ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಿಂದ ಎಷ್ಟು ಜನರಿಗೆ ವಿಐಪಿ ಭದ್ರತೆ, ತಗಲುವ ವೆಚ್ಚ ಎಷ್ಟು?

ಕೇಂದ್ರದಿಂದ 230 ಜನರಿಗೆ ವಿಐಪಿ ಭದ್ರತೆ: ಲೋಕಸಭೆಗೆ ಸರ್ಕಾರದ ಮಾಹಿತಿ
Last Updated 9 ಮಾರ್ಚ್ 2021, 10:32 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳು (ಸಿಎಪಿಎಫ್) ಪ್ರಸ್ತುತ ದೇಶದಲ್ಲಿ 230 ಜನರಿಗೆ ವಿಐಪಿ ಭದ್ರತೆ ನೀಡುತ್ತಿರುವುದಾಗಿ ಸರ್ಕಾರವು ಸಂಸತ್ತಿಗೆ ತಿಳಿಸಿದೆ.

ಸಿಆರ್‌ಪಿಎಫ್‌ ಮತ್ತು ಸಿಐಎಸ್‌ಎಫ್‌ ರೀತಿಯ ಭದ್ರತಾ ಪಡೆಗಳು 'ಝಡ್‌–ಪ್ಲಸ್‌', 'ಝಡ್‌' ಹಾಗೂ 'ವೈ' ಶ್ರೇಣಿಯ ಭದ್ರತೆಗಳನ್ನು ನೀಡುತ್ತಿವೆ ಎಂದು ಸರ್ಕಾರ ಮಂಗಳವಾರ ಮಾಹಿತಿ ನೀಡಿದೆ. ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್‌ ರೆಡ್ಡಿ ಲಿಖಿತ ಉತ್ತರ ನೀಡಿದ್ದಾರೆ.

230 ಜನರ ಭದ್ರತೆಗೆ ಆಗುತ್ತಿರುವ ವೆಚ್ಚದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಹಲವು ರಾಜ್ಯ ಸರ್ಕಾರಗಳು ಹಾಗೂ ಸಂಸ್ಥೆಗಳು ಭದ್ರತೆಯ ವ್ಯವಸ್ಥೆ ಕಲ್ಪಿಸುವುದರಲ್ಲಿ ಭಾಗಿಯಾಗಿರುವುದರಿಂದ ವೆಚ್ಚ ಅಂದಾಜಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

'ಕೇಂದ್ರದ ಭದ್ರತಾ ಸಂಸ್ಥೆಯು ಭದ್ರತೆಗೆ ಒಳಪಡುವ ವ್ಯಕ್ತಿಗಿರುವ ಅಪಾಯದ ಮಟ್ಟವನ್ನು ಆಧರಿಸಿ ಕೇಂದ್ರದಿಂದ ಪಟ್ಟಿ ಸಿದ್ಧಪಡಿಸುತ್ತದೆ. ನಿರ್ದಿಷ್ಟ ಅವಧಿಗೆ ಅದನ್ನು ಪುನರ್‌ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಅದರ ಆಧಾರದ ಮೇಲೆ ಭದ್ರತೆಯನ್ನು ಮುಂದುವರಿಸುವುದು, ವಾಪಸ್‌ ಪಡೆಯುವುದು ಅಥವಾ ಬದಲಾವಣೆ ಮಾಡುವುದನ್ನು ನಿರ್ಧರಿಸಲಾಗುತ್ತದೆ. ಹೀಗಾಗಿ, ಕೇಂದ್ರದಿಂದ ಭದ್ರತೆ ಪಡೆಯುವ ವ್ಯಕ್ತಿಗಳ ಸಂಖ್ಯೆ ಆಗಾಗ್ಗೆ ವ್ಯತ್ಯಾಸವಾಗುತ್ತಿರುತ್ತದೆ. ಪ್ರಸ್ತುತ, 230 ಜನರಿಗೆ ಕೇಂದ್ರದಿಂದ ಭದ್ರತೆ ನೀಡಲಾಗಿದೆ' ಎಂದು ಸಚಿವ ಕಿಶನ್‌ ರೆಡ್ಡಿ ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ವ್ಯಕ್ತಿಯ ಭದ್ರತೆಗೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಪ್ರಾಥಮಿಕವಾಗಿ ವ್ಯಕ್ತಿಯ ಭದ್ರತೆಯು ರಾಜ್ಯ ಸರ್ಕಾರದ ಹೊಣೆಯಾಗಿರುತ್ತದೆ ಹಾಗೂ ರಾಜ್ಯ ಸರ್ಕಾರ ಭದ್ರತೆ ನೀಡುತ್ತಿರುವವರ ಪಟ್ಟಿಯನ್ನು ಕೇಂದ್ರ ಸರ್ಕಾರವು ನಿರ್ವಹಿಸುವುದಿಲ್ಲ ಎಂದಿದ್ದಾರೆ.

ದೇಶದಲ್ಲಿ ಝಡ್‌–ಪ್ಲಸ್‌ ಭದ್ರತೆಯು ಉನ್ನತ ಶ್ರೇಣಿಯ ಭದ್ರತಾ ವ್ಯವಸ್ಥೆಯಾಗಿದ್ದು, 22ರಿಂದ 30 ಕಮಾಂಡೊಗಳು ವ್ಯಕ್ತಿಯ ಭದ್ರತೆಗೆ ನಿಯೋಜನೆಯಾಗಿರುತ್ತಾರೆ. ಝಡ್‌ ಶ್ರೇಣಿಯಲ್ಲಿ 15ರಿಂದ 18 ಜನ ಸಿಬ್ಬಂದಿ ಭದ್ರತೆ ನೀಡುತ್ತಾರೆ. ವಿಐಪಿ ಭದ್ರತೆಯ ಪೈಕಿ ಕೊನೆಯ ಶ್ರೇಣಿಗಳಾದ ವೈ–ಪ್ಲಸ್‌ನಲ್ಲಿ 8ರಿಂದ 12 ಕಮಾಂಡೊಗಳು ಹಾಗೂ ವೈ ಶ್ರೇಣಿಯಲ್ಲಿ 6ರಿಂದ 10 ಕಮಾಂಡೊಗಳು ಭದ್ರತೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT