ಶನಿವಾರ, ಅಕ್ಟೋಬರ್ 16, 2021
21 °C
ಲಖಿಂಪುರ ಭೇಟಿಗೆ ರಾಜಕೀಯ ನಾಯಕರಿಗೆ ಅನುಮತಿ: ತಂಡದಲ್ಲಿ ಐದು ಜನರಿಗೆ ಅವಕಾಶ; ಉತ್ತರ ಪ್ರದೇಶ ಸರ್ಕಾರ ಸೂಚನೆ

ಲಖಿಂಪುರ–ಖೇರಿಯಲ್ಲಿ ನಾಲ್ವರು ರೈತರ ಹತ್ಯೆ: ವಿಪಕ್ಷಗಳಿಗೆ ಪುನಶ್ಚೇತನದ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಲಖಿಂಪುರ–ಖೇರಿಯಲ್ಲಿ ನಾಲ್ವರು ರೈತರ ಹತ್ಯೆ ಪ್ರಕರಣವು ವಿರೋಧ ಪಕ್ಷಗಳಿಗೆ, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್‌ಗೆ ಪುನಶ್ಚೇತನದ ಅವಕಾಶ ನೀಡಿದೆ. ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಹಾಗಾಗಿಯೇ, ವಿರೋಧ ಪಕ್ಷಗಳ ನಾಯಕರು ಲಖಿಂಪುರ–ಖೇರಿಯತ್ತ ಸಾಲುಗಟ್ಟಿ ಹೋಗುತ್ತಿದ್ದಾರೆ. ಹಿಂಸಾಚಾರ ಘಟನೆಯು ಚುನಾವಣೆಯಲ್ಲಿ ಹಿನ್ನಡೆಗೆ ಕಾರಣವಾಗಬಹುದು ಎಂಬ ಆತಂಕದಲ್ಲಿ ಆಡಳಿತಾರೂಢ ಬಿಜೆಪಿ ಇದೆ. ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದು ಎಂಬ ಕಾರ್ಯತಂತ್ರವನ್ನು ಹೆಣೆಯುತ್ತಿದೆ. 

ಲಖಿಂಪುರ–ಖೇರಿಗೆ ವಿರೋಧ ಪಕ್ಷಗಳ ನಾಯಕರ ಭೇಟಿಯನ್ನು ಎರಡು ದಿನಗಳಿಂದ ಸರ್ಕಾರವು ತಡೆದಿದೆ. ಆದರೆ, ಇದು ಕೂಡ ತನ್ನ ವಿರುದ್ಧವೇ ತಿರುಗಬಹುದು ಎಂಬ ಕಾರಣಕ್ಕೆ ತನ್ನ ಕಾರ್ಯತಂತ್ರವನ್ನು ಬುಧವಾರ ಬದಲಿಸಿದೆ. ವಿರೋಧ ಪಕ್ಷಗಳ ನಾಯಕರು ಲಖಿಂಪುರ–ಖೇರಿಗೆ ಭೇಟಿ ನೀಡಲು ಅವಕಾಶ ಕೊಟ್ಟಿದೆ. ಆದರೆ, ಒಮ್ಮೆಗೆ ಕೇವಲ ಐದು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭೇಟಿಗೆ ಅನುಮತಿ ನೀಡುವುದರ ಜೊತೆಗೆ, ಬಂಧನದಲ್ಲಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಿಡುಗಡೆ ಮಾಡಲಾಗಿದೆ. 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಹಿಂಸಾಚಾರ ಪೀಡಿತ ಸ್ಥಳಕ್ಕೆ ಭೇಟಿ ನೀಡಲು ಬುಧವಾರ ಬೆಳಿಗ್ಗೆ ಅನುಮತಿ ನಿರಾಕರಿಸಲಾಗಿತ್ತು. ಅಲ್ಲಿ ಶಾಂತಿ ಕದಡುವ ಸಾಧ್ಯತೆಯಿದ್ದು, ಯಾರಿಗೂ ಅಲ್ಲಿಗೆ ಹೋಗಲು ಅವಕಾಶ ನೀಡುವುದಿಲ್ಲ ಎಂದು ವಕ್ತಾರರು ಹೇಳಿದ್ದರು. ಆದರೆ ಗೃಹಖಾತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಕುಮಾರ್ ಅವಸ್ಥಿ ಅವರು ಅವಕಾಶ ನೀಡಲಾಗಿದೆ ಎಂದು ಬಳಿಕ ಮಾಹಿತಿ ನೀಡಿದರು. 

