ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಚರ್ಚೆ| ಕಾಂಗ್ರೆಸ್‌ ರಾಜಕೀಯ ಸಂಸ್ಕೃತಿ ಮುಕ್ತ ಭಾರತ

Last Updated 1 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

‘ಸ್ವಾತಂತ್ರ್ಯಪೂರ್ವ ಕಾಂಗ್ರೆಸ್‌ ಪಕ್ಷವನ್ನು ಸ್ವಾತಂತ್ರ್ಯಾನಂತರ ಸಂಪೂರ್ಣವಾಗಿ ವಿಸರ್ಜಿಸಬೇಕು. ಏಕೆಂದರೆ ಅದೊಂದು ಸ್ವಾತಂತ್ರ್ಯ ಹೋರಾಟಗಾರರ ವೇದಿಕೆ. ಅನೇಕರ ತ್ಯಾಗ, ಬಲಿದಾನಗಳ ಫಲವಾಗಿ ಸ್ವಾತಂತ್ರ್ಯ ಬಂದಿತು. ಹಾಗಾಗಿ ಯಾರೂ ಸಹ ಕಾಂಗ್ರೆಸ್‌ ಪಕ್ಷವನ್ನು ದುರುಪಯೋಗಪಡಿಸಿಕೊಳ್ಳಬಾರದು. ಕಾಂಗ್ರೆಸ್‌ ಪಕ್ಷವನ್ನು ವಿಸರ್ಜನೆ ಮಾಡಿ ನಿಮ್ಮ ಇಚ್ಛೆಯಂತೆ ಪಕ್ಷಗಳನ್ನು ಕಟ್ಟಿಕೊಂಡು ಆಡಳಿತ ನಡೆಸಿ’ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರೇ ಪ್ರತಿಪಾದಿಸಿದ್ದರು.

ಒಂದು ವೇಳೆ ಗಾಂಧೀಜಿ ಹತ್ಯೆಯಾಗದೇ ಇದ್ದಿದ್ದರೆ ಅವರು ಕಾಂಗ್ರೆಸ್‌ ಪಕ್ಷದ ವಿಸರ್ಜನೆಗೆ ಹೋರಾಟ ಮಾಡುತ್ತಿದ್ದರೇನೋ! ಸ್ವಾತಂತ್ರ್ಯಪೂರ್ವ ಕಾಂಗ್ರೆಸ್‌ ಪಕ್ಷದ ಆಶಯಗಳಿಗೆ ಗಾಂಧೀಜಿಯ ವಾರಸುದಾರ ಎನ್ನುವವರು ಧಕ್ಕೆ ತಂದಿದ್ದಾರೆ. ಸೇವೆಯ ಬದಲಿಗೆ ಸ್ವಜನಪಕ್ಷಪಾತವನ್ನು, ಪಾರದರ್ಶಕತೆಯ ಬದಲಿಗೆ ಕೆಂಪು ಪಟ್ಟಿಯನ್ನು, ರಾಷ್ಟ್ರೀಯ ಹಿತಾಸಕ್ತಿ ಬದಲಿಗೆ ಮತ ಬ್ಯಾಂಕ್‌ ಹಿತಾಸಕ್ತಿಯನ್ನು ರೂಪಿಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯ ಕತ್ತು ಹಿಸುಕಿದ್ದಾರೆ.ಹೊರಗಡೆ ಪ್ರಜಾಪ್ರಭುತ್ವದ ಬಗ್ಗೆ ಭಾಷಣ ಮಾಡುತ್ತಾರೆ. ಒಳಗೆ ತಮ್ಮ ವಂಶಪಾರಂಪರ್ಯದ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ ಎಂದರೆ ಜನರ ಮೂಸೆಯಿಂದ ನಾಯಕ ತಯಾರಾಗಿ ಜನರ ಮಧ್ಯೆಯಿಂದ ಆಯ್ಕೆಯಾಗಿ ಬರಬೇಕು. ಆದರೆ ಕಾಂಗ್ರೆಸ್‌, ರಾಜಪ್ರಭುತ್ವದ ಮಾದರಿಯನ್ನು ಪಕ್ಷದ ಒಳಗೆ ಅಳವಡಿಸಿಕೊಂಡು ಹಣ, ಅಧಿಕಾರದ ಬಲದಿಂದ ನಿಯಂತ್ರಿಸುವುದು ಎಷ್ಟರ ಮಟ್ಟಿಗೆ ಸರಿ? ಇದು ಪ್ರಜಾಪ್ರಭುತ್ವಕ್ಕೆ ಮಾರಕವಲ್ಲವೇ?

ದೇಶ ಬ್ರಿಟಿಷರಿಂದ ಬಂಧಮುಕ್ತವಾದ ಮೇಲೆ ಕಾಂಗ್ರೆಸ್‌ ಪಕ್ಷದಲ್ಲಿ ಸಂಸ್ಕೃತಿಯ ಅಧಃಪತನ ಆರಂಭವಾಯಿತು.ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋತಿದೆ. ‘ಕಾಂಗ್ರೆಸ್‌ ಮುಕ್ತ ಭಾರತ’ ಅಂದರೆ ಕಾಂಗ್ರೆಸ್ ಐತಿಹಾಸಿಕ ಸಿದ್ದಾಂತಗಳನ್ನು ಸರ್ವನಾಶ ಮಾಡವುದು ಅಲ್ಲ. ಕಾಂಗ್ರೆಸ್‌ ಮುಕ್ತ ಎಂದರೆ ಸ್ವಜನಪಕ್ಷಪಾತಮುಕ್ತ. ಭ್ರಷ್ಟಾಚಾರ ಮುಕ್ತ ಪಕ್ಷವಾಗಬೇಕು. ಜಾತಿಯತೆ ಮುಕ್ತ ಪಕ್ಷವಾಗಬೇಕು. ವಂಶಪಾರಂಪರ್ಯಮುಕ್ತ ಪಕ್ಷವಾಗಬೇಕು.ಒಂದು ಕಾಲದಲ್ಲಿ ಸಮೃದ್ಧವಾಗಿ ನಳನಳಿಸುತ್ತಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಬರಸಿಡಿಲು ಬಡಿಯಲು ಕಾರಣ ಏನು ಎಂಬುದಕ್ಕೆ ಆತ್ಮಾವಲೋಕನ ಅಗತ್ಯವಿದೆ.ಅಧಿಕಾರ ಇದ್ದಾಗ ಸಿದ್ಧಾಂತಗಳನ್ನು ಗಾಳಿಗೆ ತೂರಿ, ಆನೆ ನಡೆದಿದ್ದೇ ದಾರಿ ಎಂದರೆ ಹೇಗೆ? ಆನೆಗೂ ವಯಸ್ಸಾಗುತ್ತದೆ. ಆದರೆ ಭುವಿಯೊಳಗಿನ ಸತ್ವಕ್ಕೆ ವಯಸ್ಸಾಗುವುದಿಲ್ಲ. ಆನೆ ನಡೆದ ದಾರಿಯಲ್ಲಿ ಗರಿಕೆ ಹುಟ್ಟಿ ಮತ್ತೆ ದಾರಿ ಮಾಯವಾಗುವುದು ಸಹಜ ಪ್ರಕ್ರಿಯೆ.

ಕಾಂಗ್ರೆಸ್‌ ಆಗಲಿ, ಬೇರೆ ಪಕ್ಷವಾಗಲಿ ರಾಜಕೀಯ ಪರಿಧಿಯಿಂದ ಶಾಶ್ವತವಾಗಿ ಮುಕ್ತವಾಗಬೇಕು ಎನ್ನುವ ಸೀಮಿತ ಉದ್ದೇಶ ನಮ್ಮದಲ್ಲ. ವಿಪಕ್ಷಗಳಿದ್ದರಷ್ಟೇ ಪ್ರಜಾಪ್ರಭುತ್ವಕ್ಕೆ ಮೆರುಗು. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದಂತೆ ಒಂದೊಂದು ರಾಜಕೀಯ ಪಕ್ಷಕ್ಕೆ ಒಂದೊಂದು ಸಂಸ್ಕಾರ, ಸಂಸ್ಕೃತಿ ಇರುತ್ತದೆ. ಆದರೆ ಕಾಂಗ್ರೆಸ್‌ ಸಂಸ್ಕೃತಿಯಲ್ಲಿ ಆಂತರಿಕ ಪ್ರಜಾಪ್ರಭುತ್ವದ ಸೌಂದರ್ಯವೇ ಇಲ್ಲ.

ದೇಶದ ಮೊದಲ ಪ್ರಧಾನಿ ನೆಹರೂ, ನಂತರ ಮಗಳು ಇಂದಿರಾಗಾಂಧಿ, ನಂತರ ಅವರ ಮಗ ರಾಜೀವ್‌ ಗಾಂಧಿ ಅಧಿಕಾರ ಹಿಡಿದರು. ನೆಹರೂ ಮತ್ತು ಇಂದಿರಾ ಮಧ್ಯೆ ಲಾಲ್‌ ಬಹಾದ್ದೂರ್‌ ಶಾಸ್ತ್ರಿಯವರು ಪ್ರಧಾನಿ ಆದರೂ, ವಿಧಿಯಾಟಕ್ಕೆ ಬಲಿಯಾದರು.ವಂಶಪಾರಂಪರ್ಯ ಆಡಳಿತಕ್ಕೆ ಜೋತು ಬಿದ್ದು ಅಧಿಕಾರದ ದಾಹ ತೀರಿಸಿಕೊಳ್ಳಲು ರಾಜಕಾರಣ ಮಾಡುವವರೆಲ್ಲ ಪ್ರಜಾಪ್ರಭುತ್ವದ ಪ್ರತಿಪಾದಕರೇ? ಕಾಂಗ್ರೆಸ್‌ ನಾಯಕರಿಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.

ಕಾಂಗ್ರೆಸ್‌ನ ಚುಕ್ಕಾಣಿ ಹಿಡಿಯುವಲ್ಲಿ ಸೋನಿಯಾ ಗಾಂಧಿ ಅವರ ನಂತರ ಅವರ ಪುತ್ರ ರಾಹುಲ್‌ ಗಾಂಧಿ. ಭವಿಷ್ಯದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಪಟ್ಟಕ್ಕೇರಬಹುದೇನೋ? ಅವರಿಗೆ ಕೌಟುಂಬಿಕ ವಾರಸುದಾರಿಕೆಯಿಂದ ಹೊರಬರುವ ಚಿಂತನೆಯೇ ಇಲ್ಲ. ಪಕ್ಷ ಅವರ ಕಪಿ ಮುಷ್ಠಿಯಲ್ಲಿರಬೇಕು ಎಂಬ ಉತ್ಕಟ ಬಯಕೆ.

‘ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ’ ಎಂಬ ಗಾದೆ ಮಾತಿನಂತೆ ಉಳಿದ ಪ್ರಾದೇಶಿಕ ಪಕ್ಷಗಳು ಸಹ ಅಧಿಕಾರದ ಲಾಲಸೆಗೆ ಜೋತು ಬಿದ್ದಿವೆ. ಉದಾಹರಣೆಗೆ ನ್ಯಾಷನಲ್‌ ಕಾನ್ಫರೆನ್ಸ್‌, ಮಹಾರಾಷ್ಟ್ರದಲ್ಲಿ ಎನ್‌ಸಿಪಿ, ಬಿಹಾರದಲ್ಲಿ ಆರ್‌ಜೆಡಿ, ತಮಿಳುನಾಡಿನಲ್ಲಿ ಡಿಎಂಕೆ, ಕರ್ನಾಟಕದಲ್ಲಿ ಜೆಡಿಎಸ್, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಗಳಲ್ಲಿ ಕಾಂಗ್ರೆಸ್‌ ಸಂಸ್ಕೃತಿಯೇ ಅವ್ಯಾಹತವಾಗಿ ಬೆಳೆದುಬಂದಿದೆ.ಜಾತ್ಯತೀತ ಹೆಸರಿನಲ್ಲಿ ಜಾತಿ ರಾಜಕರಣ, ಓಲೈಕೆ ರಾಜಕಾರಣ ಮಾಡಲಾಗುತ್ತಿದೆ. ಜಾತ್ಯತೀತತೆಗೆ ನಿಜವಾದ ಪರಿಭಾಷೆ ಸರ್ವಧರ್ಮ ಸಮಭಾವ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ನಿಜವಾದ ಪರಿಭಾಷೆ ಅದಲ್ಲ.

ಅಲ್ಪಸಂಖ್ಯಾತರ ಓಲೈಕೆ ಮಾಡಿದರೆ ಆ ಪಕ್ಷ ಜಾತ್ಯತೀತ. ಬಹುಸಂಖ್ಯಾತರನ್ನು ದೂಷಿಸಿದರೆ ಆ ನಾಯಕ ಅಥವಾ ಪಕ್ಷ ಜಾತ್ಯತೀತ. ಜಾತಿ ರಾಜಕಾರಣ ಮಾಡಿದರೆ ಅ ಪಕ್ಷ ಜಾತ್ಯತೀತ.ಮುಸ್ಲಿಂ ಅಥವಾ ಕ್ರಿಶ್ಚಿಯನ್‌ ಓಲೈಕೆ ರಾಜಕಾರಣ ಮಾಡಿದರೆ ಜಾತ್ಯತೀತ ನಾಯಕ. ಆದರೆ ಹಿಂದೂ ಓಲೈಕೆ ಮಾಡಿದರೆ ಕೋಮುವಾದಿ. ಹಿಂದುತ್ವದ ರಾಜಕಾರಣ ಮಾಡಿದರೆ ಆ ಪಕ್ಷ ಅಥವಾ ನಾಯಕ ಕೋಮುವಾದಿ ಎಂಬ ಪಟ್ಟ ಕಟ್ಟುವ ಕೀಳು ಮನಸ್ಥಿತಿಯ ಸೋ ಕಾಲ್ಡ್‌ ನಾಯಕರಲ್ಲಿನ ಬೌದ್ಧಿಕ ದಿವಾಳಿತನಕ್ಕೆ ಅವರ ಈ ನಡೆಯೇ ಸಾಕ್ಷಿ.ಆ ರೀತಿ ಸನ್ನಿವೇಶ ಸೃಷ್ಟಿಸಿದ್ದೇ ಕಾಂಗ್ರೆಸ್‌ ಪಕ್ಷ.

ನಿಜವಾದ ಜಾತ್ಯತೀತತೆ ಅಂದರೆ ‘ಸಬ್‌ಕಾ ಸಾತ್, ಸಬ್‌ಕಾ ವಿಕಾಸ್, ಸಬ್‌ಕಾ ಪ್ರಯಾಸ್‌ ಸಬ್‌ಕಾ ನ್ಯಾಯ್’. ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಯೋಜನೆಗಳಲ್ಲಿ ಜಾತಿಯ ಸೋಂಕಿಲ್ಲ. ಆದರೆ ಕಾಂಗ್ರೆಸ್‌ ಯೋಜನೆಗಳಲ್ಲಿ (ಶಾದಿಭಾಗ್ಯ ಮತ್ತಿತರ ಯೋಜನೆಗಳು) ಜಾತಿಯ ಸೋಂಕು ಕೋವಿಡ್‌ ಸೋಂಕಿನಂತೆ ವ್ಯಾಪಿಸಿತ್ತು. ಸೈನ್ಯದಲ್ಲಿ ನಿಷ್ಠೆಯಿಂದ ದೇಶ ರಕ್ಷಿಸುವ ಸೈನಿಕರಲ್ಲೂ ಜಾತಿ ಹುಡುಕುವ ಕೆಲಸ ಮಾಡಿದ್ದು ಯಾರು?

ಇನ್ನು ಭ್ರಷಾಚಾರದ ವಿಷಯಕ್ಕೆ ಬಂದರಂತೂ ನೆಹರೂ ಕಾಲದಲ್ಲಿ ನಡೆದ ದೊಡ್ಡ ಭ್ರಷ್ಟಾಚಾರದ ಹಗರಣಗಳ ಪೈಕಿ ರಾಮಕಿಶನ್ ದಾಲ್ಮಿಯಾ ಎಂಬ ಉದ್ಯಮಿ ಆ ಕಾಲಕ್ಕೆ ನಡೆಸಿದ್ದ ಷೇರು ಪೇಟೆಯ ಅಕ್ರಮವನ್ನು ಫಿರೋಜ್ ಬಯಲಿಗೆಳೆದಿದ್ದರು. ತುಳಸೀ ದಾಸ್ ಮತ್ತು ಮನಮೋಹನ ದಾಸ್ ಮುಂಧ್ರಾ ಸಹೋದರರು ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮಕ್ಕೆ ಅಂದಿನ ಕಾಲದಲ್ಲಿ ಮಾಡಿದ 22 ಲಕ್ಷ ರೂಪಾಯಿಗಳ ವಂಚನೆಯ ಭಾರೀ ದೊಡ್ಡ ಹಗರಣವನ್ನು ಫಿರೋಜ್ ಗಾಂಧಿ ಸಂಸತ್ತಿನ ಅಂಗಳದಲ್ಲೇ ಬಯಲಿಗೆಳೆದಿದ್ದರು! ಇದರಿಂದ ನೆಹರೂ ಸರ್ಕಾರ ಇಕ್ಕಟ್ಟಿಗೆ ಸಿಲುಕಿತು. ಇಂದಿರಾ ಗಾಂಧಿಯ ಮಗ ರಾಜೀವ್‌ ಗಾಂಧಿ ಅವರು ಬೊಫೋರ್ಸ್ ಗನ್ ಖರೀದಿಯಲ್ಲಿ ಬಹುಕೋಟಿ ಹಗರಣ ನಡೆದು ಅಧಿಕಾರ ಕಳೆದುಕೊಂಡರು.

ಇನ್ನು ಸೋನಿಯಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಯುಪಿಎ ಸರ್ಕಾರದ ರಿಮೋಟ್ ಕಂಟ್ರೋಲ್ ಆಗಿ ಮಾಡಿದ ಭ್ರಷ್ಟಾಚಾರಗಳ ಸರಮಾಲೆಯ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಆದರೆ ನ್ಯಾಷನಲ್ ಹೆರಾಲ್ಡ್‌ನ ಐದು ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳ ಅಕ್ರಮ ವರ್ಗಾವಣೆ, ಆ ಆಸ್ತಿಯ ಮೂಲಕ ಕೋಟಿಗಟ್ಟಲೇ ರೂಪಾಯಿ ಆದಾಯವನ್ನು ಅಕ್ರಮವಾಗಿ ಪಡೆದದ್ದರಲ್ಲಿ ಸೋನಿಯಾ ಮತ್ತು ರಾಹುಲ್ ಹೆಸರು ನೇರವಾಗಿಯೇ ಬೆಸೆದುಕೊಂಡಿದೆ. ಅಷ್ಟೇ ಅಲ್ಲ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಸುದ್ದಿ ಯಾರಿಗೆ ತಾನೆ ಗೊತ್ತಿಲ್ಲ? 2004 ರಿಂದ 2014ರವರೆಗೆ ಕಾಂಗ್ರೆಸ್‌ ಅಧಿಕಾರದ ಅವಧಿಯಲ್ಲಿ ಸರ್ಕಾರದ ವಿರುದ್ಧಕೇಳಿಬಂದ ಭ್ರಷ್ಟಾಚಾರ ಅಪರಿಮಿತ. ಅದರಲ್ಲಿ 2ಜಿ ತರಂಗಾಂತರ ಹಂಚಿಕೆಯಲ್ಲಿ ₹1.76 ಲಕ್ಷ ಕೋಟಿ ಭ್ರಷ್ಟಾಚಾರ ದೇಶದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ರಾಜೀವ್‌ ಗಾಂಧಿ ಪ್ರಧಾನಿ ಆಗಿದ್ದಾಗ 1986ರಲ್ಲಿ ಹೇಳಿದ ಮಾತು ಈಗಲೂ ಆಗಾಗ ಬಳಕೆಯಾಗುತ್ತಲೇ ಇರುತ್ತದೆ. ಒಂದು ರೂಪಾಯ ಯೋಜನೆ ಕಟ್ಟಕಡೆಯ ಮನುಷ್ಯನಿಗೆ ತಲುಪುವಷ್ಟರಲ್ಲಿ ಶೇ 15ಕ್ಕೆ ಸೀಮಿತವಾಗುತ್ತದೆ ಎಂದು ಹೇಳಿದ್ದರು. ಆಗ ದೇಶದಲ್ಲಿ ಅಧಿಕಾರದಲ್ಲಿ ಇದ್ದವರು ಯಾರು? ‘ಲೈಸೆನ್ಸ್‌ ರಾಜ್‌’ ವ್ಯವಸ್ಥೆ ಜಾರಿಗೆ ತಂದು ಭ್ರಷ್ಟಾಚಾರವನ್ನು ಹಾಸಿ ಹೊದ್ದು ಮಲಗಿದ್ದವರು ಕಾಂಗ್ರೆಸ್‌ ನಾಯಕರಲ್ಲದೆ ಮತ್ತ್ಯಾರು?

ಕಾಂಗ್ರೆಸ್‌ ಪಕ್ಷದಲ್ಲಿ ರಾಷ್ಟ್ರಹಿತಕ್ಕಿಂತ ವ್ಯಕ್ತಿಗತ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ. ಕಾಂಗ್ರೆಸ್‌ ಮುಕ್ತ ಎಂದು ಹೇಳಿದರೆ ‘ರಾಷ್ಟ್ರ ಸರ್ವಪರಿ’ ಎಂದೇ ನಿಜವಾದ ಅರ್ಥ. ರಾಷ್ಟ್ರ ಮೊದಲು ನಂತರ ಪಕ್ಷ, ಆನಂತರ ಅಧಿಕಾರ ಎಂಬುದು ಬಿಜೆಪಿ ಸಿದ್ದಾಂತ ಮತ್ತು ಸಂಸ್ಕೃತಿ. ಪ್ರಜಾಪ್ರಭುತ್ವದಲ್ಲಿ ‘ಕಾಂಗ್ರೆಸ್‌ ಮುಕ್ತ’ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅತಿಯಾದ ಜಾತಿವಾದ ತೊಲಗಬೇಕು. ಅಂತಿಮವಾಗಿ ಕಾಂಗ್ರೆಸ್‌ ಮುಕ್ತವೆಂದರೆ ಸ್ವಾತಂತ್ರ್ಯ ನಂತರ ಕಾಂಗ್ರೆಸ್‌ ಪಕ್ಷಹುಟ್ಟುಹಾಕಿದ ರಾಜಕೀಯ ಸಂಸ್ಕೃತಿ ಮುಕ್ತ ಭಾರತವಾಗಬೇಕು.

ಲೇಖಕರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, ಚಿಕ್ಕಮಗಳೂರು ಶಾಸಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT