ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್ ಕಚೇರಿಗೆ ಪೊಲೀಸರ ಭೇಟಿ: ಇದು ಬಿಜೆಪಿಯ 'ಹೇಡಿತನದ ದಾಳಿ' ಎಂದ ಕಾಂಗ್ರೆಸ್

Congress Randeep Surjewala Twitter BJP
Last Updated 25 ಮೇ 2021, 4:15 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಪೊಲೀಸರು ಮೈಕ್ರೋಬ್ಲಾಗಿಂಗ್ ಸೈಟ್ ಕಚೇರಿಗಳ ಮೇಲೆ 'ಹೇಡಿತನದ ದಾಳಿ' ನಡೆಸುವ ಮೂಲಕ ಬಿಜೆಪಿ ನಾಯಕರ 'ಮೋಸದ ಟೂಲ್‌ಕಿಟ್' ಅನ್ನು ಮರೆಮಾಚಲು ವ್ಯರ್ಥ ಪ್ರಯತ್ನಗಳನ್ನು ಬಹಿರಂಗಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ.

'ಕೋವಿಡ್ ಟೂಲ್‌ಕಿಟ್' ಎಂಬ ಆರೋಪದ ಬಗ್ಗೆ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿಶೇಷ ಘಟಕವು ಸೋಮವಾರ ಟ್ವಿಟರ್ ಇಂಡಿಯಾಕ್ಕೆ ನೋಟಿಸ್ ಕಳುಹಿಸಿದ್ದು, 'ಟ್ವಿಟರ್ ಸಂಸ್ಥೆಯು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರ ಟ್ವೀಟ್‌ ತಿರುಚಿದ್ದು ಎಂದು ಯಾವ ಆಧಾರದ ಮೇಲೆ ನಿರ್ಧರಿಸಿದೆ ಎಂಬ ಮಾಹಿತಿಯನ್ನು ಹಂಚಿಕೊಳ್ಳಲು ಕೇಳಲಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಎರಡು ತಂಡಗಳು ಸೋಮವಾರ ಸಂಜೆ ದೆಹಲಿಯ ಲಾಡೋ ಸರಾಯ್ ಮತ್ತು ಗುರುಗ್ರಾಮದಲ್ಲಿರುವ ಮೈಕ್ರೋಬ್ಲಾಗಿಂಗ್ ಸೈಟ್‌ನ ಕಚೇರಿಗೆ ಭೇಟಿ ನೀಡಿದ್ದವು. ದೆಹಲಿ ಪೊಲೀಸ್ ಪಿಆರ್‌ಒ ಚಿನ್ಮಯ್ ಬಿಸ್ವಾಲ್ ಅವರು, ತಂಡಗಳು ವಾಡಿಕೆಯ ಪ್ರಕ್ರಿಯೆಯ ಭಾಗವಾಗಿ ನೋಟಿಸ್ ನೀಡಲು ಟ್ವಿಟರ್ ಕಚೇರಿಗೆ ತೆರಳಿದ್ದರು ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಟ್ವಿಟರ್‌ನಲ್ಲಿ, 'ಬಿಜೆಪಿ ನಾಯಕರ ಮೋಸದ ಟೂಲ್‌ಕಿಟ್‌ ಅನ್ನು ಮರೆಮಾಚಲು ದೆಹಲಿ ಪೊಲೀಸರು ಟ್ವಿಟರ್ ಕಚೇರಿ ಮೇಲೆ ಹೇಡಿತನದ ದಾಳಿ ನಡೆಸುವ ಮೂಲಕ ಬಿಜೆಪಿಯ ವ್ಯರ್ಥ ಪ್ರಯತ್ನಗಳನ್ನು ಬಹಿರಂಗಪಡಿಸಿದೆ' ಎಂದು ಹೇಳಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು 'ಹತ್ಯೆ' ಮಾಡುವ ಇಂತಹ ಪ್ರಯತ್ನಗಳು ಬಿಜೆಪಿಯು ಮಾಡುತ್ತಿರುವ ತಪ್ಪನ್ನು ತೋರಿಸುತ್ತಿವೆ ಎಂದು ಹೇಳಿರುವ ತಮ್ಮ ವಿಡಿಯೊ ಹೇಳಿಕೆಯನ್ನು ಟ್ಯಾಗ್ ಮಾಡಿದ್ದಾರೆ.

ವಿಡಿಯೊ ಹೇಳಿಕೆಯಲ್ಲಿ ಸುರ್ಜೆವಾಲಾ ಅವರು, 'ಧ್ವನಿಯನ್ನು ನಿಗ್ರಹಗೊಳಿಸುವುದು, ಈ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಪ್ರತಿಯೊಂದು ಧ್ವನಿಯನ್ನು ಅಡಗಿಸುವ ಪ್ರಯತ್ನಗಳು ಮತ್ತು ಪ್ರಚಾರಕ್ಕಾಗಿ ಹಾಗೂ ಭಯವನ್ನು ಹುಟ್ಟುಹಾಕಲು ರಾಜ್ಯ ಪ್ರಾಯೋಜಿತ ಮೋಸದ ವಿಧಾನಗಳು ಮೋದಿ ಸರ್ಕಾರದಲ್ಲಿ ನಿರಂತರವಾಗಿ ಮುಂದುವರಿಯುತ್ತಿವೆ' ಎಂದು ಆರೋಪಿಸಿದ್ದಾರೆ.

'ನಕಲಿ ಟೂಲ್‌ಕಿಟ್' ತಯಾರಿಸಲು ಬಿಜೆಪಿಯು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದೆ. ಟೂಲ್‌ಕಿಟ್ ಅನ್ನು ಬಹಿರಂಗಪಡಿಸಿದ ನಂತರ, ಬಿಜೆಪಿ ಮತ್ತು ಮೋದಿ ಸರ್ಕಾರವು ಭಯಭೀತರಾಗಿ ದೆಹಲಿ ಮತ್ತು ಗುರುಗ್ರಾಮದ ಟ್ವಿಟರ್ ಕಚೇರಿಗಳ ಮೇಲೆ 'ದಾಳಿ' ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.

ಬಿಜೆಪಿ ಕೇಂದ್ರ ಕಚೇರಿ ಮತ್ತು ಅಧಿಕಾರದಲ್ಲಿ ಬಿಜೆಪಿಯ ತಪ್ಪಿತಸ್ಥರು ಕುಳಿತಿದ್ದಾರೆ. ಆದರೆ, ದೆಹಲಿ ಮತ್ತು ಗುರುಗ್ರಾಮದ ಟ್ವಿಟರ್ ಕಚೇರಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಮತ್ತು ಅದಕ್ಕೆ ಕಾರಣವೇನು? ಬಿಜೆಪಿ ತನ್ನ ಸುಳ್ಳನ್ನು ಕಂಡು ಹೆದರುತ್ತಿದೆ ಮತ್ತು ಸಿಕ್ಕಿಹಾಕಿಕೊಳ್ಳುತ್ತಿದೆ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಮೋಸಗಾರ ಎಂದು ಬ್ರಾಂಡ್ ಆಗುತ್ತಿದೆ ಎಂದು ಸುರ್ಜೇವಾಲಾ ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಪರಿಸ್ಥಿತಿಯನ್ನು ಸೂಕ್ತವಾಗಿ ನಿರ್ವಹಿಸಿಲ್ಲ ಎಂಬುದಾಗಿ ಅಪಪ್ರಚಾರ ನಡೆಸಲು ‘ಟೂಲ್‌ಕಿಟ್’ ಸೃಷ್ಟಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಇದನ್ನು ನಿರಾಕರಿಸಿರುವ ಕಾಂಗ್ರೆಸ್, ಬಿಜೆಪಿಯೇ ಈ ಟೂಲ್‌ಕಿಟ್‌ ಸೃಷ್ಟಿಸಿದೆ ಎಂದು ಪ್ರತ್ಯಾರೋಪ ಮಾಡಿದೆ. ಈ ವಿಚಾರವಾಗಿ ಕಾಂಗ್ರೆಸ್–ಬಿಜೆಪಿ ವಾಕ್ಸಮರದಲ್ಲಿ ತೊಡಗಿವೆ.

ಭಾರತೀಯ ಜನತಾ ಪಕ್ಷದ ವಕ್ತಾರ ಸಂಬಿತ್ ಪಾತ್ರಾ ಅವರು ಕಳೆದ ವಾರ ಟ್ವಿಟ್ಟರ್ ನಲ್ಲಿ ದಾಖಲೆಯೊಂದರ ಭಾಗಗಳನ್ನು ಹಂಚಿಕೊಂಡಿದ್ದರು. ಅದು ನಕಲಿ ದಾಖಲೆ ಎಂದು ಆರೋಪಿಸಿದ್ದ ಪ್ರತಿಪಕ್ಷ ಕಾಂಗ್ರೆಸ್, ಟ್ವಿಟರ್‌ ಸಂಸ್ಥೆಗೆ ದೂರು ನೀಡಿತ್ತು. ಆ ಬಳಿಕ, ಸಂಬಿತ್ ಪಾತ್ರಾ ಟ್ವಿಟರ್ ಖಾತೆ ಸೇರಿ ಕೆಲ ಖಾತೆಗಳಿಗೆ ‘ತಿರುಚಲಾದ ಮಾಹಿತಿ’ ಎಂಬ ಟ್ಯಾಗ್ ಹಾಕಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT