ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಎದುರಿಸಲು ಸೇನೆ ಸರ್ವಸನ್ನದ್ಧ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ಗಡಿ ಬಿಕ್ಕಟ್ಟು ಸಂಬಂಧ ಲೋಕಸಭೆಯಲ್ಲಿ ಹೇಳಿಕೆ ನೀಡಿದ ರಕ್ಷಣಾ ಸಚಿವ ರಾಜನಾಥ್‌
Last Updated 16 ಸೆಪ್ಟೆಂಬರ್ 2020, 1:16 IST
ಅಕ್ಷರ ಗಾತ್ರ

ನವದೆಹಲಿ:‘ಗಡಿಯಲ್ಲಿನ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವುದು ಸ್ವೀಕಾರಾರ್ಹವಲ್ಲ ಎಂಬುದನ್ನು ಚೀನಾಗೆ ರಾಜತಾಂತ್ರಿಕ ಮತ್ತು ಸೇನಾ ಮಾತುಕತೆಗಳ ಮೂಲಕ ಅತ್ಯಂತ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಪ್ರದೇಶದಲ್ಲಿ ಉದ್ಭವಿಸಬಹುದಾದ ಯಾವುದೇ ಸ್ಥಿತಿಯನ್ನು ಎದುರಿಸಲು ನಮ್ಮ ಸೇನಾ ಪಡೆಗಳು ಸನ್ನದ್ಧವಾಗಿವೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಂಗಳವಾರ ಸ್ಪಷ್ಟಪಡಿಸಿದರು.

ಭಾರತ– ಚೀನಾ ಗಡಿಸಂಘರ್ಷದ ಬಗ್ಗೆ ಲೋಕಸಭೆಯಲ್ಲಿ ಹೇಳಿಕೆ ನೀಡಿದ ಅವರು, ‘ಮುಂಬರುವ ಚಳಿಗಾಲದ ಸಂದರ್ಭದಲ್ಲೂ ದೇಶದ ರಕ್ಷಣೆಗಾಗಿ ಲಡಾಖ್‌ನ ಉನ್ನತ ಪ್ರದೇಶಗಳಲ್ಲಿ ಉಳಿದುಕೊಳ್ಳಲು ಸೇನೆ ಎಲ್ಲ ರೀತಿಯಿಂದ ಸನ್ನದ್ಧವಾಗಿದೆ. ವಿಪರೀತ ಚಳಿಯನ್ನು ಎದುರಿಸಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸೈನಿಕರಿಗೆ ಒದಗಿಸಲಾಗಿದೆ’ ಎನ್ನುವ ಮೂಲಕ ಚೀನಾಗೆ ದಿಟ್ಟ ಸಂದೇಶ ರವಾನಿಸಿದ್ದಾರೆ.

‘ಲಡಾಖ್‌ ಗಡಿಯಲ್ಲಿ ಭಾರತವು ಸವಾಲುಗಳನ್ನು ಎದುರಿಸುತ್ತಿದೆ ಎಂದು ತಿಳಿಸಲು ಹಿಂಜರಿಕೆ ಇಲ್ಲ. ಆದರೆ, ಎಂಥ ಸವಾಲನ್ನಾದರೂ ಎದುರಿಸಿ, ದೇಶದ ಸಾರ್ವಭೌಮತೆಯನ್ನು ಕಾಪಾಡಲು ನಮ್ಮ ಸೇನೆ ಶಕ್ತವಾಗಿದೆ. ಇಂಥ ಕಠಿಣ ಪರಿಸ್ಥಿತಿಯಲ್ಲಿ ದೇಶದ ರಕ್ಷಣೆಗಾಗಿ ಪಣತೊಟ್ಟು ನಿಂತಿರುವ ಸೇನೆಯಯ ಮೇಲೆ ವಿಶ್ವಾಸವಿಡಬೇಕು’ ಎಂದರು.

‘ಗಡಿಯಲ್ಲಿ ಚೀನಾದ ಸೇನೆಯ ಜಮಾವಣೆ, ಅವರ ಆಕ್ರಮಣಕಾರಿ ನಿಲುವು, ದ್ವಿಪಕ್ಷೀಯ ಒಪ್ಪಂದಗಳ ಉಲ್ಲಂಘನೆ ಮುಂತಾದ ನಡೆಗಳ ಬಗ್ಗೆ ನಮ್ಮ ಅಸಮಾಧಾನ ಮತ್ತು ನಿಲುವನ್ನು, ಮಾಸ್ಕೋದಲ್ಲಿ ಚೀನಾದ ರಕ್ಷಣಾ ಸಚಿವರ ಜತೆ ನಡೆಸಿದ ಮಾತುಕತೆಯ ಸಂದರ್ಭದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ’ ಎಂದರು.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಅವರ ನಡುವಣ ಮಾತುಕತೆಯ ಸಂದರ್ಭದಲ್ಲಿ ಮಾಡಿಕೊಂಡಿರುವ ಐದು ಸೂತ್ರಗಳ ಒಪ್ಪಂದವನ್ನು ಉಲ್ಲೇಖಿಸಿದ ಸಿಂಗ್‌, ‘ಈ ಅಂಶಗಳನ್ನು ಚೀನಾ ಪ್ರಾಮಾಣಿಕವಾಗಿ ಒಪ್ಪಿಕೊಂಡು ಜಾರಿ ಮಾಡಿದರೆ, ಗಡಿಯಲ್ಲಿ ಶಾಂತಿ ಸ್ಥಾಪನೆ ಸಾಧ್ಯವಾಗಲಿದೆ’ ಎಂದರು.

‘ಪೂರ್ವ ಲಡಾಖ್‌ನ ಗಡಿಯ ಸಮೀಪದಲ್ಲಿ ಚೀನಾದ ಸೇನೆ ಜಮಾವಣೆ ಆಗುತ್ತಿರುವುದು ಏಪ್ರಿಲ್‌ ತಿಂಗಳಲ್ಲಿ ಗಮನಕ್ಕೆ ಬಂದಿತ್ತು. ಮೇ ತಿಂಗಳಲ್ಲಿ ನಮ್ಮ ದೈನಂದಿನ ಗಸ್ತು ವ್ಯವಸ್ಥೆಗೆ ಅಡ್ಡಿಪಡಿಸಲು ಚೀನಾ ಸೈನಿಕರು ಪ್ರಯತ್ನಿಸಿದ್ದರು. ಇದರ ಪರಿಣಾಮ, ಗಡಿಯಲ್ಲಿ ಸಂಘರ್ಷದ ಸ್ಥಿತಿ ನಿರ್ಮಾಣವಾಯಿತು. ಈ ಸಮಸ್ಯೆಯನ್ನು ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿ, ಕಮಾಂಡರ್‌ ಮಟ್ಟದ ಮಾತುಕತೆ ಮೂಲಕ ಬಗೆಹರಿಸಲಾಗಿತ್ತು.

‘ಆದರೆ, ಅದೇ ತಿಂಗಳ ಕೊನೆಯಲ್ಲಿ ವಾಸ್ತವ ಗಡಿರೇಖೆಯನ್ನು ಉಲ್ಲಂಘಿಸುವ ಪ್ರಯತ್ನವನ್ನು ಚೀನಾ ಹಲವು ಬಾರಿ ಮಾಡಿತ್ತು. ನಮ್ಮ ಸೈನಿಕರು ಸಂಯಮ ಮತ್ತು ಶೌರ್ಯ ಪ್ರದರ್ಶಿಸಿ ಅವರಿಗೆ ಪ್ರತ್ಯುತ್ತರ ನೀಡಿದ್ದಾರೆ. ಈ ಸಂಘರ್ಷದಲ್ಲಿ 20 ಸೈನಿಕರು ಹುತಾತ್ಮರಾದರು. ಚೀನಾ ಸೇನೆಯೂ ಭಾರಿ ಬೆಲೆ ತೆರಬೇಕಾಗಿ ಬಂದಿದೆ’ ಎಂದರು.

ಸಿಂಗ್‌ ಅವರ ಹೇಳಿಕೆಯ ನಂತರ, ಈ ವಿಚಾರವಾಗಿ ಚರ್ಚೆಗೆ ಅವಕಾಶ ನೀಡಬೇಕು ಎಂದು ವಿರೋಧ ಪಕ್ಷದವರು ಒತ್ತಾಯಿಸಿದರು. ಆದರೆ, ಸ್ಪೀಕರ್‌ ಓಂ ಬಿರ್ಲಾ ಅವರು ಅದಕ್ಕೆ ಅವಕಾಶ ನೀಡದಿರುವುದರಿಂದ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ನಡೆಸಿದರು.

***

ಚೀನಾ ಸ್ವಾಧೀನದಲ್ಲಿ ಭಾರತದ ಭೂಪ್ರದೇಶ

‘ಲಡಾಖ್‌ನಲ್ಲಿ, ಭಾರತಕ್ಕೆ ಸೇರಿದ 38,000 ಚದರ ಕಿ.ಮೀ. ಭೂಪ್ರದೇಶವನ್ನು ಚೀನಾ ಅಕ್ರಮವಾಗಿ ಸ್ವಾಧೀನದಲ್ಲಿರಿಸಿಕೊಂಡಿದೆ. ಇದಲ್ಲದೆ 1963ರಲ್ಲಿ ಪಾಕಿಸ್ತಾನ ಹಾಗೂ ಚೀನಾ ಮಧ್ಯೆ ನಡೆದಿದೆ ಎನ್ನಲಾದ ಗಡಿ ಒಪ್ಪಂದದಲ್ಲಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ 5,180 ಚದರ ಕಿ.ಮೀ. ಭೂಪ್ರದೇಶವನ್ನು ಪಾಕಿಸ್ತಾನವು ಚೀನಾಗೆ ಬಿಟ್ಟುಕೊಟ್ಟಿದೆ’ ಎಂದು ಸಿಂಗ್‌ ಲೋಕಸಭೆಗೆ ತಿಳಿಸಿದರು.

‘ಭಾರತಕ್ಕೆ ಸೇರಿದ, ಅರುಣಾಚಲ ಪ್ರದೇಶ ಭಾಗದ 90,000 ಚದರ ಕಿ.ಮೀ. ಭೂಪ್ರದೇಶವು ತನ್ನದು ಎಂದು ಚೀನಾ ಬಿಂಬಿಸುತ್ತಿದೆ. ಎಲ್‌ಎಸಿ ಹಾಗೂ ಇತರ ಕೆಲವು ಆಯಕಟ್ಟಿನ ಪ್ರದೇಶಗಳಲ್ಲಿ ಚೀನಾ ಸೈನಿಕರು ಹಾಗೂ ಶಸ್ತ್ರಾಸ್ತ್ರಗಳನ್ನು ಜಮಾವಣೆ ಮಾಡಿದೆ. ಗೊಗ್ರಾ, ಕೊಂಗ್‌ಕ ಲಾ, ಪಾಂಗಾಂಗ್‌ ಸರೋವರದ ಉತ್ತರ ಹಾಗೂ ದಕ್ಷಿಣ ಭಾಗಗಳಲ್ಲಿ ಉಭಯ ಸೇನೆಗಳ ನಡುವೆ ಹಲವು ಸಂಘರ್ಷಗಳು ನಡೆದಿವೆ ಎಂದರು.

***

ಪ್ರಧಾನಿ ಪಲಾಯನ: ಕಾಂಗ್ರೆಸ್‌

‘ಸಂಸತ್ತಿನಲ್ಲಿ ವಿರೋಧಪಕ್ಷಗಳವರಿಗೆ ಮಾತನಾಡಲು ಅವಕಾಶ ನೀಡದಿರುವ ಮೂಲಕ, ಚೀನಾದ ಗಡಿ ಉಲ್ಲಂಘನೆ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚೆ ನಡೆಸುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಪಲಾಯನ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ವಿರೋಧ ಪಕ್ಷಗಳ ಹಲವು ಸದಸ್ಯರು ಒತ್ತಾಯಿಸಿದ್ದರೂ, ಅವಕಾಶ ನೀಡದಿರುವುದನ್ನು ಖಂಡಿಸಿ, ಕಾಂಗ್ರೆಸ್‌ ಸದಸ್ಯರು ಮಾತ್ರ ಸಭಾತ್ಯಾಗ ನಡೆಸಿದರು. ಬಳಿಕ ಅವರು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿ, ಸದನದಲ್ಲಿ ಪ್ರಧಾನಿಯ ಅನುಪಸ್ಥಿತಿಯನ್ನು ಪ್ರಶ್ನಿಸಿದರು.

‘ಕಾಂಗ್ರೆಸ್‌ ಪಕ್ಷದ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ. ‘ನಾವು ಸೇನೆಯ ಜತೆಗಿದ್ದೇವೆ’ ಎಂಬ ಸಂದೇಶವನ್ನು ನೀಡಲು ಕಾಂಗ್ರೆಸ್‌ ಬಯಸಿದೆ. ಜತೆಗೆ, ಸರ್ಕಾರವು ಪ್ರಾಮಾಣಿಕ, ಜವಾಬ್ದಾರಿಯುತ ಮತ್ತು ಪಾರದರ್ಶಕವಾಗಿರಬೇಕು ಎಂದು ನಾವು ಬಯಸುತ್ತೇವೆ’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪನಾಯಕ ಗೌರವ್‌ ಗೊಗೊಯಿ ಹೇಳಿದರು.

‘ಚೀನಾ ಸಂಘರ್ಷದ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ದೇಶದ ಜನರ ದಾರಿ ತಪ್ಪಿಸಿದ್ದಾರೆ ಎಂಬುದು ರಕ್ಷಣಾ ಸಚಿವರ ಹೇಳಿಕೆಯಿಂದ ಸ್ಪಷ್ಟವಾಗಿದೆ’ ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT