ನವದೆಹಲಿ: ಅದಾನಿ ಸಮೂಹ ಸಂಸ್ಥೆ ನಡೆಸಿದೆ ಎನ್ನಲಾದ ವಂಚನೆ ಕುರಿತ ತನಿಖೆಯನ್ನು ಜಂಟಿ ಸಂಸದೀಯ ಸಮಿತಿಗೆ(ಜೆಪಿಸಿ) ವಹಿಸುವಂತೆ ಆಗ್ರಹಿಸಲು ಮುಂದಾದ ವಿರೋಧ ಪಕ್ಷಗಳಿಗೆ ಮೋದಿ ಸರ್ಕಾರ ಅವಕಾಶ ನಿರಾಕರಿಸಿದ್ದೇ ಸಂಸತ್ತಿನಲ್ಲಿ ಬಿಕ್ಕಟ್ಟು ಉಂಟಾಗಲು ಕಾರಣ ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, ‘ಪ್ರಧಾನಿ ಜೊತೆ ತಳುಕು ಹಾಕಿಕೊಂಡಿರುವ ಅದಾನಿ ‘ಮೆಗಾ ಹಗರಣ’ದ ತನಿಖೆಯನ್ನು ಜೆಪಿಸಿಗೆ ಒಳಪಡಿಸುವಂತೆ ವಿರೋಧ ಪಕ್ಷಗಳು ನ್ಯಾಯಯುತವಾಗಿ ಆಗ್ರಹಿಸುವುದನ್ನು ಮೋದಿ ನೇತೃತ್ವದ ಸರ್ಕಾರವು ತಿರಸ್ಕರಿಸುತ್ತಲೇ ಬಂದಿತು. ಇದು ಲೋಕಸಭೆಯಲ್ಲಿ ಪ್ರಕ್ಷುಬ್ಧತೆಗೆ ಉಂಟಾಗಲು ಏಕೈಕ ಕಾರಣ. ಬಾಕಿ ಎಲ್ಲವೂ ಮೋದಿ ಮತ್ತು ಅವರ ಸಹೋದ್ಯೋಗಿಗಳು ವಿಷಯಾಂತರ ಮಾಡಲು ನಡೆಸಿದ ಉದ್ದೇಶಪೂರ್ವಕ ಪ್ರಯತ್ನ’ ಎಂದಿದ್ದಾರೆ.
ಇದಕ್ಕೂ ಮೊದಲು, ಕಾಂಗ್ರೆಸ್, ಡಿಎಂಕೆ, ಜೆಡಿಯು, ಎಎಪಿ ಸೇರಿ 16 ವಿರೋಧ ಪಕ್ಷಗಳು ಸಭೆ ನಡೆಸಿ ಸಂಸತ್ತಿನಲ್ಲಿ ಅದಾನಿ ಪ್ರಕರಣವನ್ನು ಚರ್ಚೆಗೆ ತೆಗೆದುಕೊಳ್ಳುವ ಕುರಿತು ಚರ್ಚಿಸಿದ್ದವು. ಲಂಡನ್ ಪ್ರವಾಸದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದ ಪ್ರಜಾಪ್ರಭುತ್ವ ಕುರಿತು ನೀಡಿದ್ದ ಹೇಳಿಕೆ ವಿರುದ್ಧ ಸರ್ಕಾರ ಮಾಡಿದ ಟೀಕಾಪ್ರಹಾರವೂ ಸಭೆಯಲ್ಲಿ ಚರ್ಚೆಗೊಳಪಟ್ಟಿತು ಎಂದು ಮೂಲಗಳು ತಿಳಿಸಿವೆ.
ಸಭೆಗೆ ಟಿಎಂಸಿ ಗೈರು: ವಿರೋಧ ಪಕ್ಷಗಳು ನಡೆಸಿದ್ದ ಸಭೆಯಲ್ಲಿ ಟಿಎಂಸಿ ಪಾಲ್ಗೊಂಡಿರಲಿಲ್ಲ. ಆದರೆ, ‘ಅದಾನಿ ರಕ್ಷಣೆ ನಿಲ್ಲಿಸಿ’ ಎಂಬ ಬರಹವಿದ್ದ ಫಲಕಗಳನ್ನು ಹಿಡಿದು ಟಿಎಂಸಿ ಸಂಸದರು ಸಂಸತ್ತಿನ ಆವರಣದಲ್ಲಿಯ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.