ಭಾನುವಾರ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳನ್ನು ಭೇಟಿಯಾಗಲು ಹೊರಟಿದ್ದ ಪ್ರಿಯಾಂಕಾ ಅವರನ್ನು ಬಂಧಿಸಿ ಅತಿಥಿಗೃಹದಲ್ಲಿ ಇರಿಸಲಾಗಿತ್ತು. ಅವರನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಯಾರಿಗೂ ತಡೆ ನೀಡುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

‘ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜನರ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಈಗ ಲಖೀಂಪುರಕ್ಕೆ ಭೇಟಿ ನೀಡಲು ಬಯಸುವವರು ಐದು ಜನರ ನಿಯೋಗದೊಂದಿಗೆ ತೆರಳಬಹುದು’ ಎಂದು ಕುಮಾರ್ ಹೇಳಿದ್ದಾರೆ. 

ಸಮಾಜವಾದಿ ಪಕ್ಷ, ಎಎಪಿ ಮತ್ತು ಬಿಎಸ್‌ಪಿ ನಾಯಕರಿಗೂ ಸಹ ಭೇಟಿಗೆ ಸರ್ಕಾರ ಅವಕಾಶ ನೀಡಿರಲಿಲ್ಲ. ಆದರೆ ಮಂಗಳವಾರ ತೃಣಮೂಲ ಕಾಂಗ್ರೆಸ್ ಸದಸ್ಯರು ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿ, ಸಂತ್ರಸ್ತ ಕುಟುಂಬದವರನ್ನು ಭೇಟಿಯಾಗುವಲ್ಲಿ ಯಶಸ್ವಿಯಾಗಿದ್ದರು. 

ಪ್ರಕರಣದ ತನಿಖೆ ಮತ್ತು ಸಂಭಾವ್ಯ ಬಂಧನಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ಥಳದಲ್ಲಿ ಶಾಂತಿ ಕಾಪಾಡಲಾಗಿದ್ದು, ತನಿಖೆ ಮುಂದುವರಿಯುತ್ತದೆ. ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ ಎಂದರು. ಘಟನೆಗೆ ಸಂಬಂಧಿಸಿದ ಯಾವುದೇ ಸಾಕ್ಷ್ಯಾಧಾರವನ್ನು ನೀಡಬಯಸುವ ಜನರಿಗೆ ಸಹಾಯವಾಣಿ ಸಂಖ್ಯೆ ಹಾಗೂ ಇ–ಮೇಲ್ ಐಡಿಯನ್ನು ನೀಡಲಾಗಿದೆ. 

ಅಮಿತ್ ಶಾ ಭೇಟಿ ಮಾಡಿದ ಮಿಶ್ರಾ

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಲಖಿಂಪುರ ಘಟನೆ ಬಳಿಕ ಮೊದಲ ಬಾರಿಗೆ ಬುಧವಾರ ಭೇಟಿ ಮಾಡಿದರು. ಅರ್ಧ ಗಂಟೆಯ ಭೇಟಿಯಲ್ಲಿ ಘಟನೆಯ ಬಗ್ಗೆ ಶಾ ಅವರಿಗೆ ಮಿಶ್ರಾ ವಿವರಣೆ ನೀಡಿದರು. 

ಅಜಯ್ ಮಿಶ್ರಾ ಅವರನ್ನು ವಜಾಗೊಳಿಸುವ ಉದ್ದೇಶ ಇಲ್ಲ ಬಿಜೆಪಿಗೆ ಇಲ್ಲ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಿಶ್ರಾ ಅವರನ್ನು ವಜಾಗೊಳಿಸುವಂತೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಆದರೆ ಪ್ರಕರಣದಲ್ಲಿ ತಮ್ಮ ಪುತ್ರ ಭಾಗಿಯಾಗಿದ್ದಾನೆ ಎಂಬ ಆರೋಪವನ್ನು ಸಚಿವರು ಅಲ್ಲಗಳೆದಿದ್ದಾರೆ. 

ಗುರುವಾರ ನಿಗದಿಯಾಗಿದ್ದ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಬೇಕಿದ್ದ ಮಿಶ್ರಾ ಅವರು ಅದನ್ನು ರದ್ದುಗೊಳಿಸಿದ್ದಾರೆ.

ಅಶಾಂತಿ ಸೃಷ್ಟಿಗೆ ರಾಹುಲ್‌ ಯತ್ನ: ಬಿಜೆಪಿ ಆರೋಪ

ಲಖಿಂಪುರ–ಖೇರಿ ಘಟನೆಯನ್ನು ಇರಿಸಿಕೊಂಡು ಅಶಾಂತಿ ಸೃಷ್ಟಿಸಲು ರಾಹುಲ್‌ ಗಾಂಧಿ ಪ್ರಯತ್ನಿಸುತ್ತಿದ್ದಾರೆ. ದುರಂತವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಬುಧವಾರ ಆರೋಪಿಸಿದೆ. 

ದೇಶದಲ್ಲಿ ನಿರಂಕುಶಾಧಿಪತ್ಯ ಇದೆ ಎಂಬ ರಾಹುಲ್‌ ಆರೋಪಕ್ಕೆ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ತಿರುಗೇಟು ನೀಡಿದ್ದಾರೆ. ‘ಹೊಣೆಗೇಡಿತನ’ ಎಂಬುದೇ ಅವರ ಎರಡನೇ ಹೆಸರಾಗಿಬಿಟ್ಟಿದೆ ಎಂದು ಹೇಳಿದ್ದಾರೆ. 

ಹಿಂಸೆಗೆ ಇಳಿಯುವಂತೆ ಜನರಿಗೆ ಕಾಂಗ್ರೆಸ್‌ ಕುಮ್ಮಕ್ಕು ನೀಡುತ್ತಿದೆ. ಬಿಕ್ಕಟ್ಟಿನ ಮಧ್ಯೆಯೂ ಜನರ ಮತ ಸೆಳೆಯುವ ಕೃತ್ಯ ಎಸಗಬೇಡಿ ಎಂದು ಅವರು ಕಾಂಗ್ರೆಸ್‌ ಪಕ್ಷವನ್ನು ಕೋರಿದ್ದಾರೆ. 

ಮಾಧ್ಯಮಗೋಷ್ಠಿಯಲ್ಲಿ ಹೇಳುವ ವಿಚಾರಗಳಿಗಾಗಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಯನ್ನು ರಾಹುಲ್‌ ಎದುರಿಸಿಲ್ಲ. ಆದರೆ, ಪಕ್ಷದ ಕಾರ್ಯನಿರ್ವಹಣೆ ಬಗ್ಗೆ ವಿಮರ್ಶಾತ್ಮಕ ಹೇಳಿಕೆ ನೀಡಿದ ಮುಖಂಡ ಕಪಿಲ್‌ ಸಿಬಲ್‌ ಅವರ ಮೇಲೆ ಕಾಂಗ್ರೆಸ್‌ ಸದಸ್ಯರು ಟೊಮೆಟೊ ಎಸೆದಿದ್ದಾರೆ ಎಂದು ಪಾತ್ರಾ ಹೇಳಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಇದೆ ಎಂಬ ಕಾರಣಕ್ಕೇ ರಾಹುಲ್‌ ಅವರಿಗೆ ಮಾಧ್ಯಮ ಗೋಷ್ಠಿ ನಡೆಸಲು ಸಾಧ್ಯವಾಗುತ್ತಿದೆ ಎಂದೂ ಹೇಳಿದ್ದಾರೆ. 

ಸಂತ್ರಸ್ತರ ಭೇಟಿಯಾದ ಎಎಪಿ ನಿಯೋಗ

ಎಎಪಿಯ ನಿಯೋಗವೊಂದು ಲಖಿಂಪುರ–ಖೇರಿಗೆ ಬುಧವಾರ ತಲುಪಿ, ಮೃತ ರೈತರ ಕುಟುಂಬ ಸದಸ್ಯರನ್ನು ಭೇಟಿಯಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಮೃತಪಟ್ಟ ಒಬ್ಬ ರೈತನ ಕುಟುಂಬದ ಸದಸ್ಯರ ಜೊತೆ ದೂರವಾಣಿಯಲ್ಲಿ ಮಾತನಾಡಿ, ಸಾಂತ್ವನ ಹೇಳಿದ್ದಾರೆ.

‘ಎಎಪಿ ನಿಯೋಗದಲ್ಲಿ ಸಂಸದ ಸಂಜಯ್‌ ಸಿಂಗ್‌, ಶಾಸಕರಾದ ಹರ್‌ಪಾಲ್‌ ಚೀಮಾ, ರಾಘವ ಛಡ್ಡಾ ಮತ್ತು ಇತರರು ಇದ್ದಾರೆ. ಅವರು ಮೃತ ರೈತರ ನಚ್ತರ್‌ ಸಿಂಗ್‌ ಅವರ ಕುಟುಂಬವನ್ನು ಭೇಟಿಯಾಗಿದ್ದಾರೆ’ ಎಂದು ಎಎಪಿ ಟ್ವೀಟ್‌ ಮಾಡಿದೆ. ಕೇಜ್ರಿವಾಲ್‌ ಅವರು ದೂರವಾಣಿಯಲ್ಲಿ ಮಾತನಾಡುವ ವಿಡಿಯೊವನ್ನು ಕೂಡ ಬಿಡುಗಡೆ ಮಾಡಲಾಗಿದೆ. 

ತಮ್ಮನ್ನು 55 ತಾಸು ಕಸ್ಟಡಿಯಲ್ಲಿ ಇರಿಸಲಾಗಿತ್ತು, ಈಗ ಲಖಿಂಪುರಕ್ಕೆ ಹೋಗಲು ಅನುಮತಿ ಕೊಡಲಾಗಿದೆ ಎಂದು ಸಂಜಯ್‌ ಸಿಂಗ್‌ ಹೇಳಿದ್ದಾರೆ. 

***

ಕೊಲೆಗಾರರನ್ನು ಏಕೆ ಬಂಧಿಸಲಾಗಿಲ್ಲ. ರಾಜ್ಯವು ಅಪರಾಧಿಗಳನ್ನು ಏಕೆ ರಕ್ಷಿಸುತ್ತಿದೆ. ಜೀವಕ್ಕೆ ಬೆಲೆ ಇಲ್ಲವೇ? ಮುಗ್ಧರ ಜೀವ ತೆಗೆದರೂ ಮೌನವೇಕೆ

-ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

***

ಬ್ರಿಟಿಷರು ಮಾಡಿದ ದೌರ್ಜನ್ಯವನ್ನು ಬಿಜೆಪಿ ಸರ್ಕಾರ ಮೀರಿಸಿದೆ. ಗೃಹಸಚಿವರು ರೈತರ ಧ್ವನಿಯನ್ನು ಹತ್ತಿಕ್ಕುವಂತೆ ಬೆದರಿಕೆ ಹಾಕುತ್ತಿದ್ದಾರೆ

ಅಖಿಲೇಶ್ ಯಾದವ್, ಎಸ್‌ಪಿ ಮುಖ್ಯಸ್ಥ

***

ಜನರಲ್ಲಿ ಹಿಂಸೆಯನ್ನು ಪ್ರಚೋದಿಸಲು ಕಾಂಗ್ರೆಸ್ ಎಲ್ಲ ರೀತಿಯ ಯತ್ನ ಮಾಡುತ್ತಿದೆ. ರಾಜಕೀಯ ಲಾಭದ ಉದ್ದೇಶ ಇದರಲ್ಲಿದೆ

-ಸಂಬಿತ್ ಪಾತ್ರಾ, ಬಿಜೆಪಿ ವಕ್ತಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು