ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಡ: ನಕ್ಸಲರ ಅಟ್ಟಹಾಸಕ್ಕೆ 22 ಯೋಧರು ಹುತಾತ್ಮ

ಎನ್‌ಕೌಂಟರ್‌ ಸ್ಥಳದಲ್ಲಿ ಭಾನುವಾರ 17 ಯೋಧರ ಶವ ಪತ್ತೆ
Last Updated 4 ಏಪ್ರಿಲ್ 2021, 21:30 IST
ಅಕ್ಷರ ಗಾತ್ರ

ರಾಯಪುರ, ಛತ್ತೀಸಗಡ: ಮಾವೋವಾದಿ ನಕ್ಸಲರು ಶನಿವಾರ ಇಲ್ಲಿನ ಅರಣ್ಯ ಪ್ರದೇಶದಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಯೋಧರು, ಭದ್ರತಾ ಸಿಬ್ಬಂದಿ ಸೇರಿ ಒಟ್ಟು 22 ಮಂದಿ ಹುತಾತ್ಮರಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ನಡೆದಿರುವ ಭೀಕರ ದಾಳಿ ಇದಾಗಿದೆ. ಕನ್ನಡಿಗ, ‘ಕೋಬ್ರಾ’ ಕಮಾಂಡೊ ಎಲ್ಲಣ್ಣ ಸಮ್ಮೇಶ್‌ ಸೇರಿದಂತೆ ಗುಂಡಿನ ಚಕಮಕಿಯಲ್ಲಿ ಒಟ್ಟು 31 ಜನರು ಗಾಯಗೊಂಡಿದ್ದಾರೆ.

ಮೃತ 22 ಜನರಲ್ಲಿ ಸಿಆರ್‌ಪಿಎಫ್‌ನ 8 ಮಂದಿ, ‘ಕೋಬ್ರಾ’ (ಕಮಾಂಡೊ ಬೆಟಾಲಿಯನ್ಸ್‌ ಫಾರ್‌ ರೆಸಲೂಟ್‌ ಆ್ಯಕ್ಷನ್‌)ದ ಏಳು ಕಮಾಂಡೊಗಳು, ಬಸ್ತಾರಿಯಾ ತುಕಡಿಯ ಒಬ್ಬ ಯೋಧ ಸೇರಿದ್ದಾರೆ. ಸಿಆರ್‌ಪಿಎಫ್‌ನ ಒಬ್ಬ ಇನ್‌ಸ್ಪೆಕ್ಟರ್ ನಾಪತ್ತೆಯಾಗಿದ್ದಾರೆ. ಮಾವೋವಾದಿಗಳ ಪ್ರಾಬಲ್ಯವಿರುವ ಗಡಿ ಜಿಲ್ಲೆಯ ಸುಕ್ಮಾದ ಅರಣ್ಯ ಭಾಗದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದವರ ಸುತ್ತುವರಿದು ನಕ್ಸಲರು ಗುಂಡಿನ ದಾಳಿ ನಡೆಸಿದ್ದರು.

‘ಬಿಜಾಪುರ ಹಾಗೂ ಸುಕ್ಮಾ ಜಿಲ್ಲೆಗಳ ಗಡಿಗೆ ಹೊಂದಿಕೊಂಡ ಅರಣ್ಯದಲ್ಲಿ ಶನಿವಾರ ಗುಂಡಿನ ಚಕಮಕಿ ನಡೆದಿದ್ದು, ಐವರು ಯೋಧರು ಸತ್ತಿದ್ದರು. ಭಾನುವಾರ ಅದೇ ಸ್ಥಳದಲ್ಲಿ 17 ಯೋಧರ ಶವ ಪತ್ತೆಯಾಗಿದೆ. ಯೋಧರ ಬಳಿಯಿದ್ದ ಶಸ್ತ್ರಾಸ್ತ್ರಗಳು ಕಾಣೆಯಾಗಿವೆ’ ಎಂದು ಛತ್ತೀಸಗಡದ ಡಿಐಜಿ (ನಕ್ಸಲ್‌ ನಿಗ್ರಹ ಕಾರ್ಯಾಚರಣೆ) ಒ.ಪಿ.ಪಾಲ್ ಅವರು ತಿಳಿಸಿದ್ದಾರೆ.

ಸುಮಾರು 4 ಗಂಟೆ ಗುಂಡಿನ ಚಕಮಕಿ ನಡೆದಿದೆ. ತಂಡವು ತರೆಮ್‌ನಿಂದ ಹೊರಟು ಜೋನಾಗುಡ ಅರಣ್ಯದ ಮೂಲಕ ಹೋಗುವಾಗ ದಾಳಿ ನಡೆದಿದೆ.

ಬಿಜಾಪುರ ಜಿಲ್ಲೆಯ ತರೆಮ್‌, ಉಸೂರ್‌, ಪಮೇಡ್‌, ಸುಕ್ಮಾ ಜಿಲ್ಲೆಯ ಮಿನ್‌ಪಾ ಹಾಗೂ ನರ್ಸಾಪುರಂ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಕಾರ್ಯಾಚರಣೆ ಆರಂಭವಾಗಿತ್ತು. 2,000 ಸಿಬ್ಬಂದಿ ಭಾಗಿಯಾಗಿದ್ದರು.

ಅಧಿಕಾರಿಯೊಬ್ಬರ ಪ್ರಕಾರ, ಗುಂಡಿನ ದಾಳಿ ಕೃತ್ಯದಲ್ಲಿ ಸುಮಾರು 400 ಮಾವೋವಾದಿಗಳು ಭಾಗಿಯಾಗಿದ್ದರು. ಪಿಎಲ್‌ಜಿಎ ಸಂಘಟನೆ 1ನೇ ಬೆಟಾಲಿಯನ್‌ನ ಹಿದ್ಮಾ ಮತ್ತು ಆತನ ಸಹಚರರಾದ ಸುಜಾತಾ ಈ ದಾಳಿಯ ಹಿಂದಿದ್ದಾರೆ ಎಂದು ಶಂಕಿಸಲಾಗಿದೆ. ಕೋಬ್ರಾ ಯೋಧರು ತೀವ್ರ ಪ್ರತಿರೋಧ ತೋರಿದ್ದರಿಂದ ನಕ್ಸಲರು ಇನ್ನಷ್ಟು ದಾಳಿ ಮುಂದುವರಿಸಲಾಗಲಿಲ್ಲ.

ಮಾವೋವಾದಿಗಳು ಮೂರು ದಿಕ್ಕಿನಿಂದ ಭದ್ರತಾ ಪಡೆಯನ್ನು ಸುತ್ತುವರಿದಿದ್ದು, ಲೈಟ್ ಮಷಿನ್ ಗನ್ ಬಳಸಿ ಗುಂಡಿನ ಸುರಿಮಳೆಗೈದಿದ್ದಾರೆ ಹಾಗೂ ಸುಧಾರಿತ ಸ್ಫೋಟಕ ಸಾಧನ (ಎಲ್ಇಡಿ)ವನ್ನೂ ದಾಳಿಗೆ ಬಳಸಿದ್ದಾರೆ. ನಕ್ಸಲೀಯರ ಕಡೆಯೂ 10 ರಿಂದ 12 ಜನರು ಸತ್ತಿರುವ ಶಂಕೆ ಇದ್ದು, ಶವಗಳನ್ನು ಅವರು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಒಯ್ದಿದ್ದಾರೆ.

ಗಾಯಗೊಂಡಿರುವ ಯೋಧರು, ಭದ್ರತಾ ಸಿಬ್ಬಂದಿಗಳಲ್ಲಿ 7 ಜನರನ್ನು ರಾಯಪುರದಲ್ಲಿನ ಆಸ್ಪತ್ರೆ ಹಾಗೂ 23 ಜನರನ್ನು ಬಿಜಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲರ ವಿರುದ್ಧ ಕಾರ್ಯಾಚರಣೆಗೆ 790 ಸಿಬ್ಬಂದಿಯ ಬಲ ಬಳಸಲು ಅನುಮೋದನೆ ದೊರೆತಿತ್ತು. ಸುದೀರ್ಘ ಅವಧಿಯ ಕಾರ್ಯಾಚರಣೆ ಆದ್ದರಿಂದ ಉಳಿದ ಸಿಬ್ಬಂದಿಯನ್ನು ಬೆಂಬಲವಾಗಿ ಬಳಸಲಾಗಿತ್ತು. ಗುಂಡಿನ ಚಕಮಕಿ ಆರಂಭವಾದ ಹಿಂದೆಯೇ ರಕ್ಷಣೆ ಕಾರ್ಯಕ್ಕೆ ನೆರವಾಗಲು ಹೆಲಿಕಾಪ್ಟರ್ ಸೇವೆ ಪಡೆಯಲಾಯಿತು. ಆದರೆ, ಸಕಾಲದಲ್ಲಿ ಹೆಲಿಕಾಪ್ಟರ್‌ ಸ್ಥಳಕ್ಕೆ ತಲುಪಲು ಆಗಲಿಲ್ಲ. ಸಂಜೆ 5ಕ್ಕೆ ಸ್ಥಳಕ್ಕೆ ತಲುಪಿದ್ದು, ಗಾಯಾಳುಗಳ ಕರೆತರಲು ನೆರವಾಯಿತು ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ಗೃಹ ಸಚಿವರ ನೇತೃತ್ವದಲ್ಲಿ ಸಭೆ
ನವದೆಹಲಿ:
ಛತ್ತೀಸಗಡದಲ್ಲಿ ನಡೆದ ನಕ್ಸಲರ ದಾಳಿ ಘಟನೆ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ಪರಿಸ್ಥಿತಿಯನ್ನು ಅವಲೋಕಿಸಿತು.

ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್‌ ಭಲ್ಲಾ, ಗುಪ್ತದಳ ವಿಭಾಗದ ನಿರ್ದೇಶಕ ಅರವಿಂದ ಕುಮಾರ್‌ ಸೇರಿದಂತೆ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

*
ನಮ್ಮ ಯೋಧರು, ಭದ್ರತಾ ಸಿಬ್ಬಂದಿ ಜೀವ ಕಳೆದುಕೊಂಡಿದ್ದಾರೆ. ಛತ್ತೀಸಗಡದಲ್ಲಿ ನಕ್ಸಲರ ದಾಳಿಗೆ ತಕ್ಕ ಪ್ರತ್ಯುತ್ತರವನ್ನು ಸಕಾಲದಲ್ಲಿ ನೀಡಲಿದ್ದೇವೆ.
–ಅಮಿತ್ ಶಾ, ಕೇಂದ್ರ ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT