ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಕ್ಕೆ ಒಂದೇ ಪರೀಕ್ಷೆ: ಎನ್‌ಆರ್‌ಎ ಸ್ಥಾಪನೆಗೆ ಕೇಂದ್ರ ಸಂಪುಟ ಒಪ್ಪಿಗೆ

Last Updated 20 ಆಗಸ್ಟ್ 2020, 5:58 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಉದ್ಯೋಗಗಳ ನೇಮಕಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸುವ ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್‌ಆರ್‌ಎ) ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟವು ಬುಧವಾರ ಅನುಮೋದನೆ ನೀಡಿದೆ.ಒಂದೇ ರೀತಿಯ ಅರ್ಹತಾ ಮಾನದಂಡಗಳಿರುವ ಮಧ್ಯಮ ಮತ್ತು ಕಿರಿಯ ಶ್ರೇಣಿಯ (ಗ್ರೂಪ್‌ ಬಿ ಮತ್ತು ಸಿ) ಉದ್ಯೋಗಗಳು ಸಿಇಟಿಯ ವ್ಯಾಪ್ತಿಗೆ ಬರಲಿವೆ.

ಇದೊಂದು ಕ್ರಾಂತಿಕಾರಕ ಸುಧಾರಣೆ ಎಂದು ಕೇಂದ್ರ ಸರ್ಕಾರ ಬಣ್ಣಿಸಿದೆ. ಒಂದೇ ರೀತಿಯ ಉದ್ಯೋಗಗಳಿಗಾಗಿ ಹಲವು ಬಾರಿ ಪರೀಕ್ಷೆ ಬರೆಯುವ, ಪರೀಕ್ಷಾ ಶುಲ್ಕ ಭರಿಸುವ ತೊಂದರೆಯನ್ನು ಎನ್‌ಆರ್‌ಎ ನಿವಾರಿಸುತ್ತದೆ. ಕೇಂದ್ರದ ಗ್ರೂಪ್‌ ಬಿ ಮತ್ತು ಸಿ ಹುದ್ದೆಗಳಲ್ಲಿ ಮಹಿಳೆಯರು ಮತ್ತು ಗ್ರಾಮೀಣ ಪ್ರದೇಶದ ಆಕಾಂಕ್ಷಿಗಳಿಗೆ ಇದರಿಂದಾಗಿ ಹೆಚ್ಚು ಅವಕಾಶ ದೊರೆಯಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ), ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಮತ್ತು ಬ್ಯಾಂಕ್‌ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್‌) ಈಗ ನೇಮಕಾತಿಗಾಗಿ ಪ್ರತ್ಯೇಕ ಪರೀಕ್ಷೆಗಳನ್ನು ನಡೆಸುತ್ತಿವೆ. ಇನ್ನು ಮುಂದೆ ಇವೆಲ್ಲವೂ ಸಿಇಟಿಯಲ್ಲಿ ಒಳಗೊಳ್ಳಲಿವೆ. ಆರಂಭದಲ್ಲಿ ತಾಂತ್ರಿಕೇತರ ಹುದ್ದೆಗಳು ಮಾತ್ರ ಇದರ ವ್ಯಾಪ್ತಿಯಲ್ಲಿ ಇರಲಿವೆ. ಮುಂದೆ, ವಿಶೇಷ ಪರೀಕ್ಷೆಗಳನ್ನೂ ಎನ್‌ಆರ್‌ಎ ನಡೆಸಲಿದೆ.

ಎನ್‌ಆರ್‌ಎ ನಡೆಸುವ ಸಿಇಟಿಯ ಅಂಕಗಳನ್ನು ರಾಜ್ಯ ಸರ್ಕಾರಗಳು, ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯಮಗಳು ಕೂಡ ಪಡೆದುಕೊಂಡು ಅದರ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಮುಂದಿನ ಹಂತದಲ್ಲಿ ಅವಕಾಶ ಕಲ್ಪಿಸಲಾಗುವುದು.

ಈಗ, ಅಭ್ಯರ್ಥಿಗಳು ಪ್ರತಿ ಹುದ್ದೆಗೂ ಪ್ರತ್ಯೇಕ ಪರೀಕ್ಷೆ ಬರೆಯಬೇಕಾಗಿದೆ. ಒಂದೊಂದು ಪರೀಕ್ಷೆಗೂ 2.5 ಕೋಟಿಯಿಂದ 3 ಕೋಟಿ ಆಕಾಂಕ್ಷಿಗಳು ಹಾಜರಾಗುತ್ತಿದ್ದಾರೆ. ಮುಂದೆ ಒಂದೇ ಪರೀಕ್ಷೆ ಬರೆದರೆ ಸಾಕಾಗುತ್ತದೆ. ಸಿಇಟಿ ಪರೀಕ್ಷೆಗೆ ಕಲಿಯಬೇಕಾದ ಪಠ್ಯ ವಿಷಯವೂ ಸಮಾನವಾಗಿರುತ್ತದೆ. ಈಗಿನಂತೆ, ಬೇರೆ ಬೇರೆ ಹುದ್ದೆಯ ಪರೀಕ್ಷೆಗೆ ಪ್ರತ್ಯೇಕವಾಗಿ ಸಿದ್ಧತೆ ನಡೆಸಬೇಕಾದ ಅಗತ್ಯವೂ ಇರುವುದಿಲ್ಲ.

ಸಿಇಟಿಯ ಅಂಕಗಳ ಆಧಾರದಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಎನ್‌ಆರ್‌ಎ ಸಿದ್ಧಪಡಿಸುತ್ತದೆ. ಅದರ ಆಧಾರದಲ್ಲಿ ಎರಡು ಅಥವಾ ಮೂರನೇ ಹಂತದ ಪರೀಕ್ಷೆಗಳನ್ನು ಆಯಾ ನೇಮಕಾತಿ ಸಂಸ್ಥೆಗಳು ಮಾಡಿಕೊಳ್ಳಬೇಕಾಗುತ್ತದೆ. ಈ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಅಂತಿಮ ಆಯ್ಕೆ ನಡೆಯಲಿದೆ.

ಪದವಿ, ಪಿಯುಸಿ (+2) ಮತ್ತು 10ನೇ ತರಗತಿ ಮಟ್ಟದ ಸಿಇಟಿ ನಡೆಯಲಿವೆ. ವಿವಿಧ ಭಾಷೆಗಳಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುವುದು. ಹಾಗಾಗಿ, ದೇಶದ ಎಲ್ಲ ಭಾಗಗಳ ಜನರಿಗೆ ಸಮಾನ ಅವಕಾಶ ದೊರೆಯಲಿದೆ ಎಂದು ಹೇಳಲಾಗಿದೆ.

ಮೂರು ವಿಮಾನ ನಿಲ್ದಾಣಅದಾನಿ ಕಂಪನಿಗೆ
ರಾಜಸ್ಥಾನದ ಜೈಪುರ, ಅಸ್ಸಾಂನ ಗುವಾಹಟಿ ಮತ್ತು ಕೇರಳದ ತಿರುವನಂತಪುರ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಖಾಸಗಿಯವರಿಗೆ ಒಪ್ಪಿಸುವ ಮಹತ್ವದ ಪ್ರಸ್ತಾವಕ್ಕೂ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಅದಾನಿ ಎಂಟರ್‌ಪ್ರೈಸಸ್‌ಈ ಮೂರು ವಿಮಾನ ನಿಲ್ದಾಣಗಳನ್ನು 50 ವರ್ಷ ನಿರ್ವಹಿಸುವ ಗುತ್ತಿಗೆ ಪಡೆದಿದೆ.

ಲಖನೌ, ಅಹಮದಾಬಾದ್, ಜೈಪುರ, ಮಂಗಳೂರು, ತಿರುವನಂತಪುರ, ಗುವಾಹಟಿ ವಿಮಾನ ನಿಲ್ದಾಣಗಳನ್ನುಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ನಿರ್ವಹಿಸಲು2019ರ ಫೆಬ್ರುವರಿಯಲ್ಲಿ ಟೆಂಡರ್ ಕರೆಯಲಾಗಿತ್ತು.‌ ಆದಾನಿ ಕಂಪನಿ ಆರು ವಿಮಾನ ನಿಲ್ದಾಣಗಳ ನಿರ್ವಹಣೆಯ ಗುತ್ತಿಗೆ ಪಡೆದಿತ್ತು.

ಕಳೆದ ಜುಲೈನಲ್ಲಿ ನಡೆ‌ದ ಸಚಿವ ಸಂಪುಟ ಸಭೆಯಲ್ಲಿ ಮೊದಲ ಹಂತದಲ್ಲಿ ಮಂಗಳೂರು, ಅಹಮದಾಬಾದ್ ಮತ್ತು ಲಖನೌ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿ ಎಂಟರ್‌ಪ್ರೈಸಸ್‌ಗೆ ನೀಡಲು ಒಪ್ಪಿಗೆ ನೀಡಲಾಗಿತ್ತು.

ಇದೀಗ ಎರಡನೇ ಹಂತದಲ್ಲಿ ಉಳಿದ ಮೂರು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದೇ ಕಂಪನಿಗೆ ವಹಿಸಲಾಗಿದೆ ಎಂದು ಜಾವಡೇಕರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮುಂದಿನ ಐದು ವರ್ಷಗಳಲ್ಲಿ ದೇಶದ 30–35 ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ವಹಿಸಲು ಯೋಚಿಸುತ್ತಿದೆ.

ಮುಂದಿನ ಹಂತದಲ್ಲಿ ವಾರಾಣಸಿ, ಭುವನೇಶ್ವರ, ಇಂದೋರ್‌, ರಾಯಪುರ ಮತ್ತು ತಿರುಚ್ಚಿ ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ಒಪ್ಪಿಸಲು ತೀರ್ಮಾನಿಸಿದೆ. ಈಗಾಗಲೇ ದೆಹಲಿ, ಮುಂಬೈ, ಹೈದರಾಬಾದ್, ಬೆಂಗಳೂರು‌ ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ಒಪ್ಪಿಸಲಾಗಿದೆ.

*
ಎನ್‌ಆರ್‌ಎ ಸ್ಥಾಪನೆಯು ಕೋಟ್ಯಂತರ ಉದ್ಯೋಗ ಆಕಾಂಕ್ಷಿ ಯುವ ಸಮೂಹಕ್ಕೆ ಆಶಾಕಿರಣ. ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಸಂಪೂರ್ಣ ಪಾರದರ್ಶಕತೆ ಬರಲಿದೆ.
-ನರೇಂದ್ರ ಮೋದಿ, ಪ್ರಧಾನಿ

*

ವಿಮಾನ ನಿಲ್ದಾಣಗಳನ್ನು ಖಾಸಗಿ ಅವರಿಗೆ ವಹಿಸಿದರೆ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ದೊರೆಯುವುದಲ್ಲದೆ, ಆದಾಯವೂ ಹೆಚ್ಚಲಿದೆ.
-ಹರದೀಪ್‌ ಸಿಂಗ್‌ ಪುರಿ, ನಾಗರಿಕ ವಿಮಾನ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT