ಗುರುವಾರ , ಮೇ 19, 2022
23 °C

ಪುಲ್ವಾಮಾ ಘಟನೆ ಬಳಿಕ ಕಾರ್ಯವಿಧಾನ ಬದಲು: ಸಿಆರ್‌ಪಿಎಫ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಎರಡು ವರ್ಷಗಳ ಹಿಂದೆ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ಕೃತ್ಯದ ನಂತರ ಅರೆಸೇನಾಪಡೆಯ ಕಾರ್ಯಾಚರಣೆ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿರುವುದರಿಂದ, ಕಣಿವೆಯಲ್ಲಿ ಅಂಥ ಘಟನೆ ಈವರೆಗೆ ಮರುಕಳಿಸಿಲ್ಲ ಎಂದು ಸಿಆರ್‌ಪಿಎಫ್‌ ಹೇಳಿದೆ.

2019ರ ಫೆ.14ರಂದು ಪುಲ್ವಾಮಾದಲ್ಲಿ ಜೈಶ್‌ ಎ–ಮಹಮ್ಮದ್‌ ಸಂಘಟನೆಯ ಅದಿಲ್‌ ದಾರ್‌ ಎಂಬ ಆತ್ಮಾಹುತಿ ದಾಳಿಕೋರ, ಸ್ಫೋಟಕಗಳಿಂದ ತುಂಬಿದ್ದ ತನ್ನ ಕಾರನ್ನು ಸಿಆರ್‌ಪಿಎಫ್‌ ಜವಾನರನ್ನು ಕರೆದೊಯ್ಯುತ್ತಿದ್ದ ವಾಹನಕ್ಕೆ ಡಿಕ್ಕಿಹೊಡೆಸಿ ಸ್ಫೋಟಿಸಿದ್ದ. ಕೃತ್ಯದಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾಗಿದ್ದರು. ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಆರಂಭವಾದಾಗಿನಿಂದ ಈವರೆಗೆ ನಡೆದ ಅತ್ಯಂತ ಮಾರಕ ದಾಳಿ ಇದಾಗಿತ್ತು.

‘ಆ ಘಟನೆಯ ನಂತರ ಸಿಆರ್‌ಪಿಎಫ್‌ನ ಕಾರ್ಯಾಚರಣೆ ಮತ್ತು ತರಬೇತಿ ವಿಧಾನ, ಬಳಸುವ ಸಾಧನಗಳು ಹಾಗೂ ಸಂಚಾರ ಮುಂತಾದ ಎಲ್ಲಾ ವಿಚಾರಗಳಲ್ಲೂ ಅನೇಕ ಸುಧಾರಣೆಗಳನ್ನು ಮಾಡಲಾಗಿದೆ. ಪೊಲೀಸ್‌, ಸೇನೆ ಹಾಗೂ ಸಿಆರ್‌ಪಿಎಫ್‌ ಮಧ್ಯೆ ಉತ್ತಮ ಸಮನ್ವಯವನ್ನು ಸಾಧಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಕಾರ್ಯಾಚರಣೆ ವಿಧಾನದಲ್ಲಿ ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಭಯೋತ್ಪಾದಕರು ಎಂಥ ಸವಾಲನ್ನು ಒಡ್ಡಿದರೂ ಅವರಿಗೆ ಅಷ್ಟೇ ಬಲವಾದ ಪ್ರತ್ಯುತ್ತರ ನೀಡಲು ಸಾಧ್ಯವಾಗುವ ರೀತಿಯಲ್ಲಿ ತರಬೇತಿಯ ವ್ಯವಸ್ಥೆ ರೂಪಿಸಲಾಗಿದೆ. ಹೆದ್ದಾರಿಗಳಲ್ಲಿ ಸೇನಾ ವಾಹನಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸುವ ಉದ್ದೇಶದಿಂದ ರಸ್ತೆ ಸುರಕ್ಷತಾ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಸೈನಿಕರ ಸಂಚಾರವನ್ನು ಹೆಚ್ಚಾಗಿ ವಾಯು ಮಾರ್ಗದಲ್ಲೇ ನಡೆಸಲಾಗುತ್ತಿದೆ’ ಎಂದು ಕೇಂದ್ರದ ಮೀಸಲು ಪೊಲೀಸ್‌ ಪಡೆಯ ಐಜಿ‍ಪಿ ದೀಪಕ್‌ ರತನ್‌ ತಿಳಿಸಿದ್ದಾರೆ.

ಶ್ರೀನಗರ– ಜಮ್ಮು ರಾಷ್ಟ್ರೀಯ ಹೆದ್ದಾರಿಯ ಅನೇಕ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವೀಕ್ಷಣೆಗಾಗಿ ಡ್ರೋನ್‌ಗಳನ್ನೂ ಬಳಸಲಾಗುತ್ತಿದೆ. ಸಾಮಾನ್ಯವಾಗಿ ಸೈನಿಕರನ್ನು ಗುಂಡು ನಿರೋಧಕ ವಾಹನಗಳಲ್ಲಿ ಕರೆದೊಯ್ಯಲಾಗುತ್ತಿದೆ’ ಎಂದೂ ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು