ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸಾವಿಗೆ ಪರಿಹಾರವಿಲ್ಲ; ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಪ್ರತಿಪಾದನೆ

ಕೋವಿಡ್‌–19ರಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರಧನ ನೀಡುವುದು ಸಾಧ್ಯವಿಲ್ಲ
Last Updated 20 ಜೂನ್ 2021, 21:45 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19ರಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರಧನ ನೀಡುವುದು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಹೀಗೆ ಮಾಡಿದರೆ ವಿಪತ್ತು ನಿರ್ವಹಣೆ ನಿಧಿಯು ಮುಗಿದು ಹೋಗುತ್ತದೆ. ಅದಲ್ಲದೆ, ಸಾಂಕ್ರಾಮಿಕದ ಮುಂದಿನ ಅಲೆಗಳನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯಗಳ ಸಿದ್ಧತೆಯ ಮೇಲೆಯೂ ಇದು ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.

ಕೋವಿಡ್‌–19 ಸಾಂಕ್ರಾಮಿಕವನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರವು ಘೋಷಿಸಿದೆ. ಹಾಗಾಗಿ, ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ ₹4 ಲಕ್ಷ ಪರಿಹಾರ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗೆ (ಪಿಐಎಲ್‌) ಕೇಂದ್ರವು ಹೀಗೆ ಪ್ರತಿಕ್ರಿಯೆ ಕೊಟ್ಟಿದೆ.

ಸಾಂಕ್ರಾಮಿಕವು ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಕೊಟ್ಟಿದೆ. ತೆರಿಗೆ ವರಮಾನವು ಕಡಿಮೆಯಾಗಿದೆ ಮತ್ತು ಆರೋಗ್ಯ ವೆಚ್ಚವು ಹೆಚ್ಚಳವಾಗಿದೆ. ಹಾಗಾಗಿ, ಕೇಂದ್ರ ಮತ್ತು ರಾಜ್ಯಗಳು ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿವೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ
ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಪರಿಹಾರ ನೀಡುವುದಕ್ಕಾಗಿ 12 ವಿಪತ್ತುಗಳನ್ನು ಗುರುತಿಸಲಾಗಿದೆ. ಈ ವಿಪತ್ತುಗಳಿಗೆ ಪರಿಹಾರಕ್ಕಾಗಿ ರಾಜ್ಯಗಳಿಗೆ ನೀಡಲು 2021–22ನೇ ಸಾಲಿನಲ್ಲಿ ₹22,184 ಕೋಟಿ ಮೀಸಲು ಇರಿಸಲಾಗಿದೆ. ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಈ ನಿಧಿಯಿಂದ ಪರಿಹಾರ ಕೊಟ್ಟರೆ ಪೂರ್ಣ ಮೊತ್ತವನ್ನು ಅದಕ್ಕೆ ವಿನಿಯೋಗಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ, ಒಟ್ಟು ವೆಚ್ಚವು ಈ ಮೊತ್ತವನ್ನು ಮೀರುವ ಸಾಧ್ಯತೆಯೂ ಇದೆ ಎಂದು ಪ್ರಮಾಣಪತ್ರದಲ್ಲಿ ಮಾಹಿತಿ ನೀಡಲಾಗಿದೆ.

ಪರಿಹಾರಕ್ಕೆ ಕೋರಿಕೆಯು ನೈಜವಾದ ಬೇಡಿಕೆ. ಹಾಗಾಗಿ, ಈ ವಿಚಾರವು ಪರಿಶೀಲನೆಯಲ್ಲಿ ಇದೆ ಎಂದು ಇದೇ 11ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಸರ್ಕಾರವು ಹೇಳಿತ್ತು.

ಹಣದ ರೂಪದ ಪರಿಹಾರದ ಬದಲು ಹೆಚ್ಚು ವ್ಯಾಪಕವಾದ ಧೋರಣೆ ತಳೆಯಲು ನಿರ್ಧರಿಸಲಾಗಿದೆ. ಆರೋಗ್ಯ ರಕ್ಷಣೆ ವ್ಯವಸ್ಥೆ, ಸಾಮಾಜಿಕ ಭದ್ರತೆ, ಆರ್ಥಿಕ ಪುನಶ್ಚೇತನಕ್ಕೆ ನೆರವಿನಂತಹ ಕ್ರಮಗಳು ಹೆಚ್ಚು ಜಾಣ್ಮೆ, ಹೊಣೆಗಾರಿಕೆ ಮತ್ತು ಸುಸ್ಥಿರವಾದ ನಡೆ ಅನಿಸುತ್ತದೆ ಎಂದು ಕೇಂದ್ರವು ಅಭಿಪ್ರಾಯಪಟ್ಟಿದೆ.

ಸಾಂಕ್ರಾಮಿಕದ ಪ್ರಮಾಣ ದೊಡ್ಡದು ಮತ್ತು ಪರಿಣಾಮ ವ್ಯಾಪಕವಾದುದು. ಹಾಗಾಗಿ, ನೈಸರ್ಗಿಕ ವಿಕೋಪಗಳ ಸಂದರ್ಭಗಳಲ್ಲಿ ನೆರವು ನೀಡುವ ಯೋಜನೆಯನ್ನು ಸಾಂಕ್ರಾಮಿಕಕ್ಕೆ ಅನ್ವಯಿಸಲು ಆಗದು ಎಂದು ಕೇಂದ್ರ ಪ್ರತಿಪಾದಿಸಿದೆ.

ಪ್ರಮಾಣೀಕರಣ ಕಡ್ಡಾಯ

ಗಂಭೀರ ಅನಾರೋಗ್ಯ ಇರುವ ವ್ಯಕ್ತಿಗಳು ಕೋವಿಡ್‌ ದೃಢಪಟ್ಟ ಬಳಿಕ ಮೃತಪಟ್ಟರೆ ಇದನ್ನು ಕೋವಿಡ್‌ನಿಂದ ಆಗಿರುವ ಸಾವು ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರವು ಹೇಳಿದೆ.

ಸಾವಿಗೆ ಅತ್ಯಂತ ಸ್ಪಷ್ಟವಾದ ಬೇರೆ ಕಾರಣ ಇದ್ದಾಗ ಮತ್ತು ಸಾವಿನ ಕಾರಣ ಕೋವಿಡ್‌ ಅಲ್ಲವೇ ಅಲ್ಲ ಎಂಬುದು ದೃಢಪಟ್ಟಾಗ ಮಾತ್ರ ಅಂಥ ಪ್ರಕರಣವನ್ನು ಕೋವಿಡ್‌ನಿಂದಾದ ಸಾವು ಎಂದು ಪರಿಗಣಿಸಬೇಕಿಲ್ಲ. ಉದಾಹರಣೆಗೆ ಅಪಘಾತ, ವಿಷ ಸೇವನೆ, ಹೃದಯಾಘಾತದಿಂದ ಮೃತಪಟ್ಟರೆ ಅದನ್ನು ಕೋವಿಡ್‌ ಸಾವು ಎಂದು ಪರಿಗಣಿಸಬೇಕಿಲ್ಲ ಎಂದು ತಿಳಿಸಲಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ 2020ರ ಮೇ 10ರಂದು ಸಿದ್ಧಪಡಿಸಿದ ಮಾರ್ಗಸೂಚಿ
ಯನ್ನು ಅನುಸರಿಸಬೇಕು. ಅದರ ಉಲ್ಲಂಘನೆಯನ್ನು ಭಾರತೀಯ ದಂಡ ಸಂಹಿತೆ ಸೆಕ್ಷನ್‌ 188ರ ಅಡಿಯಲ್ಲಿ ಅಪರಾಧ ಕೃತ್ಯ ಎಂದು ಪರಿಗಣಿಸಲಾಗುವುದು. ಕೋವಿಡ್‌ ಸಾವಿಗೆ ಸಂಬಂಧಿಸಿ ಈ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮರಣ ಸಂಹಿತೆಗೆ ಅನುಗುಣವಾಗಿ ಈ ಮಾರ್ಗಸೂಚಿ ಇದೆ.

ಕೋವಿಡ್‌ನಿಂದಾದ ಮರಣಕ್ಕೆ ಅದೇ ಕಾರಣದ ಪ್ರಮಾಣಪತ್ರ ನೀಡದೇ ಇದ್ದರೆ ಸಂಬಂಧಪ‍ಟ್ಟ ವೈದ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT