ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಕೋವಿಡ್‌ ಏರಿಕೆಯ ಕಳವಳ, ಮಹಾರಾಷ್ಟ್ರದ ಸ್ಥಿತಿ ಆತಂಕಕಾರಿ

ಒಂದೇ ದಿನ 22,854 ಪ್ರಕರಣ
Last Updated 11 ಮಾರ್ಚ್ 2021, 19:57 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ ಆಗಿರುವುದು ಕಳವಳಕ್ಕೆ ಕಾರಣವಾಗಿದೆ. 22,854 ಪ್ರಕರಣಗಳು ಗುರುವಾರ ದೃಢಪಟ್ಟಿವೆ. ಕಳೆದ ಡಿಸೆಂಬರ್‌ 24ರಂದು 23,067 ಪ್ರಕರಣಗಳು ವರದಿಯಾಗಿದ್ದವು. ಅದಾದ ಬಳಿಕ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಲೇ ಸಾಗಿತ್ತು. ಈಗ, ಮಹಾರಾಷ್ಟ್ರ, ಪಂಜಾಬ್, ಗುಜರಾತ್‌, ಮಧ್ಯಪ್ರದೇಶ ಮತ್ತು ಹರಿಯಾಣದಲ್ಲಿ ಕೋವಿಡ್‌ ಬಾಧಿತರ ಸಂಖ್ಯೆ ಏರುಗತಿಯಲ್ಲಿದೆ.

ಅತಿ ಹೆಚ್ಚು ಕೋವಿಡ್‌ ಪ್ರಕರಣಗಳು ಇರುವ ಹತ್ತು ಜಿಲ್ಲೆಗಳಲ್ಲಿ ಬೆಂಗಳೂರು ನಗರ ಮತ್ತು ಕೇರಳದ ಎರ್ನಾಕುಲಂ ಸೇರಿವೆ. ಉಳಿದ ಎಂಟು ಜಿಲ್ಲೆಗಳು ಮಹಾರಾಷ್ಟ್ರದ್ದಾಗಿವೆ. ಪುಣೆ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 18,474 ಸಕ್ರಿಯ ಪ್ರಕರಣಗಳು ಇವೆ. ನಾಗಪುರ (12,724), ಠಾಣೆ (10,460), ಮುಂಬೈ (9,973) ನಂತರದ ಸ್ಥಾನಗಳಲ್ಲಿವೆ. ಐದು ಮತ್ತು ಆರನೇ ಸ್ಥಾನಗಳಲ್ಲಿ ಕ್ರಮವಾಗಿ ಬೆಂಗಳೂರು ನಗರ (5,526) ಮತ್ತು ಎರ್ನಾಕುಲಂ (5,430) ಜಿಲ್ಲೆಗಳಿವೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು ಇರುವ ಇತರ ಜಿಲ್ಲೆಗಳೆಂದರೆ ಅಮರಾವತಿ (5,259), ಜಲಗಾಂವ್‌ (5,029), ನಾಸಿಕ್‌ (4,525) ಮತ್ತು ಔರಂಗಾಬಾದ್‌ (4,354).

ಮಹಾರಾಷ್ಟ್ರದಲ್ಲಿ ಇದೇ ಫೆಬ್ರುವರಿ 11ರಂದು 36,917 ಸಕ್ರಿಯ ಪ್ರಕರಣಗಳಷ್ಟೇ ಇದ್ದವು. ನಂತರದ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಸಾಗಿದೆ. ಈಗ, ಅಲ್ಲಿ‌ನ ಸಕ್ರಿಯ ಪ್ರಕರಣಗಳ ಸಂಖ್ಯೆಯು ಒಂದು ಲಕ್ಷ ದಾಟಿದೆ.

‘ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿನ ಸ್ಥಿತಿಯು ಕಳವಳಕ್ಕೆ ಕಾರಣವಾಗಿದೆ. ಈ ವೈರಸ್‌ ಅನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಹೆಚ್ಚು ಪ್ರಕರಣಗಳು ಇರುವ ಜಿಲ್ಲೆಗಳಲ್ಲಿ ಲಸಿಕೆ ನೀಡಿಕೆಯು ಆದ್ಯತೆಯಾಗಬೇಕಿದೆ’ ಎಂದು ನೀತಿ ಆಯೋಗದ ಸದಸ್ಯ ವಿನೋದ್‌ ಪಾಲ್‌ ಹೇಳಿದ್ದಾರೆ.

ಕೇರಳದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚು ಇದೆ. ಆದರೆ, ಏರಿಕೆ ಪ್ರಮಾಣವು ಇಳಿಕೆಯಾಗುತ್ತಿದೆ ಎಂಬುದು ಸಮಾಧಾನಕರ ಸಂಗತಿ. ಫೆಬ್ರುವರಿ 11ರಂದು ಇಲ್ಲಿ 64,607 ಪ್ರಕರಣಗಳಿದ್ದವು. ಈಗ ಅದು 35,715ಕ್ಕೆ ಇಳಿದಿದೆ. ಇಲ್ಲಿ ಕೋವಿಡ್ ಹರಡುವಿಕೆ‌ ತಡೆಗೆ ಕೈಗೊಂಡ ಕ್ರಮಗಳನ್ನು ಶ್ಲಾಘಿಸಲೇಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಹೇಳಿದ್ದಾರೆ.

ರೂಪಾಂತರ ವೈರಸ್‌ ಕಾರಣ ಅಲ್ಲ
ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗಲು ರೂಪಾಂತರಿತ ವೈರಸ್‌ ಕಾರಣ ಅಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

‘ರೂಪಾಂತರಿತ ವೈರಸ್‌ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿಲ್ಲ. ಪರೀಕ್ಷೆ ಸಂಖ್ಯೆ ಕಡಿಮೆ ಆಗಿರುವುದು, ನಿಗಾ ವ್ಯವಸ್ಥೆಯಲ್ಲಿ ನಿರ್ಲಕ್ಷ್ಯ, ಕೋವಿಡ್‌ ತಡೆಗೆ ಪೂರಕವಲ್ಲದ ವರ್ತನೆ, ಜನರು ಗುಂಪು ಸೇರುವುದರಲ್ಲಿ ಆಗಿರುವ ಹೆಚ್ಚಳ, ರೈಲು ಸೇವೆ‍ಪುನರಾರಂಭ ಮುಂತಾದವುಗಳು ಪ್ರಕರಣಗಳ ಏರಿಕೆಗೆ ಕಾರಣ ಆಗಿರಬಹುದು’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ನ ಮಹಾನಿರ್ದೇಶಕ ಬಲರಾಂ ಬಾರ್ಗವ ಹೇಳಿದ್ದಾರೆ.

ಕೇಂದ್ರದ ಪರಿಣತರ ತಂಡಗಳು ಫೆಬ್ರುವರಿಯಿಂದಲೇ ಮಹಾರಾಷ್ಟ್ರಕ್ಕೆ ಬೇಟಿ ನೀಡುತ್ತಿವೆ. ಪ್ರಕರಣಗಳ ಏರಿಕೆಗೆ ಕಾರಣವೇನು ಎಂಬುದನ್ನು ಗುರುತಿಸಲು ಈ ತಂಡಗಳಿಗೆ ಸಾಧ್ಯವಾಗಿಲ್ಲ. ‘ಕೋವಿಡ್‌ ಹರಡುವಿಕೆ ತಡೆಗೆ ಪೂರಕವಾದ ವರ್ತನೆಯು ಸಡಿಲವಾಗಿರುವುದು ಮಹಾರಾಷ್ಟ್ರಕ್ಕೆ ಸೀಮಿತವಾದ ವಿಚಾರ ಅಲ್ಲ. ಹಾಗಾಗಿ, ಏರಿಕೆಗೆ ಕಾರಣ ತಿಳಿದಿಲ್ಲ’ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿಯೊಂದು ಹೇಳಿದೆ.

ಮಹಾರಾಷ್ಟ್ರದ ರೀತಿಯಲ್ಲಿ ಬೇರೆ ಯಾವ ರಾಜ್ಯದಲ್ಲಿಯೂ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿಲ್ಲ.

ರಾಜ್ಯದಲ್ಲೂ ಕೋವಿಡ್‌ ಏರುಗತಿ
ಬೆಂಗಳೂರು:
ರಾಜ್ಯದಲ್ಲಿಯೂ ಸೋಂಕಿತರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದ್ದು, ಗುರುವಾರ ಹೊಸದಾಗಿ 783 ಜನರಲ್ಲಿ ಕೋವಿಡ್‌ ದೃಢಪಟ್ಟಿದೆ.

ಎರಡು ವಾರಗಳಿಂದ ಸರಾಸರಿ 500 ಪ್ರಕರಣಗಳು ವರದಿಯಾಗುತ್ತಿದ್ದರೆ, ಎರಡು ದಿನಗಳಿಂದ 700ಕ್ಕೂ ಹೆಚ್ಚು ಪ್ರಕರಣಗಳು ದೃಢಪಡುತ್ತಿವೆ. ಅಲ್ಲದೆ, ಐದು ಸಾವಿರದ ಆಸುಪಾಸಿನಲ್ಲಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆಯು 7 ಸಾವಿರಕ್ಕಿಂತ (7,831) ಹೆಚ್ಚಾಗಿದೆ.

ಈ ತಿಂಗಳ 11 ದಿನಗಳ ಅವಧಿಯಲ್ಲಿ 6,333 ಮಂದಿ ಕೋವಿಡ್‌ ಪೀಡಿತರಾಗಿರುವುದು ದೃಢಪಟ್ಟಿದೆ.

ಈವರೆಗೆ ಒಟ್ಟಾರೆ 9.57 ಲಕ್ಷ ಪ್ರಕರಣಗಳು ವರದಿಯಾಗಿದ್ದು, 9.37 ಲಕ್ಷ ಮಂದಿ ಕೋವಿಡ್‌ನಿಂದ ಮುಕ್ತರಾಗಿದ್ದಾರೆ. ಗುರುವಾರ ಬೆಂಗಳೂರು ನಗರ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಕೋವಿಡ್‌ಗೆ ಬಲಿಯಾದವರ ಸಂಖ್ಯೆ 12,381ಕ್ಕೆ ಏರಿದೆ. ರಾಜಧಾನಿಯಲ್ಲಿ 492 ಹಾಗೂ ಮೈಸೂರಿನಲ್ಲಿ 50 ಪ್ರಕರಣಗಳು ವರದಿಯಾಗಿವೆ.

7,388 ಮಂದಿಗೆ ಲಸಿಕೆ: ಎರಡನೇ ಹಂತದ ಕೊರೊನಾ ಲಸಿಕೆ ಅಭಿಯಾನದಲ್ಲಿ ಗುರುವಾರ 6,169 ಹಿರಿಯ ನಾಗರಿಕರು, 1,219 ಮಂದಿ 45 ವರ್ಷ ಮೇಲ್ಪಟ್ಟವರು ಸೇರಿದಂತೆ 7,388 ಸಾರ್ವಜನಿಕರು ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಶಿವಮೊಗ್ಗ: ಆಫ್ರಿಕಾ ವೈರಸ್‌ ಪತ್ತೆ
ಶಿವಮೊಗ್ಗ:
ದುಬೈನಿಂದ ಬಂದಿದ್ದ ಶಿವಮೊಗ್ಗದ ಜೆ.ಸಿ. ನಗರದ ವ್ಯಕ್ತಿಯೊಬ್ಬರಿಗೆ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದ ರೂಪಾಂತರ ಕೊರೊನಾ ವೈರಸ್‌ ಇರುವುದು ದೃಢಪಟ್ಟಿದೆ.

ಭಾರತಕ್ಕೆ ವಾರದ ಹಿಂದೆ ಬಂದಿದ್ದ ಅವರಿಗೆ ಕೋವಿಡ್‌ ಇರುವುದು ಪತ್ತೆಯಾಗಿತ್ತು. ‘ಜೆನೆಟಿಕ್ ಸೀಕ್ವೆನ್ಸ್‌’ನಲ್ಲಿ ದಕ್ಷಿಣ ಆಫ್ರಿಕಾ ವೈರಸ್ ಇರುವುದು ಖಚಿತವಾಗಿದೆ.

‘ಸೋಂಕಿತ ವ್ಯಕ್ತಿಯ ಪತ್ನಿ, ಪುತ್ರ ಹಾಗೂ ಇತರೆ 7 ಜನರ ಗಂಟಲಿನ ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಪತ್ನಿ ಹಾಗೂ ಪುತ್ರನ ವರದಿ ನೆಗೆಟಿವ್ ಬಂದಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT