ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನಾ ಕೃತ್ಯಕ್ಕೆ ಸಂಚು ಆರೋಪ: ಪಿಎಫ್‌ಐ ಮೇಲೆ ದಾಳಿ

ಐಎಸ್‌ ಸೇರಲು ಪ್ರಚೋದನೆ l ಭಯೋತ್ಪಾದನೆ ಸಂಚು l ಏಳು ಬಂಧನ
Last Updated 22 ಸೆಪ್ಟೆಂಬರ್ 2022, 20:08 IST
ಅಕ್ಷರ ಗಾತ್ರ

ಬೆಂಗಳೂರು: ಕಾನೂನುಬಾಹಿರ ಚಟುವಟಿಕೆ ಹಾಗೂ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಆರೋಪದಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಕರ್ನಾಟಕದ ಕಚೇರಿ ಮತ್ತು ಮುಖಂಡರ ಮನೆಗಳ ಮೇಲೆ ತನಿಖಾ ಸಂಸ್ಥೆಗಳು ಗುರುವಾರ ದಾಳಿ ಮಾಡಿದ್ದು, ಪಿಎಫ್‌ಐ ಸಂಘಟನೆಯ ಏಳು ಮುಖಂಡರನ್ನು ಬಂಧಿಸಿವೆ.

ಮುಸ್ಲಿಂ ಯುವಕರನ್ನು ಪ್ರಚೋದಿಸಿ ಐಎಸ್‌ (ಇಸ್ಲಾಮಿಕ್ ಸ್ಟೇಟ್) ಉಗ್ರ ಸಂಘಟನೆಗೆ ಸೇರಿಸುತ್ತಿದ್ದ, ವಿದೇಶಗಳಿಂದ ಹಣ ಸಂಗ್ರಹಿಸಿ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಹಾಗೂ ಭಯೋತ್ಪಾದನಾ ಕೃತ್ಯ ಎಸಗಲೆಂದು ತರಬೇತಿ ಕೊಡಿಸುತ್ತಿದ್ದ ಬಗ್ಗೆ ಎನ್‌ಐಎ ಮಾಹಿತಿ ಕಲೆಹಾಕಿತ್ತು. ಕೇಂದ್ರ ಗೃಹ ಇಲಾಖೆಯ ನಿರ್ದೇಶನದನ್ವಯ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ (ಯುಪಿಎ) ಪಿಎಫ್‌ಐ ಸಂಘಟನೆ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ 19 ಪ್ರಕರಣಗಳು ದಾಖಲಾಗಿದ್ದವು.

2022ರ ಏಪ್ರಿಲ್ 13ರಂದು ದಾಖಲಾಗಿರುವ ಪ್ರಕರಣದ ವಿಚಾರಣೆ ನಡೆಸುತ್ತಿರುವ ನವದೆಹಲಿಯ ಎನ್‌ಐಎ ವಿಶೇಷ ನ್ಯಾಯಾಲಯ, ಆರೋಪಿಗಳ ಕಚೇರಿ ಹಾಗೂ ಮನೆಗಳಲ್ಲಿ ಶೋಧ ನಡೆ
ಸಲು ಸೆ. 21ರಂದು ವಾರಂಟ್ ಜಾರಿ ಮಾಡಿತ್ತು. ಅದರನ್ವಯ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು, ಜಾರಿ ನಿರ್ದೇಶನಾಲಯ ಹಾಗೂ ಪೊಲೀಸರ ನೆರವಿನೊಂದಿಗೆ ಬೆಂಗಳೂರು, ಮಂಗಳೂರು, ಕಲಬುರಗಿ, ಮೈಸೂರು ಸೇರಿದಂತೆ 9 ಕಡೆಗಳಲ್ಲಿ ದಾಳಿ ಮಾಡಿದರು.

‘ಇಸ್ಲಾಮಿಕ್ ದೇಶ ನಿರ್ಮಿಸಲು ಸಂಚು’

‘ಇತ್ತೀಚಿನ ದಿನಗಳಲ್ಲಿ ಪಿಎ‌ಫ್‌ಐ ಸಂಘಟನೆ ಮುಖಂಡರು ಹಾಗೂ ಕಾರ್ಯಕರ್ತರು, ಕಾನೂನುಬಾಹಿರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿದ್ದರು. ಸಂಘಟನೆ ಕೆಲಸಗಳ ಮೇಲೆ ಕಣ್ಣಿಡಲಾಗಿತ್ತು. ದೇಶದಲ್ಲಿ ಭಯೋತ್ಪಾದನಾ ಕೃತ್ಯ ಎಸಗಿ, ಇಸ್ಲಾಮಿಕ್ ದೇಶ ನಿರ್ಮಿಸಲು ಪಿಎಫ್‌ಐ ಸಂಘಟನೆ ಮುಖಂಡರು ಹಾಗೂ ಕಾರ್ಯಕರ್ತರು ಸಂಚು ರೂಪಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು’ ಎಂದು ಎನ್‌ಐಎ ಮೂಲಗಳು ಹೇಳಿವೆ.

‘ಕಾಲೇಜು ಪ್ರಾಧ್ಯಾಪಕರ ಕೈ ಕತ್ತರಿಸಿ ಹಿಂಸಾಚಾರಕ್ಕೂ ಪಿಎಫ್‌ಐ ಸಂಘಟನೆಯವರು ಪ್ರಚೋದಿಸಿದ್ದರು. ಇದೇ ರೀತಿಯಲ್ಲೇ ಹಲವು ಪ್ರಕರಣಗಳಲ್ಲಿ ಪಿಎಫ್‌ಐ ಕಾರ್ಯಕರ್ತರು ಭಾಗಿಯಾಗಿದ್ದರು’ ಎಂದೂ ತಿಳಿಸಿವೆ.

ಏನೆಲ್ಲ ಜಪ್ತಿ

ನಗದು, ಹರಿತ ಆಯುಧಗಳು, ಡಿಜಿಟಲ್ ಉಪಕರಣಗಳು

ಬಂಧಿತ ಪಿಎಫ್‌ಐ ಮುಖಂಡರು

ಪಿಎಫ್‌ಐ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಯಾಸೀರ್ ಹಸನ್ ಅಲಿಯಾಸ್ ಯಾಸೀರ್ ಅರ್ಫತ್ ಹಸನ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅನಿಸ್ ಅಹ್ಮದ್,ಮೊಹಮ್ಮದ್ ಸಾಕೀಬ್, ಕಾರ್ಯದರ್ಶಿ ಅಪ್ಸರ್ ಪಾಷಾ, ಉಪಾಧ್ಯಕ್ಷ ಅಬ್ದುಲ್ ವಾಹೀದ್ ಸೇಠ್, ಮೈಸೂರು ಘಟಕದ ಮಾಜಿ ಅಧ್ಯಕ್ಷ ಮೊಹಮ್ಮದ್ ಫಾರೂಕ್ ಉರ್ ರೆಹಮಾನ್, ಕಲಬುರ್ಗಿ ಜಿಲ್ಲಾ ಘಟಕದ ಖಜಾಂಚಿ ಶಾಹಿದ್ ನಾಸಿರ್.

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಎನ್‌ಐಎ ದಾಳಿ

ಬೆನ್ಸನ್‌ಟೌನ್ ಹಾಗೂ ಪುಲಿಕೇಶಿನಗರದಲ್ಲಿರುವ ಪಿಎಫ್‌ಐ ಕಚೇರಿ

ಅನಿಸ್‌ ಅಹ್ಮದ್ ಅವರ ಬಾಗಲೂರು ಮನೆ

ಅಪ್ಸರ್ ಪಾಷಾ ಅವರ ಟೆಲಿಕಾಂ ಲೇಔಟ್ ಮನೆ

ಅಬ್ದುಲ್ ವಾಹೀದ್ ಸೇಠ್ ಅವರ ಜಯಮಹಲ್ ಮನೆ

ಮೊಹಮ್ಮದ್ ಸಾಕೀಬ್ ಅವರ ರಿಚ್ಮಂಡ್ ಟೌನ್ ಫ್ಲ್ಯಾಟ್

ಯಾಸೀರ್ ಹಸನ್ ಅವರ ಆರ್‌.ಟಿ.ನಗರ ಭೀಮಣ್ಣ ಲೇಔಟ್‌ ಮನೆ

‘ಅನ್ಯಾಯದ ಬಂಧನ: ಮುಖಂಡರಿಗೆ ಕಿರುಕುಳ’

‘ಸಂಘಟನೆಯರಾಷ್ಟ್ರೀಯಹಾಗೂರಾಜ್ಯಮುಖಂಡರದ್ದು ಅನ್ಯಾಯದ ಬಂಧನ. ಎನ್‌ಐಎ, ಇ.ಡಿ ಹಾಗೂ ಇತರೆ ತನಿಖಾ ತಂಡಗಳು, ಮುಖಂಡರು ಹಾಗೂ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿವೆ’ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆರೋಪಿಸಿದೆ.

‘ಎನ್‌ಐಎ ವಾದಗಳು ನಿರಾಧಾರವಾಗಿದೆ. ಈ ದಾಳಿಯು, ದೇಶದಲ್ಲಿ ಭೀತಿಯ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಕೂಡಿದೆ’ ಎಂದೂ ಹೇಳಿದೆ.

‘ಕೇಂದ್ರ ಸರ್ಕಾರವು ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆಗಳನ್ನು ಕೈಗೊಂಬೆಯಾಗಿ ಬಳಸಿಕೊಳ್ಳುತ್ತಿವೆ. ಇದಕ್ಕೆಲ್ಲ ಪಿಎಫ್‌ಐ ಹೆದರುವುದಿಲ್ಲ. ಸಂಘಟನೆಯು ತನ್ನ ನಿಲುವಿಗೆ ಬದ್ಧವಾಗಿದೆ. ನಮ್ಮ ಪ್ರೀತಿಯ ದೇಶದ ಸಾಂವಿಧಾನಿಕ ಸ್ಫೂರ್ತಿ ಹಾಗೂ ಮೌಲ್ಯಗಳನ್ನು ಪುನರ್ ಸ್ಥಾಪಿಸುವ ಹೋರಾಟದಲ್ಲಿ ಸಂಘಟನೆಯು ದೃಢವಾಗಿ ನಿಲ್ಲಲಿದೆ’ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT