ಗುರುವಾರ , ಜೂನ್ 30, 2022
25 °C

ಕ್ಷುಲ್ಲಕ ವಿಚಾರಗಳ ಬಗ್ಗೆ ದೂರು ಸಲ್ಲಿಕೆ: ಸುಪ್ರೀಂ ಕೋರ್ಟ್‌ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕ್ಷುಲ್ಲಕ ವಿಚಾರಗಳ ಬಗ್ಗೆ ದೂರು ಸಲ್ಲಿಕೆಯು ಸುಪ್ರೀಂ ಕೋರ್ಟ್‌ನ ಅಸಮಾಧಾನಕ್ಕೆ ಕಾರಣವಾಗಿದೆ. ಇಂತಹ ದೂರುಗಳು ನ್ಯಾಯಾಲಯದ ಕೆಲಸಕ್ಕೆ ಅಡ್ಡಿಯಾಗುತ್ತವೆ ಮತ್ತು ರಾಷ್ಟ್ರೀಯ ಮಹತ್ವದ ವಿಚಾರಗಳನ್ನು ಕೈಗೆತ್ತಿಕೊಳ್ಳಬೇಕಾದ ನ್ಯಾಯಮೂರ್ತಿಗಳ ಸಮಯವನ್ನು ಹಾಳು ಮಾಡುತ್ತವೆ ಎಂದು ಕೋರ್ಟ್‌ ಹೇಳಿದೆ.

ಮಾರ್ಚ್‌ನಲ್ಲಿಯೇ ವಿಲೇವಾರಿ ಮಾಡಲಾದ ಪ್ರಕರಣವೊಂದಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕೈಗೆತ್ತಿಕೊಂಡ ಪೀಠವು ಅಸಮಾಧಾನ ವ್ಯಕ್ತಪಡಿಸಿತು. ಅಂತಿಮ ಆದೇಶವನ್ನು ಈಗಾಗಲೇ ನೀಡಲಾಗಿದ್ದರೂ ಮತ್ತೆ ಅರ್ಜಿ ಸಲ್ಲಿಕೆಯಾಗಿದೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಮತ್ತು ಎಂ.ಆರ್‌. ಶಾ ಅವರ ಪೀಠವು ಹೇಳಿದೆ. 

‘ಏನಿದು? ಸುಪ್ರೀಂ ಕೋರ್ಟ್‌ನ ಸಮಯವನ್ನು ಹೀಗೆ ಹಾಳು ಮಾಡಲಾಗುತ್ತಿದೆ’ ಎಂದು ಕ್ಷುಲ್ಲಕ ವಿಚಾರವನ್ನು ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು. ರಜಾ ಕಾಲದ ಪೀಠದ ಮುಂದೆ ಇರುವ ಶೇ 95ರಷ್ಟು ಪ್ರಕರಣಗಳು ಅನಗತ್ಯವಾದುದೇ ಆಗಿವೆ. ಇಂತಹ ನಡವಳಿಕೆಗೆ ಉತ್ತೇಜನ ಕೊಡಬಾರದು ಎಂದು ಪೀಠವು ಹೇಳಿದೆ. 

ಅನಗತ್ಯ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಬಾರದು, ಗಂಭೀರ ವಿಚಾರಗಳಿಗೆ ಸಮಯ ನೀಡಬೇಕು ಎಂದು ಚಂದ್ರಚೂಡ್‌ ಹೇಳಿದ್ದಾರೆ.

ತಮ್ಮ ವಾದ ಮಂಡನೆಗೆ ಅವಕಾಶ ಕೊಡಬೇಕು ಎಂದು ವಕೀಲರು ಮತ್ತೆಯೂ ವಿನಂತಿಸಿದರು. ನ್ಯಾಯಾಲಯದ ಪಾವಿತ್ರ್ಯವನ್ನು ಗೌರವಿಸಿ ಎಂದು ಪೀಠವು ವಕೀಲರಿಗೆ ಸೂಚಿಸಿತು. ಇಂತಹ ಅರ್ಜಿಗಳ ವಿಚಾರಣೆ ನಡೆಸಿದರೆ ಸಂಪನ್ಮೂಲ ವ್ಯರ್ಥವಾಗುವುದು ಮಾತ್ರವಲ್ಲ, ನ್ಯಾಯಮೂರ್ತಿಗಳಿಗೆ ಬೇಕಾದಷ್ಟು ಸಮಯ ಇದೆ ಎಂಬ ಭಾವನೆಯೂ ಮೂಡುತ್ತದೆ ಎಂದು ಪೀಠವು ಹೇಳಿದೆ. 

ಮೊಕದ್ದಮೆ ನೀತಿ ಅನುಸರಿಸಿ: ಕೋರ್ಟ್ ನಿರ್ದೇಶನ

ನವದೆಹಲಿ: ‘ಕೋರ್ಟ್‌ ಅಥವಾ ನ್ಯಾಯಮಂಡಳಿಯಿಂದ ಈಗಾಗಲೇ ತೀರ್ಮಾನವಾದ ವಿಷಯಗಳಿಗೆ ಸಂಬಂಧಿಸಿ ಜನರು ಮತ್ತೆ ಕೋರ್ಟ್‌ ಮೆಟ್ಟಿಲು ಏರುವಂತೆ ಮಾಡಬಾರದು. ರಾಷ್ಟ್ರೀಯ ಮೊಕದ್ದಮೆಗಳ ನೀತಿ (ಎನ್‌ಎಲ್‌ಪಿ) ಪಾಲಿಸಬೇಕು’ ಎಂದು ದೆಹಲಿ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

‘ವಿಷಯದಲ್ಲಿ ಸಾಮ್ಯತೆ ಇದ್ದು, ಈಗಾಗಲೇ ತೀರ್ಮಾನ ಆಗಿದ್ದರೆ, ಆದೇಶ ನಂತರದ ಅದೇ ಸ್ವರೂಪದ ಪ್ರಕರಣಗಳಿಗೂ ಅನ್ವಯವಾಗಲಿದೆ ಎಂಬ ಕೇಂದ್ರದ ರಾಷ್ಟ್ರೀಯ ಮೊಕದ್ದಮೆಗಳ ನೀತಿಯು (ಎನ್‌ಎಲ್‌ಪಿ) ಆಡಳಿತ ವ್ಯವಸ್ಥೆಯ ಗಮನದಲ್ಲಿರಬೇಕು’ ಎಂದು ಕೋರ್ಟ್‌ ತಿಳಿಸಿದೆ.

ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಜನರು ಮತ್ತೆ, ಮತ್ತೆ ಕೋರ್ಟ್‌ ಮೆಟ್ಟಿಲೇರುವಂತೆ ಮಾಡಬಾರದು. ಪುನರಾವರ್ತನೆ ತಪ್ಪಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್‌ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠವು ಸ್ಪಷ್ಟ ನಿರ್ದೇಶನ ನೀಡಿತು.

ಪೈಲೆಟ್‌ಗಳ ವಜಾ: ಹೈಕೋರ್ಟ್‌ನಿಂದ ರದ್ದು

ನವದೆಹಲಿ: ಏರ್‌ ಇಂಡಿಯಾದ 40 ಪೈಲೆಟ್‌ಗಳನ್ನು ಕಳೆದ ಆಗಸ್ಟ್‌ನಲ್ಲಿ ಕೆಲಸದಿಂದ ವಜಾಗೊಳಿಸಿದ ನಿರ್ಧಾರವನ್ನು‌ ದೆಹಲಿ ಹೈಕೋರ್ಟ್‌ ರದ್ದುಗೊಳಿಸಿದ್ದು, ಆ ಎಲ್ಲ ನೌಕರರನ್ನು ಕೆಲಸಕ್ಕೆ ಮರು ನಿಯೋಜಿಸಿಕೊಳ್ಳುವಂತೆ ನಿರ್ದೇಶನ ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರು ವಿಮಾನಯಾನ ಸಂಸ್ಥೆಗೆ ಈ ನಿರ್ದೇಶನ ನೀಡಿದ್ದಾರೆ. ಮರು ನೇಮಕ ಮಾಡಿಕೊಳ್ಳುವ ಪೈಲೆಟ್‌ಗಳಿಗೆ ಬಾಕಿ ವೇತನವನ್ನೂ ಪಾವತಿಸಬೇಕು ಎಂದು ಆದೇಶಿಸಿದ್ದಾರೆ.

ಇದೇ ವೇಳೆ, ಪೈಲೆಟ್‌ಗಳ ಕೆಲಸ ತೃಪ್ತಿದಾಯಕವಾಗಿದ್ದರೆ, ಭವಿಷ್ಯದಲ್ಲಿ ಅವರ ಒಪ್ಪಂದದ ಅವಧಿಯನ್ನು ವಿಸ್ತರಿಸುವ ವಿವೇಚಾನಾಧಿಕಾರ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಗೆ ಸೇರಿದ್ದಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪಿನ ವಿವರ ಬುಧವಾರ ಲಭ್ಯವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು