯ ಜಿಲ್ಲೆಗಳಲ್ಲಿ ಹೈಡ್ರೋಕಾರ್ಬನ್ ಶೋಧನೆ ಮತ್ತು ಹೊರತೆಗೆಯುವ ಯೋಜನೆಗಳನ್ನು ತಮಿಳುನಾಡು ಸರ್ಕಾರ ನಿರಂತರವಾಗಿ ವಿರೋಧಿಸಿದೆ. ಕೃಷಿ ಆರ್ಥಿಕತೆಗೆ ಈ ಪ್ರದೇಶ ಅಪರಿಮಿತ ಕೊಡುಗೆ ನೀಡಿದೆ,’ ಎಂದು ಅವರು ಮನನ ಮಾಡಿಕೊಂಡಿದ್ದಾರೆ.

ಜನರ ಭಾವನೆಗಳು, ಸಂಭವನೀಯ ಪರಿಸರ ಪರಿಣಾಮ ಮತ್ತು ರಾಜ್ಯ ಸರ್ಕಾರದ ಕಾನೂನು ಕಾಯಿದೆಗಳ ಬಗ್ಗೆ ಸಂಬಂಧಿತ ಅಧಿಕಾರಿಗಳು ಗಣನೆಗೆ ತೆಗೆದುಕೊಳ್ಳದಿರುವುದು ದುರದೃಷ್ಟಕರ ಎಂದು ಸ್ಟಾಲಿನ್ ಹೇಳಿದ್ದಾರೆ.

ಈ ಕೃಷಿ ಪ್ರದೇಶದಲ್ಲಿ ಹೈಡ್ರೋಕಾರ್ಬನ್ ಹೊರತೆಗೆಯುವಿಕೆಗೆ ಬಿಡ್ಡಿಂಗ್‌ ಕರೆಯುವ ನಿರ್ಧಾರಕ್ಕೆ ಈಗಾಗಲೇ ಪುದುಕೋಟೈ ಮತ್ತು ನೆರೆಯ ಜಿಲ್ಲೆಗಳಲ್ಲಿ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ ಎಂದೂ ಅವರು ಹೇಳಿದ್ದಾರೆ.

ಮೂರನೇ ಹಂತದ ಬಿಡ್‌ನಲ್ಲಿ 32 ಗುತ್ತಿಗೆ ಪ್ರದೇಶಗಳನ್ನು ವಿತರಿಸಲಾಗುತ್ತಿದೆ. 1300 ಚದರ ಕಿಲೋಮೀಟರ್‌ಗಳ 9 ಸ್ಥಳಗಳಲ್ಲಿ ನಿಕ್ಷೇಪ ಗುರುತಿಸಲಾಗಿದ್ದು, ಇಲ್ಲಿ 230 ದಶಲಕ್ಷ ಮೆಟ್ರಿಕ್ ಟನ್‌ನಷ್ಟು ಹೈಡ್ರೋಕಾರ್ಬನ್‌ ಇರುವುದಾಗಿ ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT