ಸೋಮವಾರ, ಮೇ 23, 2022
30 °C
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕಿಡಿ

ಲಖೀಂಪುರ–ಖೇರಿ ಪ್ರಕರಣ; ಸಚಿವ ಮಿಶ್ರಾ ವಜಾಕ್ಕೆ ಒತ್ತಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲಖೀಂಪುರ–ಖೇರಿ ಪ್ರಕರಣವು ಪೂರ್ವನಿಯೋಜಿತ ಸಂಚು ಎಂದು ಎಸ್‌ಐಟಿ ಹೇಳಿದ್ದು, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಪ್ರಕರಣದ ಆರೋಪಿ ಆಶಿಶ್ ಮಿಶ್ರಾ ಅವರ ತಂದೆ, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ತಕ್ಷಣ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿದೆ. 

ಲಖೀಂಪುರ ಖೇರಿ ಪ್ರಕರಣದ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕಾದರೆ, ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಪತ್ರಕರ್ತರ ಜೊತೆ ಮಾತನಾಡಿದ ಅವರು, ಸಚಿವರು ರಾಜೀನಾಮೆ ನೀಡಲೇಬೇಕು ಎಂದು ಹೇಳಿದ್ದಾರೆ. 

ಸಂಸತ್ತಿನಲ್ಲಿ ಈ ವಿಚಾರವನ್ನು ಚರ್ಚೆಗೆ ಎತ್ತಿಕೊಳ್ಳಲು ಮುಂದಾದರೆ, ಸರ್ಕಾರ ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ರಾಹುಲ್ ಆರೋಪಿಸಿದರು. ಎಸ್‌ಐಟಿ ಬಹಿರಂಗಪಡಿಸಿರುವ ವಿಚಾರಗಳನ್ನು ಸದನದಲ್ಲಿ ಚರ್ಚಿಸಬೇಕು ಎಂದು ಆಗ್ರಹಿಸಿ ರಾಹುಲ್ ಗಾಂಧಿ ಅವರು ಲೋಕಸಭೆ ಕಾರ್ಯದರ್ಶಿಗೆ ನೋಟಿಸ್ ನೀಡಿದ್ದರು.

ಲೋಕಸಭೆ ಕಲಾಪ ಮುಂದೂಡಿಕೆ: ಲಖೀಂಪುರ–ಖೇರಿ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದವು. ಗದ್ದಲ ತೀವ್ರಗೊಂಡಿದ್ದರಿಂದ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. 

ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆ ಸ್ಪೀಕರ್ ಪೀಠದೆದುರು ಸೇರಿದ ಸದಸ್ಯರು, ಭಿತ್ತಿಪತ್ರ ಹಿಡಿದು ಘೋಷಣೆಗಳನ್ನು ಕೂಗಿದರು. ತಮ್ಮ ತಮ್ಮ ಆಸನಗಳಿಗೆ ಮರಳುವಂತೆ ಸ್ಪೀಕರ್ ಸ್ಥಾನದಲ್ಲಿದ್ದ ರಾಜೇಂದ್ರ ಅಗರ್‌ವಾಲ್ ಅವರು ಸದಸ್ಯರಿಗೆ ಸೂಚಿಸಿದರು. ಪ್ರತಿಪಕ್ಷಗಳ ಸದಸ್ಯರು ಸ್ಪೀಕರ್ ಮಾತನ್ನು ಪರಿಗಣಿಸದೆ ಪ್ರತಿಭಟನೆ ಮುಂದುವರಿಸಿದ್ದರಿಂದ ಕಲಾಪವನ್ನು ಮುಂದೂಡಲಾಯಿತು.

ಕಾಂಗ್ರೆಸ್, ಎಸ್‌ಪಿ ಪ್ರತಿಭಟನೆ (ಲಖನೌ ವರದಿ): ಮಿಶ್ರಾ ವಜಾಕ್ಕೆ ಆಗ್ರಹಿಸಿ ಉತ್ತರ ಪ್ರದೇಶ ವಿಧಾನಸಭೆಯ ಹೊರಗಡೆ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ಬುಧವಾರ ಪ್ರತಿಭಟನೆ ನಡೆಸಿದವು. ಮಿಶ್ರಾ ಅವರನ್ನು ತಕ್ಷಣ ಕೈಬಿಡುವಂತೆ ಎಸ್‌ಪಿ ಸದಸ್ಯ ರಾಜ್‌ಪಾಲ್ ಕಶ್ಯಪ್ ಆಗ್ರಹಿಸಿದರು. 

ಇದೇ ಬೇಡಿಕೆ ಇಟ್ಟುಕೊಂಡು ಕಾಂಗ್ರೆಸ್ ಸದಸ್ಯರು ವಿಧಾನಸಭೆ ಸಂಕೀರ್ಣದವರೆಗೆ ಮೆರವಣಿಗೆ ನಡೆಸಿದರು. ‘ಮಿಶ್ರಾ ಅವರನ್ನು ವಜಾಗೊಳಿಸದೇ ಇರಲು ಇರುವ ಕಾರಣಗಳು ಏನು? ಸರ್ಕಾರವು ಏಕೆ ಅವರನ್ನು ರಕ್ಷಿಸುತ್ತಿದೆ’ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಪ್ರಶ್ನಿಸಿದ್ದಾರೆ. 

‘ಪ್ರಧಾನಿಯವರು ಕಾರ್ಯಕ್ರಮ ನಿರ್ವಹಣೆಯಲ್ಲಿ ನಿರತರಾಗಿದ್ದಾರೆ. ರೈತರಿಗೆ ನ್ಯಾಯ ಸಿಗುವುದು ಯಾವಾಗ’ ಎಂದು ಅವರು ಕೇಳಿದ್ದಾರೆ.

***

ಲಖೀಂಪುರ ರೈತರ ಹತ್ಯೆ ಘಟನೆಯಿಂದ ಬಿಜೆಪಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಚಿವರ ಪುತ್ರ ಉದ್ದೇಶಪೂರ್ವಕವಾಗಿ ಈ ಸಂಚು ಮಾಡಿದ್ದಾರೆ.
-ಅಖಿಲೇಶ್ ಯಾದವ್, ಎಸ್‌ಪಿ ಮುಖ್ಯಸ್ಥ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು