ಸೋಮವಾರ, ಆಗಸ್ಟ್ 8, 2022
22 °C

ಬಂಗಾಳ-ಕೇಂದ್ರ ತಿಕ್ಕಾಟ: ಮುಖ್ಯ ಕಾರ್ಯದರ್ಶಿಗೆ ಸಲಹೆಗಾರ ಹುದ್ದೆ ಕೊಟ್ಟ ದೀದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪನ್‌ ಬಂದೋಪಾಧ್ಯಾಯ ಅವರನ್ನು ಮುಖ್ಯ ಸಲಹೆಗಾರರನ್ನಾಗಿ ನೇಮಕ ಮಾಡಿರುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಪ್ರಕಟಿಸಿದ್ದಾರೆ. ಮೇ 31ರಂದು ಅಲಪನ್‌ ನಿವೃತ್ತರಾಗುವುದು ನಿಗದಿಯಾಗಿತ್ತು.

ದೆಹಲಿಯಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ವರದಿ ಮಾಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಆದೇಶಿಸಿತ್ತು. 'ಮಂಗಳವಾರ ದೆಹಲಿಯ ನಾರ್ಥ್‌ ಬ್ಲಾಕ್‌ಗೆ ಬಂದು ಸೇರುವಂತೆ ಕೇಂದ್ರವು ತಿಳಿಸಿದೆ, ಆದರೆ ರಾಜ್ಯ ಸರ್ಕಾರದ ಅನುಮತಿ ಇಲ್ಲದೆಯೇ ಅಧಿಕಾರಿಯನ್ನು ವಾಪಸ್‌ ಬರುವಂತೆ ಒತ್ತಡ ಹೇರಲು ಸಾಧ್ಯವಿಲ್ಲ' ಎಂದು ಮಮತಾ ಹೇಳಿದ್ದಾರೆ.

'ಮಂಗಳವಾರದೊಳಗೆ ನಾರ್ಥ್‌ ಬ್ಲಾಕ್‌ಗೆ ಬಂದು ಸೇರುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಕೇಂದ್ರದಿಂದ ಪತ್ರ ತಲುಪಿದೆ. ಇದು ನನ್ನ ಪತ್ರಕ್ಕೆ ಉತ್ತರವಲ್ಲ, ಮುಖ್ಯಕಾರ್ಯದರ್ಶಿಗಳಿಗೆ ಬರೆದಿರುವುದು. ಇಂದು ನಾನು ಕಳುಹಿಸಿರುವ ಪತ್ರಕ್ಕೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ' ಎಂದಿದ್ದಾರೆ.

ಇದನ್ನೂ ಓದಿ– ಕೇಂದ್ರ ಸೇವೆಗೆ ಹಾಜರಾಗದ ಬಂಗಾಳದ ಮುಖ್ಯ ಕಾರ್ಯದರ್ಶಿ; ಶೋಕಾಸ್ ನೋಟಿಸ್‌ ಜಾರಿ

'ಅವರನ್ನು ಸೇವೆಯಿಂದ ಬಿಡುಗಡೆ ಮಾಡುತ್ತಿಲ್ಲ. ಅವರ ಸೇವಾವಧಿಯನ್ನು ಇಂದು ಮುಂದುವರಿಸಲಾಗಿದೆ, ಆದರೆ ಅವರು ಮುಖ್ಯಮಂತ್ರಿಯ ಮುಖ್ಯ ಸಲಹೆಗಾರರಾಗಿ ಮುಂದಿನ 3 ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಲಿದ್ದಾರೆ' ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಅಭಿವೃದ್ಧಿಗಾಗಿ ಮೋದಿಯವರ ಕಾಲು ಹಿಡಿಯಲೂ ಸಿದ್ಧ: ಮಮತಾ ಬ್ಯಾನರ್ಜಿ

ರಾಜ್ಯದಲ್ಲಿ ಕೋವಿಡ್‌–19 ನಿರ್ವಹಣೆಗೆ ಸಂಬಂಧಿಸಿ ರಾಜ್ಯಕ್ಕೆ ಅಲಪನ್‌ ಬಂದೋಪಾಧ್ಯಾಯ ಅವರ ಸೇವೆಯ ಅಗತ್ಯವಿದೆ. ಹೀಗಾಗಿ ಅವರನ್ನು ಕೇಂದ್ರದ ಸೇವೆಗೆ ಕಳುಹಿಸಿಕೊಡಲಾಗದು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಮತಾ ಇಂದು ಬೆಳಿಗ್ಗೆ ಪತ್ರ ಬರೆದಿದ್ದರು.

ಎಚ್‌.ಕೆ.ದ್ವಿವೇದಿ ಅವರನ್ನು ಪಶ್ಚಿಮ ಬಂಗಾಳದ ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಬಿ.ಪಿ.ಗೋಪಾಲಿಕಾ ಅವರನ್ನು ಗೃಹ ಇಲಾಖೆಯ ನೂತನ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಅಲಪನ್‌ ಬಂದೋಪಾಧ್ಯಾಯ ಅವರನ್ನು ಕೇಂದ್ರ ಸೇವೆಗೆ ಬರುವಂತೆ ಮತ್ತು ರಾಜ್ಯ ಸರ್ಕಾರವು ಅವರನ್ನು ಸೇವೆಯಿಂದ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವು ಮೇ 28ರ ರಾತ್ರಿಯ ಆದೇಶದಲ್ಲಿ ಸೂಚಿಸಿತ್ತು. ಅಲಪನ್‌ ಅವರು 1987ರ ಬ್ಯಾಚ್‌ನ ಪಶ್ಚಿಮ ಬಂಗಾಳ ಕೇಡರ್‌ನ ಐಎಎಸ್‌ ಅಧಿಕಾರಿ. 60 ವರ್ಷ ವಯೋಮಾನದ ಅಲಪನ್‌ ಇಂದು ನಿವೃತ್ತರಾಗುತ್ತಿದ್ದರು. ಆದರೆ, ಕೋವಿಡ್‌–19 ನಿರ್ವಹಣೆಯ ಕಾರಣಗಳಿಗಾಗಿ ಕೇಂದ್ರ ಸರ್ಕಾರವು ಅವರ ಸೇವೆಯನ್ನು 3 ತಿಂಗಳ ವರೆಗೂ ವಿಸ್ತರಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು