ಗುರುವಾರ , ಅಕ್ಟೋಬರ್ 29, 2020
21 °C

ಕೃಷಿ ಕಾನೂನು ವಿರುದ್ಧ ಮುಂದುವರಿದ ಹೋರಾಟ: ಪಂಜಾಬ್‌ನಲ್ಲಿ ಟ್ರ್ಯಾಕ್ಟರ್‌ ರ್‍ಯಾಲಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೊಗಾ, ಪಂಜಾಬ್: ‘ಇತ್ತೀಚೆಗೆ ಅಂಗೀಕರಿಸಿರುವ ಮೂರು ಕೃಷಿ ಕಾನೂನುಗಳು ರೈತ ಪರವಾಗಿ ಇದ್ದದ್ದೇ ಆದಲ್ಲಿ, ರೈತರೇಕೆ ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ಪ್ರಶ್ನಿಸಿದ್ದಾರೆ. 

ಮೊಗಾ ಜಿಲ್ಲೆಯ ಬಧನಿ ಕಲಾಂನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ವಿವಾದಿತ ಮಸೂದೆಗಳನ್ನು ವಾಪಸ್ ಪಡೆಯುವುದಾಗಿ ಭರವಸೆ ನೀಡಿದರು. ಕೋವಿಡ್ ಸಾಂಕ್ರಾಮಿಕ ಹರಡಿರುವ ಈ ಹೊತ್ತಿನಲ್ಲಿ ಇಷ್ಟೊಂದು ಆತುರಾತುರವಾಗಿ ಮಸೂದೆಗಳನ್ನು ಅಂಗೀಕರಿಸಿದ ಅಗತ್ಯದ ಬಗ್ಗೆ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

‘ರೈತರ ಕಲ್ಯಾಣಕ್ಕಾಗಿ ಕಾನೂನುಗಳನ್ನು ತರಲಾಗಿದೆ ಎಂದು ಪ್ರಧಾನಿ ಹೇಳುತ್ತಿದ್ದಾರೆ. ನಿಜಕ್ಕೂ ಅವುಗಳನ್ನು ರೈತರಿಗಾಗಿಯೇ ಜಾರಿಗೊಳಿಸಿದ್ದರೆ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಏಕೆ ಚರ್ಚೆ ನಡೆಸಲಿಲ್ಲ? ರೈತರು ಈ ಕಾನೂನುಗಳಿಂದ ಸಂತಸಗೊಂಡಿದ್ದರೆ, ಅವರು ದೇಶದಾದ್ಯಂತ ಏಕೆ ಪ್ರತಿಭಟನೆಗೆ ಇಳಿದಿದ್ದಾರೆ’ ಎಂದು ರಾಹುಲ್ ಪ್ರಶ್ನಿಸಿದ್ದಾರೆ.


ಹೊಸ ಕೃಷಿ ಕಾನೂನು ವಿರೋಧಿಸಿ ಪಂಜಾಬ್‌ನ ಬಧನಿ ಕಲಾಂನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿಯ ವೇಳೆ ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ, ಸುನಿಲ್‌ ಜಖಾರ್‌, ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಮತ್ತಿತರರು ಟ್ರ್ಯಾಕ್ಟರ್‌ನಲ್ಲಿ ಸಾಗಿದರು –ಎಎಫ್‌ಪಿಚಿತ್ರ

ಭಾನುವಾರ ಬೆಳಿಗ್ಗೆ ಮೊಗಾಗೆ ಬಂದ ರಾಹುಲ್, ರಾಜ್ಯದಾದ್ಯಂತ ಹಮ್ಮಿಕೊಂಡಿರುವ ‘ಟ್ರ್ಯಾಕ್ಟರ್ ಜಾಥಾ’ಕ್ಕೆ ಚಾಲನೆ ನೀಡಿದರು. ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್, ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಸುನಿಲ್ ಜಕ್ಕರ್, ಪಕ್ಷದ ಪಂಜಾಬ್‌ ಉಸ್ತುವಾರಿ ಹರೀಶ್ ರಾವತ್ ಹಾಜರಿದ್ದರು. ‘ಕೃಷಿ ರಕ್ಷಿಸಿ ಯಾತ್ರೆ’ಯು (ಖೇತಿ ಬಚಾವೋ ಯಾತ್ರೆ) ಮೂರು ದಿನಗಳಲ್ಲಿ 50 ಕಿಲೊಮೀಟರ್ ದೂರ ಕ್ರಮಿಸಲಿದೆ.

ಸಭೆಯಲ್ಲಿ ಸಿಧು ಪ್ರತ್ಯಕ್ಷ

ಕಾಂಗ್ರೆಸ್ ಚಟುವಟಿಕೆಗಳಿಂದ ದೂರ ಉಳಿದಿದ್ದ ಮಾಜಿ ಸಚಿವ ಹಾಗೂ ಶಾಸಕ ನವಜೋತ್ ಸಿಂಗ್ ಸಿಧು ಅವರು ಭಾನುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಣಿಸಿಕೊಂಡರು.

‘ಕೃಷಿ ಕಾನೂನುಗಳನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರವನ್ನು ಬಂಡವಾಳಶಾಹಿಗಳು ಮುನ್ನಡೆಸುತ್ತಿದ್ದಾರೆ. ಅವರು ರೈತರ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ. ಯುರೋಪ್ ಹಾಗೂ ಅಮೆರಿಕದಲ್ಲಿ ವಿಫಲವಾಗಿರುವ ವ್ಯವಸ್ಥೆಯನ್ನು ಇಲ್ಲಿ ಜಾರಿಗೊಳಿಸುತ್ತಿದ್ದಾರೆ’ ಎಂದು ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

‘ಈ ಕಾನೂನುಗಳು 5 ಲಕ್ಷ ಕಾರ್ಮಿಕರು ಹಾಗೂ 30 ಸಾವಿರ ಕಮಿಷನ್ ಏಜೆಂಟರ ಮೇಲೆ ಪರಿಣಾಮ ಬೀರಲಿವೆ. ಆದ್ದರಿಂದ ಧಾನ್ಯಗಳು ಹಾಗೂ ಎಣ್ಣೆಬೀಜಗಳಿಗೆ ರಾಜ್ಯ ಸರ್ಕಾರವೇ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡಿ, ಧಾನ್ಯ ಸಂಗ್ರಹಕ್ಕೆ ಮೂಲಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಜತೆಗಿನ ವೈಮನಸ್ಯದಿಂದಾಗಿ ರಾಜೀನಾಮೆ ನೀಡಿದ್ದ ಸಿಧು, ಪಕ್ಷದ ಎಲ್ಲಾ ಚಟುವಟಿಕೆಗಳಿಂದ ದೂರವಿದ್ದರು. ಸಿಧು ಅವರನ್ನು ಅಮೃತಸರದ ಅವರ ನಿವಾಸದಲ್ಲಿ ಹರೀಶ್ ರಾವತ್ ಅವರು ಮೂರು ದಿನಗಳ ಹಿಂದೆ ಭೇಟಿ ಮಾಡಿ, ಜಾಥಾದಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಿದ್ದರು.

ಬಿಜೆಪಿಯಿಂದಲೂ ಟ್ರ್ಯಾಕ್ಟರ್ ರ್‍ಯಾಲಿ

ನವದೆಹಲಿ: ಕೃಷಿ ಕಾನೂನು ವಿರೋಧಿಸುತ್ತಿರುವ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ನಿರ್ಧರಿಸಿರುವ ಬಿಜೆಪಿ, ಟ್ರ್ಯಾಕ್ಟರ್ ಪೂಜೆ, ರ್‍ಯಾಲಿ ನಡೆಸಲು ಮುಂದಾಗಿದೆ.

ಅಕ್ಟೋಬರ್ 15ರವರೆಗೆ 365 ಗ್ರಾಮಗಳಲ್ಲಿ ಅಭಿಯಾನ ನಡೆಯಲಿದೆ. ಕೃಷಿ ಕಾನೂನುಗಳ ಬಗ್ಗೆ ಪ್ರತಿಪಕ್ಷಗಳು ಹೇಗೆ ರೈತರ ದಾರಿ ತಪ್ಪಿಸುತ್ತಿವೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು
ಪ್ರಧಾನ ಕಾರ್ಯದರ್ಶಿ ಕುಲ್‌ಜೀತ್ ಚಾಹಲ್ ತಿಳಿಸಿದ್ದಾರೆ.

‘ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚುವ ಮೂಲಕ ರೈತರಿಗೆ ಕಾಂಗ್ರೆಸ್ ಅಪಮಾನ ಮಾಡಿದೆ. ಬಿಜೆಪಿಯು ಟ್ರ್ಯಾಕ್ಟರ್‌ ಪೂಜೆ ಹಾಗೂ ರ್‍ಯಾಲಿ ಹಮ್ಮಿಕೊಂಡಿದೆ. ಈ ಮೂಲಕ ಟ್ರ್ಯಾಕ್ಟರ್‌ಗಳು ಕೃಷಿ ಸಮುದಾಯದ ಸಮೃದ್ಧಿಯ ಸಂಕೇತ ಎಂಬ ಸಂದೇಶ ರವಾನಿಸಲು ನಿರ್ಧರಿಸಿದೆ’ ಎಂದು ಪಕ್ಷ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು