ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನವೆಂಬರ್ 29ರಿಂದ ಡಿಸೆಂಬರ್ 23ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

Last Updated 8 ನವೆಂಬರ್ 2021, 13:26 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ನವೆಂಬರ್ 29 ರಿಂದ ಡಿಸೆಂಬರ್ 23ರವರೆಗೆ ನಡೆಸುವಂತೆ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಶಿಫಾರಸು ಮಾಡಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ.

ಕಳೆದ ಒಂದೂವರೆ ವರ್ಷದ ಹಿಂದೆ ನಡೆದ ಸಂಸತ್ತಿನ ಹಿಂದಿನ ಅಧಿವೇಶನಗಳಂತೆ ಕೋವಿಡ್-19 ನಿಯಮಾವಳಿಗಳನ್ನು ಅನುಸರಿಸಿ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ಈ ಬೆಳವಣಿಗೆಗಳ ಬಗ್ಗೆ ತಿಳಿದಿರುವವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕೋವಿಡ್-19ನಿಂದಾಗಿ ಕಳೆದ ವರ್ಷ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ನಡೆಸಿರಲಿಲ್ಲ. ಅಲ್ಲದೆ ಬಜೆಟ್ ಮತ್ತು ಮುಂಗಾರು ಅಧಿವೇಶನದ ಅವಧಿಯನ್ನು ಕೂಡ ಕಡಿಮೆ ಮಾಡಲಾಗಿತ್ತು.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ನವೆಂಬರ್ 29ರಿಂದ ಡಿಸೆಂಬರ್ 23ರವರೆಗೆ ಅಧಿವೇಶನ ನಡೆಸುವಂತೆ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಸಂಸತ್ತಿನ ಉಭಯ ಸದನಗಳಾದ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಏಕಕಾಲದಲ್ಲಿ ಕಲಾಪಗಳು ನಡೆಯುತ್ತವೆ ಮತ್ತು ಸದಸ್ಯರು ಸಭೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಲ್ಲದೆ ಅಗತ್ಯ ನಿಯಮಾವಳಿಗಳನ್ನು ಅನುಸರಿಸಬೇಕಾಗುತ್ತದೆ.

ಸಂಸದರು ಸೇರಿದಂತೆ ಸಂಸತ್ತಿನಲ್ಲಿ ಹಾಜರಿರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಚಳಿಗಾಲದ ಅಧಿವೇಶನಕ್ಕೆ ಹಾಜರಾಗುವ ಮುನ್ನ ಕೋವಿಡ್-19 ಪರೀಕ್ಷೆಗೆ ಒಳಗಾಗಿರಬೇಕು.

ಹಣದುಬ್ಬರ, ಇಂಧನ ಬೆಲೆ ಏರಿಕೆ, ಅಡುಗೆ ಇಂಧನ, ಕಾಶ್ಮೀರದಲ್ಲಿ ನಾಗರಿಕರ ಮೇಲೆ ಉಗ್ರರ ದಾಳಿ, ರೈತರ ಹತ್ಯೆಯಾದ ಲಖಿಂಪುರ ಖೇರಿ ಹಿಂಸಾಚಾರ ಮತ್ತು ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿ ನಡೆಯುತ್ತಿರುವ ಪ್ರತಿಭಟನೆ ಸೇರಿದಂತೆ ಇತರ ವಿಚಾರಗಳನ್ನಿಟ್ಟುಕೊಂಡು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳುವ ಸಾಧ್ಯತೆ ಇದೆ.

ಸಂಸತ್ತಿನ ಉಭಯ ಸದನಗಳ ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಪೆಗಾಸಸ್‌ ಬೇಹುಗಾರಿಕೆ, ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಕುರಿತು ಚರ್ಚೆ ನಡೆಸುವಂತೆ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಲೇ ಇದ್ದವು. ಇದರಿಂದಾಗಿ ಕಲಾಪಗಳನ್ನು ಪದೇ ಪದೇ ಮುಂದೂಡಲಾಗಿತ್ತು. ಹೀಗಾಗಿ ನಿಗದಿತ ಸಮಯಕ್ಕಿಂತ 2 ದಿನ ಮೊದಲೇ ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT