ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಚಿಕಿತ್ಸೆ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿ ಕೈಬಿಡಲಿದೆ ಕೇಂದ್ರ: ಯಾಕೆ?

Last Updated 21 ಅಕ್ಟೋಬರ್ 2020, 2:39 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದ ಮಾರ್ಗಸೂಚಿಯಿಂದ ಪ್ಲಾಸ್ಮಾ ಚಿಕಿತ್ಸೆಯನ್ನು ಕೈಬಿಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಭಾರತೀಯ ಸಂಶೋಧಕರು ಸೂಚಿಸಿರುವ ಪ್ಲಾಸ್ಮಾ ಚಿಕಿತ್ಸೆಯಿಂದ ಕೋವಿಡ್ ಮರಣ ಪ್ರಮಾಣ ಕಡಿಮೆಯಾಗುವುದಿಲ್ಲ ಅಥವಾ ಸೋಂಕು ತೀವ್ರಗೊಳ್ಳುವುದನ್ನು ತಡೆಯಲಾಗುವುದಿಲ್ಲ ಎಂದು ವಿಶ್ವಮಟ್ಟದಲ್ಲಿ ನಡೆದ ಅಧ್ಯಯನ ತಿಳಿಸಿದೆ. ಇದರ ಬೆನ್ನಲ್ಲೇ ಮಾರ್ಗಸೂಚಿಯಿಂದ ಪ್ಲಾಸ್ಮಾ ಚಿಕಿತ್ಸೆ ಕೈಬಿಡುವ ಬಗ್ಗೆ ಕೇಂದ್ರ ಚಿಂತನೆ ನಡೆಸಿದೆ.

‘ಪ್ಲಾಸ್ಮಾ ಚಿಕಿತ್ಸೆಯನ್ನು ರಾಷ್ಟ್ರೀಯ ಮಾರ್ಗಸೂಚಿಯಿಂದ ತೆಗೆದುಹಾಕಬಹುದೇ ಎಂಬ ಬಗ್ಗೆ ರಾಷ್ಟ್ರೀಯ ಕಾರ್ಯಪಡೆ ಮತ್ತು ಜಂಟಿ ನಿರ್ವಹಣಾ ತಂಡದ ಜತೆ ಮಾತುಕತೆ ನಡೆಸುತ್ತಿದ್ದೇವೆ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಬಲರಾಮ್ ಭಾರ್ಗವ ಮಂಗಳವಾರ ತಿಳಿಸಿದ್ದಾರೆ.

ಐಸಿಎಂಆರ್‌ನ 350 ಸಂಶೋಧಕರು 29 ಆಸ್ಪತ್ರೆಗಳಲ್ಲಿ 464 ರೋಗಿಗಳ ಬಗ್ಗೆ ನಡೆಸಿದ ಅಧ್ಯಯನವು ‘ಬ್ರಿಟಿಷ್ ಮೆಡಿಕಲ್ ಜರ್ನಲ್‌’ನಲ್ಲಿ ಶೀಘ್ರ ಪ್ರಕಟವಾಗಲಿದೆ ಎಂದೂ ಭಾರ್ಗವ ತಿಳಿಸಿದ್ದಾರೆ.

ಪ್ಲಾಸ್ಮಾ ಚಿಕಿತ್ಸೆ ಮೂಲಕ ಸೋಂಕಿತರ ನಿರೋಧಕ ಶಕ್ತಿ ಹೆಚ್ಚಿಸಬಹುದು, ಚಿಕಿತ್ಸಾ ವಿಧಾನಗಳಿಗೆ ಸಂಬಂಧಿಸಿದ ವೈದ್ಯಕೀಯ ನಿರೀಕ್ಷೆಗಳಿಗೆ ಇದು ಸ್ಫೂರ್ತಿಯಾಗಬಹುದು ಎಂದು ಆರಂಭದಲ್ಲಿ ತಿಳಿಯಲಾಗಿತ್ತು. ಆದರೆ ಇದು ಸಾಬೀತಾಗಿಲ್ಲ ಎನ್ನಲಾಗಿದೆ.

ಆದಾಗ್ಯೂ, ಖಾಸಗಿ ವಲಯದ ಕೆಲವು ಆಸ್ಪತ್ರೆಗಳು ಕೋವಿಡ್‌ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡುತ್ತಿವೆ. ಸೋಂಕಿತರು ದಾನಿಗಳನ್ನು ಹುಡುಕಬೇಕಾಗುತ್ತದಲ್ಲದೆ, ಪರಿಣಾಮಕಾರಿ ಎಂದು ಸಾಬೀತಾಗದ ಚಿಕಿತ್ಸೆಗಾಗಿ ಅಪಾರ ಮೊತ್ತ ವ್ಯಯಿಸಬೇಕಾಗುತ್ತದೆ.

ಕೋವಿಡ್ ಮರಣವನ್ನು ತಡೆಯುವಲ್ಲಿ ರೆಮ್‌ಡಿಸಿವರ್ ಮತ್ತು ಹೈಡ್ರಾಕ್ಸಿ ಕ್ಲೋರೋಕ್ವಿನ್ ಸಹ ಪರಿಣಾಮಕಾರಿಯಲ್ಲ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಯೋಗಗಳಿಂದ ತಿಳಿದುಬಂದಿದೆ. ಹೀಗಾಗಿ ಚಿಕಿತ್ಸೆಯಲ್ಲಿ ಇವುಗಳ ಬಳಕೆ ಬಗ್ಗೆಯೂ ಕೇಂದ್ರ ಸರ್ಕಾರ ತಜ್ಞರ ಜತೆ ಸಮಾಲೋಚನೆ ನಡೆಸಲಿದೆ ಎಂದೂ ಭಾರ್ಗವ ಹೇಳಿದ್ದಾರೆ.

ದೇಶದಲ್ಲಿ 28,000 ಲಸಿಕೆ ಸಂಗ್ರಹಾಗಾರಗಳಿವೆ. ಇವುಗಳನ್ನು ಹೆಚ್ಚಿಸುವ ಅಗತ್ಯತೆ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ. ಲಸಿಕೆ ವಿತರಣೆಗೆ ಸರ್ಕಾರದ ಸಿದ್ಧತೆಯೇನು ಎಂಬ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT