ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಪರಿಹಾರ ಮೂಡದ ಒಮ್ಮತ

ಅ. 12 ಮತ್ತೆ ಮಂಡಳಿ ಸಭೆ
Last Updated 5 ಅಕ್ಟೋಬರ್ 2020, 19:10 IST
ಅಕ್ಷರ ಗಾತ್ರ

ನವದೆಹಲಿ: ಜಿಎಸ್‌ಟಿ ವ್ಯವಸ್ಥೆ ಹಾಗೂ ಕೋವಿಡ್–19 ಸಾಂಕ್ರಾಮಿಕದ ಪರಿಣಾಮವಾಗಿ ರಾಜ್ಯಗಳಿಗೆ ಆಗಿರುವ ತೆರಿಗೆ ಕೊರತೆಯನ್ನು ಭರ್ತಿ ಮಾಡಿಕೊಡುವ ಬಗೆಯ ಕುರಿತು ಸೋಮವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಒಮ್ಮತ ಮೂಡಿಲ್ಲ. ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ಹತ್ತು ರಾಜ್ಯಗಳು, ಪರಿಹಾರದ ಮೊತ್ತವನ್ನು ಪೂರ್ತಿಯಾಗಿ ನೀಡಬೇಕು, ಅದಕ್ಕೆ ಬೇಕಿರುವ ಹಣವನ್ನು ಕೇಂದ್ರವೇ ಒಗ್ಗೂಡಿಸಬೇಕು ಎಂದು ಆಗ್ರಹಿಸಿವೆ.

ಜಿಎಸ್‌ಟಿ ವ್ಯವಸ್ಥೆಯಿಂದ ರಾಜ್ಯಗಳ ಆದಾಯದಲ್ಲಿ ಆಗುವ ಕೊರತೆಯನ್ನು ಭರ್ತಿ ಮಾಡಿಕೊಡಲು ಕೆಲವು ಉತ್ಪನ್ನಗಳ ಮೇಲೆ ವಿಧಿಸುವ ಸೆಸ್‌ಅನ್ನು 2022ರ ನಂತರವೂ ಮುಂದುವರಿಸಲು ಮಂಡಳಿ ತೀರ್ಮಾನಿಸಿದೆ.

ಕೆಲವು ರಾಜ್ಯಗಳು ‘ನಮ್ಮನ್ನು ಹಗುರವಾಗಿ ಪರಿಗಣಿಸಬೇಡಿ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹೇಳಿವೆ. ಜಿಎಸ್‌ಟಿ ಕೊರತೆ ಭರ್ತಿ ವಿಚಾರವಾಗಿ ಯಾವುದೇ ತೀರ್ಮಾನ ಆಗದ ಕಾರಣ, ಆ ವಿಚಾರವನ್ನು ಅಕ್ಟೋಬರ್ 12ರಂದು ನಡೆಯುವ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಯಿತು. ಆದರೆ, ಸೆಸ್‌ ಮೂಲಕ ಈ ವರ್ಷ ಸಂಗ್ರಹವಾಗಿರುವ ₹ 20 ಸಾವಿರ ಕೋಟಿಯನ್ನು ರಾಜ್ಯಗಳಿಗೆ ಸೋಮವಾರ ರಾತ್ರಿಯೇ ವರ್ಗಾವಣೆ ಮಾಡಲಾಗುವುದು ಎಂದು ನಿರ್ಮಲಾ ಹೇಳಿದರು.

‘ನಮ್ಮನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ನನಗೆ ನೆನಪಿಸಿಕೊಡಲಾಯಿತು. ನಾನು ಯಾರನ್ನೂ ಆ ರೀತಿ ಪರಿಗಣಿಸುವುದಿಲ್ಲ. ಹೆಚ್ಚಿನ ಮಾತುಕತೆಗಳಿಗೆ ನಾನು ಮುಕ್ತವಾಗಿದ್ದೇನೆ’ ಎಂದು ನಿರ್ಮಲಾ ಹೇಳಿದರು.ಜಿಎಸ್‌ಟಿ ಪರಿಹಾರ ಮೊತ್ತವನ್ನು ಸಾಲದ ಮೂಲಕ ಪಡೆಯಲು ತೀರ್ಮಾನಿಸಿರುವ ರಾಜ್ಯಗಳು ಕೂಡ ಸಾಲ ಪಡೆಯುವ ವಿಚಾರವಾಗಿ ಮುಂದಡಿ ಇರಿಸಲು ಮುಂದಿನ ಸಭೆಯಲ್ಲಿ ಆಗುವ ತೀರ್ಮಾನಕ್ಕೆ ಕಾಯಬೇಕಿದೆ.

ಕೇಂದ್ರವು ರಾಜ್ಯಗಳಿಗೆ ₹ 97 ಸಾವಿರ ಕೋಟಿಯನ್ನು ಆರ್‌ಬಿಐನಿಂದ ಸಾಲವಾಗಿ ಪಡೆಯುವ ಒಂದು ಆಯ್ಕೆಯನ್ನು ನೀಡಿತ್ತು. ಈ ಮೊತ್ತ
ವನ್ನು ಪರಿಷ್ಕರಿಸಲಾಗಿದ್ದು, ₹ 1.10 ಲಕ್ಷ ಕೋಟಿಯನ್ನು ಸಾಲವಾಗಿ ಪಡೆಯಬಹುದು ಎಂದು ಹೇಳಿದೆ. ಕರ್ನಾಟಕದ ಪಾಲಿಗೆ ಬರಬೇಕಿರುವ ಪರಿಹಾರ ಮೊತ್ತ ₹ 13 ಸಾವಿರ ಕೋಟಿ.

ವಾರ್ಷಿಕ ವಹಿವಾಟು ₹ 5 ಕೋಟಿಗಿಂತ ಕಡಿಮೆ ಇರುವ ಜಿಎಸ್‌ಟಿ ತೆರಿಗೆ ಪಾವತಿದಾರರು ಇನ್ನು ಮುಂದೆ ಪ್ರತಿ ತಿಂಗಳು ತೆರಿಗೆ ವಿವರ ಸಲ್ಲಿಸಬೇಕಾಗಿಲ್ಲ ಎಂಬ ತೀರ್ಮಾನವನ್ನು ಮಂಡಳಿ ಕೈಗೊಂಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತು ಆ್ಯಂಟ್ರಿಕ್ಸ್‌ ಕಂಪನಿ ಒದಗಿಸುವ ಉಪಗ್ರಹ ಉಡಾವಣೆ ಸೇವೆಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರಿಸಲು ತೀರ್ಮಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT