ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ್ರೋಹ ಕಾನೂನು: ಕೇಂದ್ರದ ಪ್ರತಿಕ್ರಿಯೆ ಕೇಳಿದ ‘ಸುಪ್ರೀಂ’

Last Updated 1 ಮೇ 2021, 21:14 IST
ಅಕ್ಷರ ಗಾತ್ರ

ನವದೆಹಲ: ‘ದೇಶದ್ರೋಹ’ದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ದೇಶದ್ರೋಹವನ್ನು ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ 124ಎ ವಿಧಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಯು.ಯು. ಲಲಿತ್, ಇಂದಿರಾ ಬ್ಯಾನರ್ಜಿ ಮತ್ತು ಕೆ.ಎಂ. ಜೋಸೆಫ್ ಅವರ ಪೀಠವು ವಿಚಾರಣೆ ನಡೆಸಿತು.

ಪತ್ರಕರ್ತರಾದ ಮಣಿಪುರದ ಕಿಶೋರ್‌ಚಂದ್ರ ವಾಂಗ್‌ಖೇಮ್ಚಾ ಮತ್ತು ಛತ್ತೀಸಗಡದ ಕನ್ಹಯ್ಯ ಲಾಲ್ ಶುಕ್ಲಾ ಅವರು ಅರ್ಜಿ ಸಲ್ಲಿಸಿದ್ದರು. 1860ರ ಈ ಕಾಯ್ದೆಯನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರ್ಟ್‌ಗೆ ಒತ್ತಾಯಿಸಿದ್ದರು.

ಅರ್ಜಿದಾರರು ತಮ್ಮ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರಶ್ನೆ ಎತ್ತಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಕಾಮೆಂಟ್‌ಗಳು ಮತ್ತು ವ್ಯಂಗ್ಯಚಿತ್ರಗಳಿಗಾಗಿ ತಮ್ಮ ಮೇಲೆ 124 ಎ ವಿಧಿ ಅಡಿಯಲ್ಲಿ ದೇಶದ್ರೋಹದ ಆರೋಪ ಹೊರಿಸಲಾಗಿದೆ ಎಂದು ತಿಳಿಸಿದ್ದಾರೆ.

1962ರಿಂದಲೂ ಈ ವಿಧಿಯನ್ನು ಸತತವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರಸ್ತುತ ಕಾನೂನಿನಲ್ಲಿರುವ ಅಸ್ಪಷ್ಟತೆಯ ಲಾಭ ಪಡೆಯಲಾಗುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಜಗತ್ತಿನಾದ್ಯಂತ ವಸಾಹತುಶಾಹಿ ನಂತರದ ಪ್ರಜಾಪ್ರಭುತ್ವವಾದಿ ದೇಶಗಳು, ದೇಶದ್ರೋಹದ ವಿಧಿಗಳನ್ನು ರದ್ದುಗೊಳಿಸಿವೆ. ಭಾರತವು ತನ್ನನ್ನು ‘ಪ್ರಜಾಪ್ರಭುತ್ವವಾದಿ’ ದೇಶ ಎಂದು ಕರೆದುಕೊಳ್ಳುತ್ತದೆ. ಆದರೆ ದೇಶದ್ರೋಹದ ಅಪರಾಧವನ್ನು ‘ಪ್ರಜಾಪ್ರಭುತ್ವ ವಿರೋಧಿ’, ಅನಪೇಕ್ಷಿತ ಮತ್ತು ಅನಗತ್ಯವೆಂದುಪ್ರಪಂಚದಾದ್ಯಂತ ಖಂಡಿಸಲಾಗುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ.

1962ರಲ್ಲಿ ಕೇದಾರನಾಥ್ ಸಿಂಗ್ ವರ್ಸಸ್ ಬಿಹಾರ ರಾಜ್ಯದ ಪ್ರಕರಣದಲ್ಲಿ ಕಾನೂನಿನ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದ ತೀರ್ಪನ್ನು ಅರ್ಜಿದಾರರು ಉಲ್ಲೇಖಿಸಿದ್ದಾರೆ. ಸುಮಾರು ಆರು ದಶಕಗಳ ಹಿಂದೆ ನ್ಯಾಯಾಲಯಕ್ಕೆ ಕಾನೂನು ಸರಿ ಕಂಡಿರಬಹುದು. ಆದರೆ ಆ ಕಾನೂನು ಇಂದು ಸಾಂವಿಧಾನಿಕ ಮೌಲ್ಯ ಹೊಂದಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT