1 ಲಕ್ಷ ಉದ್ಯೋಗ, ಉಚಿತ ವಿದ್ಯುತ್: ಹಿಮಾಚಲ ಪ್ರದೇಶ ಚುನಾವಣೆಗೆ ‘ಕೈ’ ಪ್ರಣಾಳಿಕೆ

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆಯಾಗಿದ್ದು, 1 ಲಕ್ಷ ಉದ್ಯೋಗ ಸೃಷ್ಟಿ, ಮನೆಗಳಿಗೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್, ಹಳೆಯ ಪಿಂಚಣಿ ಯೋಜನೆ ಮರು ಜಾರಿಯಂತಹ ನಿರ್ಧಾರಗಳನ್ನು ಪ್ರಕಟಿಸಿದೆ.
₹680 ಕೋಟಿ ಮೊತ್ತದ ನವೋದ್ಯಮ ನಿಧಿ ಸ್ಥಾಪನೆ, 18ರಿಂದ 60 ವರ್ಷದೊಳಗಿನ ಮಹಿಳೆಯರಿಗೆ ₹1,500 ಸಹಾಯಧನ ನೀಡುವ ಪ್ರಮುಖ ಅಂಶಗಳನ್ನು ಪ್ರಣಾಳಿಕೆ ಒಳಗೊಂಡಿದೆ. ರಾಜ್ಯದಲ್ಲಿ ಸೇಬು ಬೆಳೆಯ ಬೆಲೆ ನಿರ್ಧರಿಸಲು ಸೇಬು ಬೆಳೆಗಾರರನ್ನೊಳಗೊಂಡ ಸಮಿತಿ ರಚಿಸಲಾಗುವುದು ಎಂದು ಪ್ರಣಾಳಿಕೆ ಭರವಸೆ ನೀಡಿದೆ.
ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಸಮ್ಮುಖದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು. ಹಿಮಾಚಲ ಪ್ರದೇಶದ ಎಐಸಿಸಿ ಉಸ್ತುವಾರಿ ರಾಜೀವ್ ಶುಕ್ಲಾ, ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸುಖ್‌ವಿಂದರ್ ಸಿಂಗ್ ಶುಖು, ಎಐಸಿಸಿ ಕಾರ್ಯದರ್ಶಿಗಳಾದ ತೇಜಿಂದರ್ ಪಾಲ್ ಬಿಟ್ಟು ಮತ್ತು ಮನೀಶ್ ಚತ್ರನ್ ಅವರು ಈ ವೇಳೆ ಉಪಸ್ಥಿತರಿದ್ದರು.
ನ.12ರಂದು ನಡೆಯಲಿರುವ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಎದುರಿಸಲಿದ್ದು, ಚುನಾಯಿತ ಶಾಸಕರು ಹಾಗೂ ವರಿಷ್ಠರ ಜೊತೆ ಚರ್ಚಿಸಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ಕಾಂಗ್ರೆಸ್ ತಿಳಿಸಿದೆ.
ಹಳೆಯ ಪಿಂಚಣಿ ಯೋಜನೆ ಅನುಷ್ಠಾನ ಮಾಡುವಂತೆ ರಾಜಸ್ಥಾನ, ಛತ್ತೀಸಗಡ ರಾಜ್ಯಗಳು ಮಾಡಿದ್ದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದು ಬಘೆಲ್ ಹೇಳಿದರು. ಮತ್ತೆ ಕೇಂದ್ರಕ್ಕೆ ಪತ್ರ ಬರೆಯಲು ನಿರ್ಧರಿಸಿದ್ದು, ಯೋಜನೆ ಜಾರಿಗೆ ಕಾನೂನು ಸಲಹೆ ಪಡೆಯಲಾಗುವುದು ಎಂದು ಅವರು ತಿಳಿಸಿದರು.
5 ವರ್ಷಗಳಲ್ಲಿ ಬಿಜೆಪಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಮುಖ್ಯಸ್ಥ ಧಣಿರಾಮ್ ಶಾಂಡಿಲ್ ಅವರು ಆರೋಪಿಸಿದ್ದಾರೆ. ‘ಇದು ಕೇವಲ ಪ್ರಣಾಳಿಕೆಯಲ್ಲ. ಹಿಮಾಚಲ ಪ್ರದೇಶದ ಜನರ ಅಭಿವೃದ್ಧಿ ಹಾಗೂ ಕಲ್ಯಾಣಕ್ಕಾಗಿ ಸಿದ್ಧಪಡಿಸಿರುವ ಮುನ್ನೋಟ’ ಎಂದು ಅವರು ಹೇಳಿದ್ದಾರೆ.
ಸಮಾಜದ ಎಲ್ಲ ವರ್ಗದ ಜನರನ್ನು ಸಂಪರ್ಕಿಸಿ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ ಎಂದು ಶುಕ್ಲಾ ಅವರು ಹೇಳಿದರು. ರಾಜ್ಯದಲ್ಲಿ ಮಾದಕವಸ್ತು ಹಾವಳಿ ತಡೆಯಲು ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಮಾದಕವಸ್ತು ನಿಗ್ರಹ ಕಾರ್ಯಪಡೆ ರಚಿಸುವ ಭರವಸೆ ನೀಡಲಾಗಿದೆ ಎಂದರು.
ಪ್ರಣಾಳಿಕೆಯ ಇತರ ಅಂಶಗಳು
- ಟ್ಯಾಕ್ಸಿ ಚಾಲಕರಿಗೆ ಅಲ್ಪ ಬಡ್ಡಿದರದಲ್ಲಿ ಸಾಲ; ವಾಹನ ಪರ್ಮಿಟ್ ಅವಧಿ 15 ವರ್ಷಕ್ಕೆ ವಿಸ್ತರಣೆ
- ಅಧಿಕಾರಿಗಳಿಗೆ ತೊಂದರೆ ಕೊಡುವ ಉದ್ದೇಶದಿಂದ ಸರ್ಕಾರ ಮಾಡಿದ್ದ ಎಲ್ಲ ವರ್ಗಾವಣೆ ರದ್ದು
- ಪತ್ರಕರ್ತರಿಗೆ ಪಿಂಚಣಿ ಯೋಜನೆ ಜಾರಿ
- ಬಂದೂಕು ಪರವಾನಗಿ ಶುಲ್ಕ ಇಳಿಕೆ
- ರಾಜ್ಯ ಸರ್ಕಾರದ ಸಾಲದ ಹೊರೆ ತಗ್ಗಿಸುವುದು
ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ: ಅನುರಾಗ್
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ಟೀಕಿಸಿದ್ದಾರೆ. ಸ್ವತಃ ಯಾವುದೇ ಖಾತರಿ ಇಲ್ಲದ ಪಕ್ಷವೊಂದು ನೀಡಿರುವ ಭರವಸೆಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಅವರು ವ್ಯಂಗ್ಯ ಮಾಡಿದ್ದಾರೆ.
‘ಮನೆಗೊಂದು ಉದ್ಯೋಗ ನೀಡುವುದಾಗಿ 2003ರಲ್ಲಿ ಕಾಂಗ್ರೆಸ್ ಹೇಳಿತ್ತು. ಕೆಲಸ ಸಿಕ್ಕಿತಾ? ಇಲ್ಲ. ಮತ್ತೆ 2012ರಲ್ಲಿ ನಿರುದ್ಯೋಗ ಭತ್ಯೆ ನೀಡುವುದಾಗಿ ಹೇಳಿತ್ತು. ಆದರೆ ಆ ಭರವಸೆ ಈಡೇರಿಸಲಿಲ್ಲ. ಅವರು ಕೆಲಸವನ್ನೂ ನೀಡಲಿಲ್ಲ, ಭತ್ಯೆಯನ್ನೂ ನೀಡಲಿಲ್ಲ’ ಎಂದು ಚಿಂತಪುರನಿ ಎಂಬಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಠಾಕೂರ್ ಆರೋಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.