ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಭರವಸೆ ನೀಡಿದ್ದರೂ ರೈತರ ಬೇಡಿಕೆ ಈಡೇರಿಲ್ಲ: ಎಸ್‌ಕೆಎಂ ಆರೋಪ

ಬಿಜೆಪಿಗೆ ತಕ್ಕಶಿಕ್ಷೆ ನೀಡುವಂತೆ ಉತ್ತರಪ್ರದೇಶದ ಜನತೆಗೆ ಮನವಿ
Last Updated 15 ಫೆಬ್ರುವರಿ 2022, 10:58 IST
ಅಕ್ಷರ ಗಾತ್ರ

ಲಖಿಂಪುರ ಖೇರಿ: ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರವು ವಿಫಲವಾಗಿದೆ ಎಂದು ಆರೋಪಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ಉತ್ತರಪ್ರದೇಶದ ಜನತೆ ಬಿಜೆಪಿಗೆ ತಕ್ಕಶಿಕ್ಷೆ ನೀಡಬೇಕೆಂದು ಮನವಿ ಮಾಡಿದೆ.

ಎಸ್‌ಕೆಎಂ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ನಾಯಕ ಶಿವಕುಮಾರ್ ಶರ್ಮಾ ‘ಕಕ್ಕಾಜಿ’ ಅವರು, ‘ರೈತರ ಪ್ರತಿಭಟನೆ ವೇಳೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವುದು (ಎಂಎಸ್‌ಪಿ) ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಕೇಂದ್ರವು ಆ ಭರವಸೆಯನ್ನು ಈಡೇರಿಸಿಲ್ಲ’ ಎಂದು ದೂರಿದರು.

‘ಪ್ರತಿಭಟನಕಾರರ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲಾಗುವುದು, ಆಂದೋಲನದ ಸಮಯದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಆರ್ಥಿಕ ಪರಿಹಾರವನ್ನು ನೀಡಲಾಗುವುದು, ರೈತರನ್ನು ವಿದ್ಯುತ್ ಬಿಲ್‌ಗಳ ವ್ಯಾಪ್ತಿಯಿಂದ ದೂರವಿಡಲಾಗುವುದು ಎಂದು ಭಾರತೀಯ ಕಿಸಾನ್ ಯೂನಿಯನ್‌ನ ವಕ್ತಾರ ರಾಕೇಶ್ ಟಿಕಾಯತ್ ಅವರಿಗೆ ಭರವಸೆ ನೀಡಲಾಗಿತ್ತು. ಪ್ರಧಾನಿ ಅವರು 2021ರ ನ.19ರಂದು ಎಂಎಸ್‌ಪಿ ಖಾತರಿಪಡಿಸಲು ಸಮಿತಿ ರಚನೆ ಮಾಡಲಾಗುವುದು ಎಂದು ಘೋಷಿಸಿದ್ದರು. ಆದರೆ, ಇದುವರೆಗೆ ಕೇಂದ್ರ ಸರ್ಕಾರ ಯಾವ ಸಮಿತಿಯನ್ನೂ ರಚನೆ ಮಾಡಿಲ್ಲ’ ಎಂದು ಶರ್ಮಾ ತಿಳಿಸಿದರು.

‘ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್ ಅವರು ಕಳೆದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಎಂಎಸ್‌ಪಿ ಸಮಿತಿ ರಚನೆಗಾಗಿ ಸರ್ಕಾರ ಚುನಾವಣಾ ಆಯೋಗದಿಂದ ಅನುಮತಿ ಪಡೆಯಲಾಗುವುದು ಎಂದು ಹೇಳಿದ್ದರು. ಆದರೂ ಸಮಿತಿ ರಚನೆಯಾಗಿಲ್ಲ. ಸರ್ಕಾರ ತಾನು ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ‘ ಎಂದರು.

‘ಎಂಎಸ್‌ಪಿ ಸೇರಿದಂತೆ ಇತರ ಐದು ಅಂಶಗಳನ್ನು ಈಡೇರಿಸುವ ಕೆಲಸವನ್ನೂ ಸರ್ಕಾರ ಮಾಡಲಿಲ್ಲ. ಹಾಗಾಗಿ, ಜ. 31ರಂದು ಎಸ್‌ಕೆಎಂ ದೇಶದಾದ್ಯಂತ ‘ದ್ರೋಹ ದಿನ’ವನ್ನು ಆಚರಿಸಿತು. ‘ಮಿಷನ್ ಯುಪಿ’ ಅಡಿಯಲ್ಲಿ ಚುನಾವಣೆಗೆ ಹೋಗಲು ನಿರ್ಧರಿಸಿತು. ನಾವು ಯಾರಿಗೆ ಮತ ಹಾಕಬೇಕೆಂದು ಹೇಳುವುದಿಲ್ಲ. ಆದರೆ, ಬಿಜೆಪಿಯನ್ನು ಶಿಕ್ಷಿಸಿ. ಯಾರಿಗೆ ಮತ ಹಾಕಬೇಕೆಂದು ರೈತನಿಗೆ ಗೊತ್ತು. ಯಾರು ಸರ್ಕಾರ ರಚಿಸುತ್ತಾರೆ ಎಂಬುದನ್ನು ನಿರ್ಧರಿಸುವುದು ನಮ್ಮ ಕೆಲಸವಲ್ಲ. ನಮಗೆ ಯಾರು ಬೆಂಬಲ ನೀಡುತ್ತಾರೆ ಎಂಬುದನ್ನು ಆಧರಿಸಿ ನಾವು ಸರ್ಕಾರವನ್ನು ಬೆಂಬಲಿಸುತ್ತೇವೆ’ ಎಂದು ಶರ್ಮಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT