ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಂಟ್ರಲ್‌ ವಿಸ್ತಾ ಯೋಜನೆಗೆ ಹಸಿರು ನಿಶಾನೆ

ಯೋಜನೆಗೆ ನೀಡಿರುವ ಪರಿಸರ ಅನುಮತಿ, ಭೂಬಳಕೆ ಬದಲಾವಣೆ ಅಧಿಸೂಚನೆ ಕ್ರಮಬದ್ಧ: ಸುಪ್ರೀಂ ಕೋರ್ಟ್‌
Last Updated 5 ಜನವರಿ 2021, 21:18 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ತ್ವಾಕಾಂಕ್ಷೆಯ ‘ಸೆಂಟ್ರಲ್‌ ವಿಸ್ತಾ ಯೋಜನೆ’ಯ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ ನೀಡಿದೆ. ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ಮೂರು ಕಿ.ಮೀ. ಪ್ರದೇಶದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಯೋಜನೆಗೆ ನೀಡಿರುವ ಪರಿಸರ ಅನುಮತಿ ಮತ್ತು ಭೂಬಳಕೆ ಬದಲಾವಣೆ ಅಧಿಸೂಚನೆಗಳು ಕ್ರಮಬದ್ಧ ಎಂದು ಸುಪ್ರೀಂ ಕೋರ್ಟ್‌ ಬಹುಮತದ ತೀರ್ಪಿನಲ್ಲಿ ಹೇಳಿದೆ.

ಸೆಂಟ್ರಲ್‌ ವಿಸ್ತಾ ಪುನರ್‌ರಚನೆಯನ್ನು 2019ರ ಸೆಪ್ಟೆಂಬರ್‌ನಲ್ಲಿಯೇ ಘೋಷಿಸಲಾಗಿತ್ತು. ತ್ರಿಕೋನಾಕಾರದ ಸಂಸತ್‌ ಭವನ, 900ರಿಂದ 1,200 ಸಂಸದರು ಕುಳಿತುಕೊಳ್ಳಬಹುದಾದ ಸಭಾಂಗಣ ನಿರ್ಮಾಣ ಈ ಯೋಜನೆಯ ಭಾಗವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75ನೇ ವರ್ಷದ ಸಂಭ್ರಮದ ಸಂದರ್ಭದಲ್ಲಿ (2022ರ ಆಗಸ್ಟ್) ಕಾಮಗಾರಿ ಪೂರ್ಣಗೊಳ್ಳಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ.

ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್‌ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು 2:1 ಬಹುಮತದಲ್ಲಿ, ಪರಿಸರ ಅನುಮತಿ ಮತ್ತು ಭೂಬಳಕೆ ಬದಲಾವಣೆ ಅಧಿಸೂಚನೆ ಕ್ರಮಬದ್ಧ ಎಂದು ಹೇಳಿದೆ.

ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಮತ್ತು ತಮ್ಮ ಪರವಾಗಿ ತೀರ್ಪು ಬರೆದ ಖಾನ್ವಿಲ್ಕರ್‌ ಅವರು, ಸೆಂಟ್ರಲ್‌ ವಿಸ್ತಾ ಯೋಜನೆಯ ಕಾಮಗಾರಿ ಸಂದರ್ಭದಲ್ಲಿ ಹೊಂಜು ಗೋಪುರಗಳನ್ನು ಸ್ಥಾಪಿಸಬೇಕು ಮತ್ತು ಹೊಂಜು ತಡೆ ಗನ್‌ಗಳನ್ನು ಬಳಸಬೇಕು ಎಂದು ಆದೇಶಿಸಿದ್ದಾರೆ.

ಆದರೆ, ಪೀಠದಲ್ಲಿದ್ದ ಇನ್ನೊಬ್ಬ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರು, ಪರಿಸರ ಅನುಮತಿ ಮತ್ತು ಭೂ ಬಳಕೆ ಬದಲಾವಣೆ ಅಧಿಸೂಚನೆಯು ಕ್ರಮಬದ್ಧ ಎಂಬುದರ ಬಗ್ಗೆ ಸಹಮತ ಸೂಚಿಸಿಲ್ಲ.

ಭೂಬಳಕೆ ಬದಲಾವಣೆಯು ಸರಿಯಾದ ಕ್ರಮ ಅಲ್ಲ ಮತ್ತು ಯೋಜನೆಯಲ್ಲಿ ಸಾರ್ವಜನಿಕ ಸಹಭಾಗಿತ್ವದ ವಿವರಗಳನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ ಎಂದು ಖನ್ನಾ ಅವರು ಹೇಳಿದ್ದಾರೆ.

ಹೊಸ ಸ್ಥಳಗಳಲ್ಲಿ ಕಾಮಗಾರಿ ಆರಂಭಕ್ಕೆ ಮುಂಚೆಯೇ ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಸಮಿತಿ ಮತ್ತು ಸಂಬಂಧಪಟ್ಟ ಇತರ ಪ್ರಾಧಿಕಾರಗಳ ಅನುಮತಿ ಪಡೆದುಕೊಳ್ಳಬೇಕು ಎಂದೂ ಬಹುಮತದ ತೀರ್ಪಿನಲ್ಲಿ ಹೇಳಲಾಗಿದೆ.

ಯೋಜನೆಗೆ ನೀಡಲಾದ ವಿವಿಧ ಅನುಮತಿಗಳ ಕುರಿತಂತೆ ಪರಿಸರಪರ ಹೋರಾಟಗಾರರಾಜೀವ್‌ ಸೂರಿ ಮತ್ತು ಇತರರು ಸಲ್ಲಿಸಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.

ಯೋಜನೆಯ ಶಿಲಾನ್ಯಾಸ ನಡೆಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಳೆದ ವರ್ಷ ಡಿಸೆಂಬರ್‌ 7ರಂದು ಅನುಮತಿ ನೀಡಿತ್ತು. ಆದರೆ, ತೀರ್ಪು ಬಾರದೆ ಕೆಡಹುವಿಕೆ ಅಥವಾ ನಿರ್ಮಾಣದ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುವಂತಿಲ್ಲ ಎಂಬ ಷರತ್ತು ವಿಧಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ ಭವನ ನಿರ್ಮಾಣಕ್ಕೆ ಕಳೆದ ಡಿ. 10ರಂದು ಶಿಲಾನ್ಯಾಸ ಮಾಡಿದ್ದರು.

ಅರ್ಜಿದಾರರ ತಕರಾರು ಏನು?

ರಾಜಪಥ ಮತ್ತು ವಿಜಯ ಚೌಕ ಸಮೀಪದ ‘ಹಸಿರು ವಲಯ’ದ ಭೂ ಬಳಕೆಯ ಬದಲಾವಣೆಯು ಯೋಜನೆಯಲ್ಲಿ ಸೇರಿದೆ. ಇಲ್ಲಿನ ಭೂ ಬಳಕೆ ಬದಲಾವಣೆ ಅಧಿಸೂಚನೆ ಕ್ರಮಬದ್ಧವಲ್ಲ. ಜತೆಗೆ, ಪರಿಸರ ಅನುಮತಿ ನೀಡಿಕೆಯೂ ನ್ಯಾಯಬದ್ಧವಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ಜನರ ಆಕ್ಷೇಪ ಗಣನೆಗೇ ಇಲ್ಲ: ಖನ್ನಾ

ಭೂ ಬಳಕೆ ಪರಿವರ್ತನೆಗೆ ಅನುಸರಿಸಿದ ಪ್ರಕ್ರಿಯೆಯಲ್ಲಿ ಹಲವು ಲೋಪಗಳಿವೆ ಎಂದು ತೀರ್ಪಿನ ಬಗ್ಗೆ ಭಿನ್ನಮತ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಹೇಳಿದ್ದಾರೆ. ಯೋಜನೆಯ ಬಗ್ಗೆ ಜನರು ನೀಡಿದ ಸಲಹೆಗಳು ಮತ್ತು ಆಕ್ಷೇಪಗಳನ್ನು ಸರ್ಕಾರವು ಗಣನೆಗೇ ತೆಗೆದುಕೊಂಡಿಲ್ಲ ಎಂದಿದ್ದಾರೆ.

‘ಈಗಿನ ಮತ್ತು ಪ್ರಸ್ತಾವಿತ ಭೂ ಬಳಕೆಯ ಗೆಜೆಟ್‌ ಅಧಿಸೂಚನೆ ಮತ್ತು ಪ್ಲಾಟ್ ಸಂಖ್ಯೆಗಳನ್ನಷ್ಟೇ ಪ್ರಕಟಿಸಿದರೆ ಸಾಕಾಗುವುದಿಲ್ಲ. ಪುನರ್‌ ಅಭಿವೃದ್ಧಿಯ ಬಗ್ಗೆ ಜನರಿಗೆ ಗ್ರಹಿಸಲು ಸಾಧ್ಯವಾಗುವ ರೀತಿಯಲ್ಲಿ ಮಾಹಿತಿಯನ್ನು ಬಹಿರಂಗಪಡಿಸಬೇಕು. ಜನರು ಮಾಹಿತಿಯುಕ್ತರಾಗಿ ತಮ್ಮ ಅಭಿಪ್ರಾಯ ತಿಳಿಸಲು ಸಾಧ್ಯವಾಗುವ ರೀತಿಯಲ್ಲಿ ವಿವರಗಳು ಪ‍್ರಕಟವಾಗಬೇಕು. ಇಂತಹ ಪ್ರಕ್ರಿಯೆಯಲ್ಲಿ ಜನರ ಭಾಗವಹಿಸುವಿಕೆಯು ಯಾಂತ್ರಿಕ ಎಂಬಂತೆ ಇರಬಾರದು. ಜನರ ಭಾಗೀದಾರಿಕೆಯು ಫಲಪ್ರದವೂ ರಚನಾತ್ಮಕವೂ ಆಗಿರಬೇಕು’ ಎಂದು ಖನ್ನಾ ಹೇಳಿದ್ದಾರೆ.

ಸೆಂಟ್ರಲ್‌ ವಿಸ್ತಾ ಅಭಿವೃದ್ಧಿ ಯೋಜನೆ ಬಗ್ಗೆ ಸರಿಯಾದ ರೀತಿಯಲ್ಲಿ ನೋಟಿಸ್‌ ನೀಡಿಲ್ಲ. ಯೋಜನೆ ಅನುಷ್ಠಾನದ ಬಳಿಕ ಇಲ್ಲಿನ ಚಿತ್ರಣ ಸಮಗ್ರವಾಗಿ ಬದಲಾಗಲಿದೆ. ಆದರೆ, ಅದಕ್ಕೆ ಬೇಕಾದ ಸಂರಕ್ಷಣಾ ಯೋಜನೆಯನ್ನು ಸಿದ್ಧಪಡಿಸಿಲ್ಲ ಎಂಬ ಅಸಮಾಧಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT