ಗುರುವಾರ , ಮೇ 19, 2022
25 °C

ರಾಜಸ್ಥಾನ ಸಂಪುಟ ಪುನರ್‌ರಚನೆ ನಡುವೆ ಸೋನಿಯಾ ಗಾಂಧಿಯನ್ನು ಭೇಟಿಯಾದ ಪೈಲಟ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಜಸ್ಥಾನದಲ್ಲಿ ಪಕ್ಷದ ಸಂಘಟನೆ ಹಾಗೂ ಸಚಿವ ಸಂಪುಟ ಪುನರ್‌ರಚನೆಗೆ ಸಂಬಂಧಿಸಿದ ಬೆಳವಣಿಗೆಗಳು ನಡೆಯುತ್ತಿರುವಾಗಲೇ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಅವರು ಒಂದು ದಿನದ ಹಿಂದಷ್ಟೇ ಸೋನಿಯಾರನ್ನು ರಾಷ್ಟ್ರ ರಾಜಧಾನಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಗೆಹಲೋತ್ ಮತ್ತು ಪೈಲಟ್ ರಾಜ್ಯದ ರಾಜಕೀಯ ಸ್ಥಿತಿಗತಿ ಮತ್ತು ಸಂಪುಟ ಪುನರ್‌ರಚನೆ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಸೋನಿಯಾ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಪೈಲಟ್, ‘ಕಾಂಗ್ರೆಸ್ ಪಕ್ಷವು ನಾನು ಏನನ್ನು ಮಾಡಬೇಕೆಂದು ಬಯಸುತ್ತದೋ ಅದನ್ನು ಸಂತೋಷದಿಂದ ಮಾಡುತ್ತೇನೆ. ಕಳೆದ 20 ವರ್ಷಗಳಲ್ಲಿ ನನಗೆ ಯಾವೆಲ್ಲಾ ಕೆಲಸಗಳನ್ನು ನಿಯೋಜಿಸಲಾಗಿತ್ತೋ ಅವನ್ನು ಶ್ರದ್ಧೆಯಿಂದ ನಿರ್ವಹಿಸಿದ್ದೇನೆ. ಈಗಲೂ ಪಕ್ಷ ಯಾವುದೇ ನಿರ್ಧಾರ ಕೈಗೊಂಡರೂ, ನನಗೆ ಯಾವುದೇ ಪಾತ್ರ ನೀಡಿದರೂ ಖುಷಿಯಿಂದ ಮಾಡುತ್ತೇನೆ‘ ಎಂದಿದ್ದಾರೆ.

ಇದನ್ನೂ ಓದಿ: 

ಮುಂದುವರಿದು, ‘ಸೋನಿಯಾ ಗಾಂಧಿ ಅವರು ನಮ್ಮೆಲ್ಲರಿಂದ ಸಲಹೆಗಳನ್ನು ಆಲಿಸಿರುವುದರಿಂದ ಸಂತಸವಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೆನ್ ಅವರು ರಾಜಸ್ಥಾನಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ಕೈಗೊಳ್ಳಲು ಸರಿಯಾದ ಸಮಯ ಇದು ಎಂದು ನನಗೆ ಅನಿಸುತ್ತದೆ‘ ಎಂದು ತಿಳಿಸಿದ್ದಾರೆ.‌ ಮಾಕೆನ್ ರಾಜಸ್ಥಾನ ಕಾಂಗ್ರೆಸ್‌ನ ಉಸ್ತುವಾರಿಯೂ ಹೌದು.

ಕೆಲವೇ ದಿನಗಳಲ್ಲಿ ರಾಜಸ್ಥಾನ ಸಂಪುಟದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ‘ಒಬ್ಬ ವ್ಯಕ್ತಿ, ಒಂದು ಸ್ಥಾನ‘ ಸೂತ್ರದಂತೆ ಸಚಿವ ಸ್ಥಾನ ಹಂಚಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸಂಪುಟ ವಿಸ್ತರಣೆಯಾಗಬೇಕು. ನಿಗಮ ಮಂಡಳಿಗಳಿಗೆ ನೇಮಕ ಪ್ರಕ್ರಿಯೆ ನಡೆಯಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಪೈಲಟ್ ಬಹುದಿನಗಳಿಂದ ಆಗ್ರಹಿಸುತ್ತಿದ್ದರು. ಪಕ್ಷಕ್ಕಾಗಿ ದುಡಿಯುತ್ತಿರುವ ತಮ್ಮ ಆಪ್ತ ಕಾರ್ಯಕರ್ತರಿಗೆ ಉತ್ತಮ ಸ್ಥಾನ ನೀಡಬೇಕೆಂದೂ ಒತ್ತಾಯಿಸುತ್ತಿದ್ದರು.

ಪೈಲಟ್ ಮತ್ತು ಅವರ ಬೆಂಬಲಿಗ ಶಾಸಕರು ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಕಳೆದ ವರ್ಷ ಬಂಡಾಯವೆದ್ದಿದ್ದರು. ಇದರಿಂದಾಗಿ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಅದಾದ ಬಳಿಕ ಗೆಹಲೋತ್ ಅವರು ಪಕ್ಷದ ಮುಖ್ಯಸ್ಥ ಮತ್ತು ಉಪಮುಖ್ಯಮಂತ್ರಿ ಸ್ಥಾನದಿಂದ ಪೈಲಟ್ ಅವರನ್ನು ವಜಾಗೊಳಿಸಿದ್ದರು. ಈ ವೇಳೆ ಹೈಕಮಾಂಡ್ ಮಧ್ಯಪ್ರವೇಶಿಸಿ ಬಿಕ್ಕಟ್ಟನ್ನು ಪರಿಹರಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು