ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ

Last Updated 9 ಜೂನ್ 2021, 21:56 IST
ಅಕ್ಷರ ಗಾತ್ರ

ನವದೆಹಲಿ: 2021–22ನೇ ಸಾಲಿನ ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಬುಧವಾರ ಇಲ್ಲಿ ನಡೆದ, ಆರ್ಥಿಕ ವ್ಯವಹಾರಗಳನ್ನು ಕುರಿತ ಸಂಪುಟ ಸಮಿತಿಯ ಸಭೆಯಲ್ಲಿ ಬೆಂಬಲ ಬೆಲೆ ಹೆಚ್ಚಳಕ್ಕೆ ಅನುಮತಿ ನೀಡಲಾಗಿದೆ.

ಭತ್ತಕ್ಕೆ ನೀಡಲಾಗುವ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ ₹ 72ರಷ್ಟು, ತೊಗರಿ ಮತ್ತು ಉದ್ದು ಬೆಳೆಯ ಬೆಲೆಯನ್ನು ₹300ರಷ್ಟು, ಜೋಳ ಮತ್ತು ರಾಗಿಯ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ ಕ್ರಮವಾಗಿ ₹118 ಹಾಗೂ ₹80ರಷ್ಟು ಹೆಚ್ಚಿಸಲಾಗಿದೆ.

‘2021–22ನೇ ಸಾಲಿನ ಒಟ್ಟು 14 ಮುಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ ಪ್ರಸ್ತಾವಕ್ಕೆ ಸಂಪುಟದ ಅನುಮೋದನೆ ಲಭಿಸಿದೆ. ಈ ಬೆಳೆಗಳನ್ನು ಬೆಳೆಯುವ ರೈತರಿಗೆ ಉತ್ಪಾದನಾ ವೆಚ್ಚದ ಮೇಲೆ, ಶೇ 50 ರಿಂದ ಶೇ 85ರಷ್ಟು ಹೆಚ್ಚು ಗಳಿಕೆ ಆಗಲಿದೆ’ ಎಂದು ಕೇಂದ್ರದ ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ತಿಳಿಸಿದ್ದಾರೆ.

ಹೊಸ ಬೆಲೆಯ ಪ್ರಕಾರ 2021–22ನೇ ಸಾಲಿನಲ್ಲಿ ಭತ್ತಕ್ಕೆ (ಸಾಮಾನ್ಯ ತಳಿ) ಕ್ವಿಂಟಲ್‌ಗೆ ₹ 1,940 ಲಭಿಸಲಿದೆ. ಕಳೆದ ವರ್ಷ ಇದು ₹1,868ರಷ್ಟಿತ್ತು. ಅದರಂತೆ ಜೋಳಕ್ಕೆ ₹ 2,738 (ಕಳೆದ ವರ್ಷ ₹2,620) ತೊಗರಿ ಮತ್ತು ಉದ್ದು ಕಾಳುಗಳಿಗೆ ₹ 6,300 (ಕಳೆದ ವರ್ಷ ₹6,000) ಬೆಂಬಲ ಬೆಲೆ ಲಭಿಸಲಿದೆ.

ಶೇಂಗಾ ಮತ್ತು ಉಚ್ಚೆಳ್ಳಿನ ಬೆಲೆಯನ್ನು ಕ್ರಮವಾಗಿ ಕಳೆದ ವರ್ಷಕ್ಕಿಂತ ₹275 ಹಾಗೂ ₹235ರಷ್ಟು ಹೆಚ್ಚಿಸಲಾಗಿದೆ. ಸಜ್ಜೆ ₹100 (ಹೊಸ ಬೆಲೆ ₹2,250) ಹಾಗೂ ರಾಗಿಯ ಬೆಂಬಲಬೆಲೆಯನ್ನು ₹82ರಷ್ಟು (₹3,377) ಹೆಚ್ಚಿಸಲಾಗಿದೆ.

‘ನ್ಯೂನತೆ ತೋರಿಸಿ, ಮಾತುಕತೆಗೆ ಬನ್ನಿ’

‘ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ತೊಡಗಿರುವ ರೈತರ ಜತೆ ಮಾತುಕತೆಗೆ ನಾವು ಹಿಂಜರಿದಿಲ್ಲ. ಮೂರು ಕಾನೂನುಗಳಲ್ಲಿ ಇರುವ ನ್ಯೂನತೆಗಳನ್ನು ಎತ್ತಿ ತೋರಿಸಲು ನಾವು ರೈತ ಮುಖಂಡರಲ್ಲಿ ಮನವಿ ಮಾಡುತ್ತೇವೆ. ಅವರ ಸಮಸ್ಯೆಗಳನ್ನು ಪರಿಹರಿಸಲು ನಾವು ಸಿದ್ಧ’ ಎಂದು ಸಚಿವ ತೋಮರ್‌ ತಿಳಿಸಿದರು.

‘ಸರ್ಕಾರವು ರೈತ ಪ್ರತಿನಿಧಿಗಳ ಜತೆಗೆ ಈಗಾಗಲೇ 11 ಸುತ್ತುಗಳ ಸಭೆ ನಡೆಸಿದೆ. ಆದರೆ ಕಾನೂನುಗಳಲ್ಲಿರುವ ನ್ಯೂನತೆಗಳನ್ನು ತೋರಿಸುವಲ್ಲಿ ಅವರು ವಿಫಲರಾಗಿದ್ದಾರೆ’ ಎಂದು ಅವರು ಹೇಳಿದರು.

ಕಾಯ್ದೆ ರದ್ದತಿಗೆ ಕಾಂಗ್ರೆಸ್‌ ಆಗ್ರಹ

‘ನೂತನ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಹೋರಾಟವನ್ನು ಅಂತ್ಯಗೊಳಿಸಲು, ಆ ಕಾಯ್ದೆಗಳನ್ನು ರದ್ದುಪಡಿಸುವುದೇ ಏಕೈಕ ದಾರಿ’ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ಈ ಕಾಯ್ದೆಗಳ ವಿಚಾರದಲ್ಲಿ ಅಹಂಕಾರದ ನಿಲುವು ತೋರುತ್ತಿರುವ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

‘ರೈತ ಸಂಘಟನೆಗಳು ಕಾಯ್ದೆಗಳನ್ನು ರದ್ದುಪಡಿಸುವ ಬೇಡಿಕೆ ಬಿಟ್ಟು ಬೇರೆ ಆಯ್ಕೆಗಳ ಬಗ್ಗೆ ಚರ್ಚಿಸುವುದಿದ್ದರೆ, ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ’ ಎಂಬ ತೋಮರ್ ಅವರ ಹೇಳಿಕೆಗೆ ಕಾಂಗ್ರೆಸ್ ಹೀಗೆ ಪ್ರತಿಕ್ರಿಯೆ ನೀಡಿದೆ.

‘ರೈತರು ನಿಮ್ಮ ಬಳಿ ಭಿಕ್ಷೆ ಬೇಡುತ್ತಲೂ ಇಲ್ಲ, ಅವರಿಗೆ ಭಿಕ್ಷೆ ಬೇಕಾಗಿಯೂ ಇಲ್ಲ. ಅವರಿಗೆ ನ್ಯಾಯಬೇಕಿದೆ. ರೈತರು ಅವರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ನಿಮ್ಮ ಅಹಂಕಾರವನ್ನು ತೋರಿಸಬೇಡಿ. ನಿಮ್ಮ ಪ್ರತಿಷ್ಠೆಯ ಸಿಂಹಾಸನದಿಂದ ಕೆಳಗೆ ಇಳಿದುಬನ್ನಿ, ನಿಮ್ಮ ಮೊಂಡುತನವನ್ನು ಪಕ್ಕಕ್ಕಿಡಿ. ಆಗ ಮಾತ್ರ ಈ ಕರಾಳ ಕಾಯ್ದೆಗಳನ್ನು ರದ್ದುಪಡಿಸಲು ಸಾಧ್ಯವಾಗುತ್ತದೆ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT