ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದ ಅಧ್ಯಕ್ಷರ ಶೀಘ್ರ ನೇಮಕಕ್ಕೆ ಕಾಂಗ್ರೆಸ್‌ ಮುಖಂಡ ಕೆ.ಎಚ್. ಮುನಿಯಪ್ಪ ಮನವಿ

ಸೋನಿಯಾ ಗಾಂಧಿ ಭೇಟಿ
Last Updated 12 ಅಕ್ಟೋಬರ್ 2021, 21:35 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ನ ಹಿರಿಯ ಮುಖಂಡ ಕೆ.ಎಚ್. ಮುನಿಯಪ್ಪ ಅವರು ಮಂಗಳವಾರ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದ ಕುರಿತು ಚರ್ಚೆ ನಡೆಸಿದರು.

ಪಕ್ಷದ ರಾಜ್ಯ ಹಾಗೂ ಜಿಲ್ಲಾ ಘಟಕಗಳ ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಲ್ಲಿಸಿರುವ ಪಟ್ಟಿಗಳ ಕುರಿತು ಶೀಘ್ರವೇ ತೀರ್ಮಾನ ಕೈಗೊಳ್ಳುವಂತೆ ಮುನಿಯಪ್ಪ ಅವರು ಈ ಸಂದರ್ಭ ಮನವಿ ಮಾಡಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ನ ಪುನಶ್ಚೇತನ ಪ್ರಕ್ರಿಯೆಗೆ ಕೈಹಾಕಿರುವ ಸೋನಿಯಾ ಅವರು ವಿವಿಧ ರಾಜ್ಯಗಳ ಪ್ರಮುಖ ಮುಖಂಡರೊಂದಿಗೆ ಸಮಾಲೋಚನೆ ನಡೆಸುತ್ತಿರುವ ಭಾಗವಾಗಿ ಮುನಿಯಪ್ಪ ಅವರಿಗೆ ಆಹ್ವಾನ ನೀಡಲಾಗಿತ್ತು. ಪಕ್ಷ ಬಲಪಡಿಸುವ ಉದ್ದೇಶದೊಂದಿಗೆ ರಾಜ್ಯದ ಕೆಲವು ಪ್ರಮುಖ ನಾಯಕರಿಗೆ ರಾಷ್ಟ್ರೀಯ ಘಟಕದಲ್ಲಿ ಸ್ಥಾನಮಾನ ನೀಡುವ ಕುರಿತೂ ಅಭಿಪ್ರಾಯ ಸಂಗ್ರಹಿಸಲಾಗಿದೆ.

ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ನೇಮಕ ಸಂದರ್ಭ ದಲಿತ ಎಡಗೈ ಸಮುದಾಯದ ಮುಖಂಡರಿಗೆ ಆದ್ಯತೆ ನೀಡುವಂತೆಯೂ ಈ ಸಂದರ್ಭ ಆಹ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಸೋನಿಯಾ ಗಾಂಧಿ ಅವರು ಕಳೆದ ವಾರ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿದ್ದರಲ್ಲದೆ, ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಮಾಹಿತಿ ಪಡೆದಿದ್ದರು.

ಅಧ್ಯಕ್ಷರ ನೇಮಕಕ್ಕೆ ಮನವಿ:‘ಕೊರೊನಾ ಕಾರಣದಿಂದಾಗಿ ಒಂದೂವರೆ ವರ್ಷದಿಂದ ನಡೆಯದೇ ಇದ್ದ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯು ಅಕ್ಟೋಬರ್‌ 16ರಂದು ನಡೆಯಲಿದೆ. ಸಭೆಯ ಕಾರ್ಯಸೂಚಿ ಏನು ಎಂಬುದು ಗೊತ್ತಾಗಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ನೇಮಕ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸೋನಿಯಾ ಅವರಿಗೆ ಮನವಿ ಸಲ್ಲಿಸಿದ್ದೇನೆ’ ಎಂದು ಭೇಟಿಯ ನಂತರ ಮುನಿಯಪ್ಪ ಅವರು ಸುದ್ದಿಗಾರರಿಗೆ ತಿಳಿಸಿದರು.

ಮುಂದಿನ ವರ್ಷದ ಆರಂಭಕ್ಕೆ ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭೆಗಳಗೆ ನಡೆಯುವ ಚುನಾವಣೆ ಕುರಿತು ಹಾಗೂ ಪಂಜಾಬ್‌, ಕರ್ನಾಟಕ ಮತ್ತಿತರ ರಾಜ್ಯಗಳಲ್ಲೂ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲೂ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

‘ಪಂಚ ರಾಜ್ಯಗಳ ಚುನಾವಣೆಗೆ ಮೊದಲೇ ರಾಹುಲ್ ಗಾಂಧಿ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವಂತೆಯೂ ವೈಯಕ್ತಿಕವಾಗಿ ಕೋರಿದ್ದೇನೆ. ಜೊತೆಗೆ ಇತರ ಪದಾಧಿಕಾರಿಗಳ ನೇಮಕ ಪ್ರಕ್ರಿಯೆಯನ್ನೂ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT