ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ ಅವಧಿ ಮೊಟಕು ನಿರ್ಧಾರ ಹಿಂಪಡೆಯಲು ಆಗ್ರಹಿಸಿ ಸ್ಪೀಕರ್‌ಗೆ ಪತ್ರ

ಓಂ ಬಿರ್ಲಾ, ವೆಂಕಯ್ಯ ನಾಯ್ಡುಗೆ ಪತ್ರ ಬರೆದ 858 ಮಂದಿ
Last Updated 4 ಸೆಪ್ಟೆಂಬರ್ 2020, 20:28 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್‌ ಅಧಿವೇಶನದ ಪ್ರಶ್ನೋತ್ತರ ಅವಧಿ ಮತ್ತು ಶೂನ್ಯ ವೇಳೆಯನ್ನು ಮೊಟಕುಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ದೇಶದ 800ಕ್ಕೂ ಶಿಕ್ಷಣ ತಜ್ಞರು, ಹೋರಾಟಗಾರರು, ರಾಜಕೀಯ ನಾಯಕರು ಮತ್ತು ವಿದ್ಯಾರ್ಥಿಗಳು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಮತ್ತು ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.

ಇಬ್ಬರಿಗೂ ಪ್ರತ್ಯೇಕವಾಗಿ ಪತ್ರ ಬರೆಯಲಾಗಿದ್ದು, ಈ ನಿರ್ಧಾರದಿಂದಾಗಿ ಕಾರ್ಯಾಂಗದ ಕಾರ್ಯವೈಖರಿಯನ್ನು ಪ್ರಶ್ನಿಸುವ ಹಕ್ಕು ಪ್ರಜಾ ಪ್ರತಿನಿಧಿಗಳಿಗೆ ಸಿಗುವುದಿಲ್ಲ. ಹೀಗಾಗಿ ನಿರ್ಧಾರವನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

‘ಸಭಾ ನಿಯಮಗಳಂತೆಯೇ, ಕೆಲವೇ ಕೆಲವು ಸಂದರ್ಭಗಳಲ್ಲಿ ಅಥವಾ ಪ್ರಕರಣಗಳಲ್ಲಿ ಪ್ರಶ್ನೋತ್ತರ ಅವಧಿಯನ್ನು ರದ್ದುಪ‍ಡಿಸುವ ಅಧಿಕಾರ ಸಭಾಧ್ಯಕ್ಷರಿಗೆ ಇದೆ. ಅದು ಕೂಡ ಉಭಯ ಸದನಗಳ ಒಪ್ಪಿಗೆಯ ಮೇಲೆ ಮಾಡಬಹುದಾಗಿದೆ’ ಎಂದು 858 ಮಂದಿ ಪತ್ರದಲ್ಲಿ ತಿಳಿಸಿದ್ದಾರೆ.

ನಿವೃತ್ತ ಅಧಿಖಾರಿ ಜವಾಹರ್‌ ಸಿರ್ಕಾರ್‌, ಇತಿಹಾಸಗಾರ್ತಿ ಮೃದುಲಾ ಮುಖರ್ಜಿ, ಶಿಕ್ಷಣ ತಜ್ಞರಾದ ಝೋಯಾ ಹಸನ್‌ ಮತ್ತು ಜಯತಿ ಘೋಷ್‌, ಸಿಪಿಐನ ಆ್ಯನಿ ರಾಜಾ, ಸಿಪಿಎಂನ ಹನ್ನಾನ್ ಮೋಲ್ಲಾ ಮತ್ತು ಆರ್‌ಟಿಐ ಕಾರ್ಯಕರ್ತ ವೆಂಕಟೇಶ್‌ ನಾಯಕ್‌ ಸೇರಿದಂತೆ ಹಲವರು ಪತ್ರಕ್ಕೆ ಸಹಿ ಹಾಕಿದ್ದಾರೆ.

‘ಪ್ರಶ್ನೋತ್ತರ ವೇಳೆಯನ್ನು ರದ್ದು ಪಡಿಸಿರುವ ಅಧಿಕಾರವನ್ನು ಚಲಾಯಿಸಿರುವುದು ಕೆಲವೇ ಅಸಾಧಾರಣ ಸನ್ನಿವೇಶಗಳಲ್ಲಿ ಮಾತ್ರ. 1962ರ ಚೀನಾ ಆಕ್ರಮಣ, 1975–76ರ ತುರ್ತು ಪರಿಸ್ಥಿತಿ, 1990 ಮತ್ತು 2008ರಲ್ಲಿ ವಿಶ್ವಾಸಮತ ನಿರ್ಣಯಕ್ಕಾಗಿ ಕರೆದಿದ್ದ ವಿಶೇಷ ಅಧಿವೇಶನಗಳಲ್ಲಿ ರದ್ದುಗೊಳಿಸಲಾಗಿತ್ತು’ ಎಂದು ಹೇಳಿದ್ದಾರೆ.

ಪ್ರಸ್ತುತ ಸನ್ನಿವೇಶ ಕ್ಲಿಷ್ಟಕರವಾಗಿದ್ದರೂ ಪ್ರಜಾಪ್ರಭುತ್ವವನ್ನು ಮುನ್ನಡೆಸಲು ಸಹಾಯ ಮಾಡುವ ಕಾರ್ಯವಿಧಾನಗಳಿಗೆಉದ್ದೇಶಪೂರ್ವಕವಾಗಿ ತಡೆಯೊಡ್ಡಲು ಇದು ಕಾರಣವಾಗಬಾರದು.ಕೋವಿಡ್‌ ಪಿಡುಗಿನ ನಡುವೆಯೂ ಮಿಜೋರಾಂ, ಅರುಣಾಚಲ ಪ್ರದೇಶ, ಹರಿಯಾಣ ಮತ್ತು ಛತ್ತೀಸಗಡದಲ್ಲಿ ವಿಧಾನಸಭಾ ಅಧಿವೇಶನಗಳು ನಡೆದಿವೆ. ಆದರೆ, ಇಲ್ಲಿ ಕೋವಿಡ್‌ ಕಾರಣವೊಡ್ಡಿ ಪ್ರಶ್ನೋತ್ತರ ಅವಧಿಯನ್ನು ಮೊಟಕುಗೊಸಲಾಗಿಲ್ಲ. ಅಧಿವೇಶನವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಉದಾಹರಿಸಿದ್ದಾರೆ.

‘ವಿಧಾನ ಮಂಡಲಗಳು ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಎಂದಿನಂತೆಯೇ ಅಧಿವೇಶನಗಳನ್ನು ಯಶಸ್ವಿಯಾಗಿ ನಡೆಸಿರುವಾಗ ಸಂಸತ್ತು ಕೂಡ ಯಾವುದೇ ಕಾರ್ಯವಿಧಾನಗಳನ್ನು ಮೊಟಕುಗೊಳಿಸದೇ ಅಧಿವೇಶನ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

‘ಸರ್ಕಾರದ ಕಾರ್ಯವಿಧಾನವು ಪಾರದರ್ಶಕವಾಗಿರಬೇಕು. ಇದು ಪ್ರಜಾಪ್ರಭುತ್ವದ ಆದರ್ಶಗಳನ್ನು ಉನ್ನತೀಕರಿಸುವಂತಿರಬೇಕು. ಇಡೀ ವಿಶ್ವವೇ ಸಂಕಷ್ಟದಲ್ಲಿರುವಾಗ ಜೀವಗಳನ್ನು ಉಳಿಸಲು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಇಂಥ ಸಂದರ್ಭದಲ್ಲಿ ಸರ್ಕಾರವು ಅಧಿವೇಶನದಲ್ಲಿ ಎದುರಾಗುವ ಪ್ರಶ್ನೆಗಳಿಗೆ ಉತ್ತರವನ್ನು ನೀಡಬೇಕು. ಈ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು’ ಎಂದು ಹೇಳಿದ್ದಾರೆ.

ಶೂನ್ಯ ವೇಳೆಯನ್ನು ತಗ್ಗಿಸಿರುವುದು ಸಮಸ್ಯಾತ್ಮಕ ನಿರ್ಧಾರವಾಗಿದೆ. ಈ ಅವಧಿಯಲ್ಲಿ ಸಂಸದರು ಪ್ರತಿನಿಧಿಸುವ ಕ್ಷೇತ್ರದ ಸಮಸ್ಯೆಗಳ ಕುರಿತು ಸದನದ ಗಮನವನ್ನು ಸೆಳೆಯುತ್ತಿದ್ದರು. ಈ ಅವಧಿಯನ್ನು 30 ನಿಮಿಷಕ್ಕೆ ಮೊಟಕುಗೊಳಿಸಬಾರದು ಎಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT