ಭಾನುವಾರ, ಜೂನ್ 26, 2022
21 °C

ಸೆಂಟ್ರಲ್ ವಿಸ್ತಾ ಯೋಜನೆ: ಹೈಕೋರ್ಟ್‌ ತೀರ್ಪು ಪ‍್ರಶ್ನಿಸಿ ‘ಸುಪ್ರೀಂ’ಗೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಸೆಂಟ್ರಲ್‌ ವಿಸ್ತಾ’ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗೆ ತಡೆ ನೀಡಲು ನಿರಾಕರಿಸಿ ದೆಹಲಿ ಹೈಕೋರ್ಟ್‌ ನೀಡಿದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ದೇಶದಲ್ಲಿ ಕೋವಿಡ್‌–19 ಪಿಡುಗು ವ್ಯಾಪಿಸಿದೆ. ಇಂಥ ಸಂದರ್ಭದಲ್ಲಿ ಈ ಯೋಜನೆಯಡಿ ಕಾಮಗಾರಿ ಕೈಗೊಳ್ಳದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮೇ 31ರಂದು ನಡೆಸಿದ್ದ ಹೈಕೋರ್ಟ್‌, ‘ಸೆಂಟ್ರಲ್‌ ವಿಸ್ತಾ’ ಒಂದು ಪ್ರಮುಖ ಹಾಗೂ ಅಗತ್ಯ ರಾಷ್ಟ್ರೀಯ ಯೋಜನೆ ಎಂದು ಅಭಿಪ್ರಾಯಪಟ್ಟಿತ್ತು.

ಈ ಯೋಜನೆಯಡಿ ನಿರ್ಮಾಣ ಕಾರ್ಯವನ್ನು ಮುಂದುವರಿಸಲು ಅನುಮತಿ ನೀಡಿದ್ದ ಹೈಕೋರ್ಟ್‌, ಕಾಮಗಾರಿ ರದ್ದತಿ ಕೋರಿದ್ದ ಅರ್ಜಿದಾರರಾದ ಅನ್ಯ ಮಲ್ಹೋತ್ರ ಹಾಗೂ ಮತ್ತೊಬ್ಬ ವ್ಯಕ್ತಿಗೆ ಒಟ್ಟು ₹ 1 ಲಕ್ಷ ದಂಡ ವಿಧಿಸಿತ್ತು.

ಈಗ ಪ್ರದೀಪಕುಮಾರ್‌ ಯಾದವ್‌ ಎಂಬುವವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ‘ಸೆಂಟ್ರಲ್‌ ವಿಸ್ತಾ ಯೋಜನೆಯಡಿ ಕಾಮಗಾರಿಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಇದೊಂದು ಪ್ರಚೋದಿತ ಅರ್ಜಿ ಎಂಬುದಾಗಿ ಹೈಕೋರ್ಟ್‌ ಹೇಳಿರುವುದು ಸಮರ್ಥನೀಯವಲ್ಲ’ ಎಂದು ಯಾದವ್‌ ಅರ್ಜಿಯಲ್ಲಿ ಹೇಳಿದ್ದಾರೆ.

‘ಬೃಹತ್‌ ನಿರ್ಮಾಣ ಕಾರ್ಯದಲ್ಲಿ ಅಪಾರ ಸಂಖ್ಯೆಯಲ್ಲಿ ಮುಗ್ಧ ಕಾರ್ಮಿಕರನ್ನು ತೊಡಗಿಸಲಾಗಿದೆ. ಕೋವಿಡ್‌–19 ಪಿಡುಗಿನ ಈ ಸಂದರ್ಭದಲ್ಲಿ ಈ ರೀತಿ ಮಾಡುವುದು ಅಪಾಯಕಾರಿ ಎಂಬ ಅಂಶವನ್ನು ಅರಿಯುವಲ್ಲಿ ಹೈಕೋರ್ಟ್‌ ವಿಫಲವಾಗಿದೆ’ ಎಂದೂ ಅರ್ಜಿದಾರ ವಾದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು