ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯೋಧ್ಯೆಯ ಮಸೀದಿ ನಿರ್ಮಾಣಕ್ಕೆ ಸಿಗುತ್ತಿಲ್ಲ 'ಎನ್‌ಒಸಿ'

Last Updated 3 ಸೆಪ್ಟೆಂಬರ್ 2022, 1:33 IST
ಅಕ್ಷರ ಗಾತ್ರ

ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯ ನಿಗದಿತ ಜಾಗದಲ್ಲಿ ಮಸೀದಿ ನಿರ್ಮಾಣ ಮಾಡಲು ಅವಕಾಶ ನೀಡಿ ಸುಪ್ರೀಂ ಕೋರ್ಟ್ ಆದೇಶ ನೀಡಿ ಸುಮಾರು ಮೂರು ವರ್ಷಗಳೇ ಕಳೆದಿವೆ. ಆದರೆ, ಅಗ್ನಿಶಾಮಕ ಸೇವೆಗಳು, ಮಾಲಿನ್ಯ ಮಂಡಳಿ ಮತ್ತು ನಾಗರಿಕ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರಗಳು (ಎನ್‌ಒಸಿ) ದೊರೆಯದ ಕಾರಣ ನಿರ್ಮಾಣ ಕಾರ್ಯ ವಿಳಂಬವಾಗುತ್ತಲೇ ಇದೆ.

ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಮಸೀದಿ ನಿರ್ಮಾಣಕ್ಕಾಗಿ ‘ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌’ಗೆ ಧನ್ನಿಪುರ ಗ್ರಾಮದಲ್ಲಿ ಐದು ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ.

ಮಂಡಳಿಯು ಮಸೀದಿ, ಆಸ್ಪತ್ರೆ ಮತ್ತು ವಸ್ತು ಸಂಗ್ರಹಾಲಯ ನಿರ್ಮಾಣಕ್ಕಾಗಿ ‘ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್‌) ಟ್ರಸ್ಟ್’ ಅನ್ನು ಸ್ಥಾಪಿಸಿದೆ. .

ಮಸೀದಿ ನಿರ್ಮಾಣಕ್ಕೆ ಎನ್‌ಒಸಿ ನೀಡಿ ಎಂದು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಜುಲೈ 15ರಂದು ಅಗ್ನಿಶಾಮಕ ಸೇವೆಗಳು, ನಾಗರಿಕ ವಿಮಾನಯಾನ, ಅಯೋಧ್ಯೆ ಮುನ್ಸಿಪಲ್ ಕಾರ್ಪೊರೇಷನ್, ನೀರಾವರಿ, ಲೋಕೋಪಯೋಗಿ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಡಳಿತ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ ಎಂದು ಐಐಸಿಎಫ್ ಕಾರ್ಯದರ್ಶಿ ಆಥರ್ ಹುಸೇನ್ ಸಿದ್ದಿಕಿ ಹೇಳಿದ್ದಾರೆ.

ಅಗ್ನಿಶಾಮಕ ದಳ ಹೊರತುಪಡಿಸಿ ಉಳಿದ ಯಾವುದೇ ಇಲಾಖೆಯೂ ಸ್ಥಳ ಪರಿಶೀಲನೆ ನಡೆಸಿಲ್ಲ. ಯಾವ ಇಲಾಖೆಗಳು ಎನ್‌ಒಸಿ ನೀಡಿಲ್ಲ ಎಂದು ಹುಸೇನ್‌ ಶುಕ್ರವಾರ ಪಿಟಿಐಗೆ ತಿಳಿಸಿದ್ದಾರೆ.

ಉದ್ದೇಶಿತ ಮಸೀದಿಗೆ ತಲುಪುವ ಕಿರಿದಾದ ರಸ್ತೆಯ ಬಗ್ಗೆ ಪ್ರಶ್ನೆ ಮಾಡಿರುವ ಅಗ್ನಿಶಾಮಕ ಸೇವಾ ಇಲಾಖೆ ಎನ್‌ಒಸಿ ನಿರಾಕರಿಸಿದೆ. ‘ಮಸೀದಿ ತಲುಪುವ ರಸ್ತೆಯು 12-ಮೀಟರ್ ಅಗಲವಾಗಿರಬೇಕು. ಆದರೆ, ಅಸ್ತಿತ್ವದಲ್ಲಿರುವ ಎರಡೂ ರಸ್ತೆಗಳು ಆರು ಮೀಟರ್‌ ಮೀರಿಲ್ಲ. ಮುಖ್ಯ ಮಾರ್ಗದ ಅಗಲವು ಕೇವಲ ನಾಲ್ಕು ಮೀಟರ್‌ಗಳಿವೆ ಎಂದು ಅಗ್ನಿಶಾಮಕ ಇಲಾಖೆ ಹೇಳಿರುವುದಾಗಿ ಹುಸೇನ್ ಮಾಹಿತಿ ನೀಡಿದ್ದಾರೆ.

ಅಗಲವಾದ ರಸ್ತೆಯನ್ನು ಆದಷ್ಟು ಬೇಗ ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ ಮತ್ತು ಅಯೋಧ್ಯಾ ಆಡಳಿತವನ್ನು ಹುಸೇನ್‌ ವಿನಂತಿಸಿದ್ದಾರೆ.

ಅಯೋಧ್ಯೆಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಆರ್.ಕೆ.ರೈ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಮಸೀದಿ ತಲುಪುವ ರಸ್ತೆಯು ಕಿರಿದಾಗಿರುವ ಕಾರಣ ಅಗ್ನಿಶಾಮಕ ಇಲಾಖೆಯು ಅಯೋಧ್ಯೆ ಮಸೀದಿ ಯೋಜನೆಗೆ ಎನ್‌ಒಸಿ ನೀಡುವುದನ್ನು ತಡೆಹಿಡಿದಿದೆ. ‘ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್‌ ಟ್ರಸ್ಟ್‌ಗೆ’ ಇಲಾಖೆ ಪತ್ರ ಬರೆದಿದ್ದು, 12 ಮೀಟರ್ ಅಗಲದ ರಸ್ತೆಗಳಿದ್ದರೆ ಮಾತ್ರ ಎನ್‌ಒಸಿ ನೀಡಲಾಗುವುದಾಗಿ ಸ್ಪಷ್ಟಪಡಿಸಲಾಗಿದೆ’ ಎಂದರು.

2019ರ ನವೆಂಬರ್ 9 ರಂದು ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದದಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಿತ್ತು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿದ್ದ ಕೋರ್ಟ್‌, ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ ಐದು ಎಕರೆ ಭೂಮಿಯನ್ನು ಮಂಜೂರು ಮಾಡಿತು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT