ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಆರೋಪ: ರೆಡ್‌ಕ್ರಾಸ್‌ ಪ್ರಾದೇಶಿಕ ಶಾಖೆಗಳಲ್ಲಿ ಸಿಬಿಐ ತನಿಖೆ ಆರಂಭ

Last Updated 13 ಮಾರ್ಚ್ 2023, 14:18 IST
ಅಕ್ಷರ ಗಾತ್ರ

ನವದೆಹಲಿ: ಭ್ರಷ್ಟಾಚಾರ ಮತ್ತು ಹಣಕಾಸು ಅಕ್ರಮದ ಕುರಿತು ದೂರು ಲಭಿಸಿರುವ ಕಾರಣ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿರುವ ರೆಡ್‌ಕ್ರಾಸ್‌ ಸೊಸೈಟಿಯ ಪ್ರಾದೇಶಿಕ ಶಾಖೆಗಳಲ್ಲಿ ಸಿಬಿಐ ತನಿಖೆ ಆರಂಭಿಸಿದೆ.

ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ ಹಾಗೂ ಅಂಡಮಾನ್‌ ಮತ್ತು ನಿಕೋಬರ್‌ನಲ್ಲಿರುವ ರೆಡ್‌ಕ್ರಾಸ್‌ ಸೊಸೈಟಿಯ ಶಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ದೂರುಗಳು ಲಭಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ತಮಿಳುನಾಡಿನ ಶಾಖೆಯ ಕಾರ್ಯಚಟುವಟಿಕೆಯ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ವಿಚಾರವನ್ನು ಅಲ್ಲಿನ ರಾಜ್ಯಪಾಲರ ಗಮನಕ್ಕೆ ತಂದಿದ್ದು, ಈ ಕುರಿತು ಸಿಬಿಐ ತನಿಖೆಗೆ ಅನುಮೋದನೆ ನೀಡಬೇಕೆಂದು ಅವರು 2020ರ ಜುಲೈನಲ್ಲಿ ದೆಹಲಿಯಲ್ಲಿರುವ ರೆಡ್‌ಕ್ರಾಸ್‌ ಸೊಸೈಟಿಯ ಕೇಂದ್ರ ಕಚೇರಿಗೆ ಕೋರಿದ್ದರು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಸಿಬಿಐ ತನಿಖೆಗೆ ತಡೆ ಕೋರಿ ರೆಡ್‌ಕ್ರಾಸ್‌ ತಮಿಳುನಾಡು ಶಾಖೆಯ ಅಧ್ಯಕ್ಷ ಮತ್ತು ಕಚೇರಿ ಪದಾಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯವು 2022 ಜೂನ್‌ವರೆಗೆ ತಡೆಯಾಜ್ಞೆ ನೀಡಿತ್ತು. ಸದ್ಯ ಅಧ್ಯಕ್ಷರು ರಾಜೀನಾಮೆ ನೀಡಿದ್ದು, ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ ಎಂದೂ ಹೇಳಿವೆ. ಅಲ್ಲಿ ರಾಜ್ಯಪಾಲರು ರಾಜ್ಯ ವ್ಯವಸ್ಥಾಪನಾ ಸಮಿತಿಯನ್ನು ವಿಸರ್ಜಿಸಿ, ತಾತ್ಕಾಲಿಕ ಸಮಿತಿಯನ್ನು ರಚಿಸಿದ್ದಾರೆ.

ಕೇರಳದಲ್ಲಿರುವ ಶಾಖೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಹಣ ದುರುಪಯೋಗ ಮಾಡಿದ್ದಾರೆ ಎಂಬ ಆರೋಪ 2019ರಲ್ಲಿ ಕೇಳಿ ಬಂದಿತ್ತು. ಈ ಕಾರಣಕ್ಕೆ ಅಲ್ಲಿನ ವ್ಯವಸ್ಥಾಪನಾ ಸಮಿತಿಯನ್ನು ವಿಸರ್ಜಿಸಲು ರೆಡ್‌ಕ್ರಾಸ್‌ ಸೊಸೈಟಿಯ ಕೇಂದ್ರ ಕಚೇರಿ ಸೂಚಿಸಿತ್ತು ಎಂದೂ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಪ್ರಾದೇಶಿಕ ಶಾಖೆಯ ಮಾಜಿ ಅಧ್ಯಕ್ಷರಿಂದ ರೆಡ್‌ಕ್ರಾಸ್‌ ಹೆಸರಿನಲ್ಲಿ ಟ್ರಸ್ಟ್‌ ಅನ್ನು ನೋಂದಾಯಿಸಲಾಗಿದ್ದು, ಈ ಕುರಿತು ಎಫ್‌ಐಆರ್‌ ದಾಖಲಾಗಿತ್ತು ಮತ್ತು ಸಮಿತಿಯನ್ನು ಈಗ ವಿಸರ್ಜಿಸಲಾಗಿದೆ ಎಂದೂ ತಿಳಿಸಿದ್ದಾರೆ.

ಅಂಡಮಾನ್‌ ಮತ್ತು ನಿಕೋಬರ್‌ ದ್ವೀಪದಲ್ಲಿ ಶಾಖೆಯ ಪ್ರಧಾನ ಕಾರ್ಯದರ್ಶಿಯು ಸರಿಯಾದ ಚುನಾವಣೆ ನಡೆಯದೆ ದೀರ್ಘಕಾಲದಿಂದ ಈ ಸ್ಥಾನದಲ್ಲಿದ್ದಾರೆ ಎಂಬ ದೂರುಗಳು ಬಂದಿದ್ದವು ಎಂದೂ ವಿವರಿಸಿದ್ದಾರೆ.

ಅಸ್ಸಾಂನಲ್ಲಿ ರಾಜ್ಯ ವ್ಯವಸ್ಥಾಪನಾ ಸಮಿತಿಗೆ ಚುನಾವಣೆಯು ವಿಳಂಬವಾಗಿದೆ. ಸಮಿತಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದ್ದು, ಈಗ ಹೊಸ ಸಮಿತಿಯು ಅಸ್ತಿತ್ವದಲ್ಲಿದೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT